ತ್ರಿವಿಧ ದಾಸೋಹ ಪಿತಾಮಹ ಜಯದೇವ ಜಗದ್ಗುರು: ಡಾ.ಬಸವಪ್ರಭು ಶ್ರೀ ಶ್ಲಾಘನೆ

KannadaprabhaNewsNetwork |  
Published : Sep 20, 2025, 01:00 AM IST
ಕ್ಯಾಪ್ಷನ19ಕೆಡಿವಿಜಿ48 ದಾವಣಗೆರೆಯಲ್ಲಿ ನಡೆದ ಲಿಂ.ಜಯದೇವ ಜಗದ್ಗುರುಗಳ ಸ್ಮರಣೋತ್ಸವ ಕಾರ್ಯಕ್ರಮವನ್ನು ಡಾ.ಬಸವಪ್ರಭು ಸ್ವಾಮೀಜಿ ಜಗದ್ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಯದೇವ ಜಗದ್ಗುರು ಶ್ರೀ ಮುರುಘರಾಜೇಂದ್ರ ಶ್ರೀಗಳು ಅಂದಿನ ಕಾಲದಲ್ಲಿಯೇ ಆಯಾ ಊರಿನ ಜನರಿಂದ ಪಡೆದ ಕಾಣಿಕೆಯನ್ನು ಅದೇ ಸ್ಥಳದಲ್ಲೇ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ, ವಿದ್ಯಾ ಪ್ರಸಾರವನ್ನು ಮಾಡಿದರು ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದಿದ್ದಾರೆ.

- ಶಿವಯೋಗಿ ಮಂದಿರ ಸಭಾಂಗಣದಲ್ಲಿ 69ನೇ ಸ್ಮರಣೋತ್ಸವ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಜಯದೇವ ಜಗದ್ಗುರು ಶ್ರೀ ಮುರುಘರಾಜೇಂದ್ರ ಶ್ರೀಗಳು ಅಂದಿನ ಕಾಲದಲ್ಲಿಯೇ ಆಯಾ ಊರಿನ ಜನರಿಂದ ಪಡೆದ ಕಾಣಿಕೆಯನ್ನು ಅದೇ ಸ್ಥಳದಲ್ಲೇ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ, ವಿದ್ಯಾ ಪ್ರಸಾರವನ್ನು ಮಾಡಿದರು ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದರು.

ನಗರದ ಶಿವಯೋಗಿ ಮಂದಿರ ಸಭಾಂಗಣದಲ್ಲಿ ಶುಕ್ರವಾರ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್ ವಿರಕ್ತ ಮಠದ ಸಹಯೋಗದಲ್ಲಿ ನಡೆದ ಬಸವ ಚೇತನ, ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿಯವರ 69ನೇ ಸ್ಮರಣೋತ್ಸವ ಕಾರ್ಯಕ್ರಮವನ್ನು ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶತಮಾನದ ಹಿಂದೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಸಂದರ್ಭದಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡು ನಾಡು ತಿರುಗಿ ದೇಣಿಗೆ ಸಂಗ್ರಹಿಸಿದ್ದರು. ನಾಡಿನಲ್ಲಿ ಮೊದಲ ಬಾರಿಗೆ ತ್ರಿವಿಧ ದಾಸೋಹ ಪ್ರಾರಂಭಿಸಿದ ಕೀರ್ತಿ ಚಿತ್ರದುರ್ಗದ ಮುರುಘಾ ಮಠಕ್ಕೆ ಸಲ್ಲುತ್ತದೆ. 19ನೇ ಶತಮಾನದಲ್ಲಿ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಉದಯಿಸದೇ ಇದ್ದಿದ್ದರೆ ಇವತ್ತು ದೇಶದಲ್ಲಿ ಹೆಬ್ಬೆಟ್ಟು ಒತ್ತುವ ಜನರೇ ಅಧಿಕವಾಗಿರುತ್ತಿದ್ದರು. ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ನಾಡನ್ನು ಸಂಚರಿಸಿ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ತುಮಕೂರು, ತಿಪಟೂರು, ಅರಸೀಕೆರೆ, ಧಾರವಾಡ, ಕೊಲ್ಲಾಪುರ, ನಿಪ್ಪಾಣಿ, ಕಾಶಿ ಇನ್ನೂ ಮುಂತಾದ ಸ್ಥಳಗಳಲ್ಲಿ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು. ಅಲ್ಲಿ ಸರ್ವರಿಗೂ ವಿದ್ಯೆಯನ್ನು ನೀಡಿದ ಪುಣ್ಯಾತ್ಮರು ಶ್ರೀ ಜಯದೇವ ಜಗದ್ಗುರು ಎಂದರು.

ಬೇಲೂರಿನ ಡಾ. ಮಹಾಂತ ಬಸವಲಿಂಗ ಶ್ರೀಗಳು ಮಾತನಾಡಿದರು. ಸಂತೆಬೆನ್ನೂರಿನ ಮಹಾಂತೇಶ ಶಾಸ್ತ್ರಿಗಳು ಪ್ರವಚನ ನೀಡಿದರು. ಸಿರಸಂಗಿಯ ಬಸವ ಮಹಾಂತ ಸ್ವಾಮೀಜಿ, ಬಸವಕಲ್ಯಾಣದ ಶಿವಾನಂದ ಸ್ವಾಮೀಜಿ, ಕಲಬುರಗಿಯ ಶ್ರೀ ಸಿದ್ದಬಸವ ಕಬೀರ ಸ್ವಾಮಿಗಳು, ಐರಣಿ ಮಠದ ಗಜದಂಡ ಸ್ವಾಮೀಜಿ, ಹಾವೇರಿ ತೇರದಹಳ್ಳಿಯ ಪ್ರಕಾಶ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಶಿವಯೋಗಾಶ್ರಮ ಟ್ರಸ್ಟಿನ ಎಂ.ಜಯಕುಮಾರ, ಅಂದನೂರು ಮುಪ್ಪಣ್ಣ, ಎಸ್.ಓಂಕಾರಪ್ಪ, ಚಿಗಟೇರಿ ಜಯದೇವ, ಸೋಗಿ ಶಾಂತಕುಮಾರ, ವೀರೇಂದ್ರ, ಲಂಬಿ ಮುರುಗೇಶ, ಹಾಸಬಾವಿ ಕರಿಬಸಪ್ಪ, ಕುಂಟೋಜಿ ಚನ್ನಪ್ಪ, ಬೆಳ್ಳೂಡಿ ಮಂಜುನಾಥ ಸೇರಿದಂತೆ ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು. ಬಸವ ಕಲಾ ಲೋಕದವರು ವಚನ ಗಾಯನ ನಡೆಸಿಕೊಟ್ಟರು.

- - -

-19ಕೆಡಿವಿಜಿ48:

ದಾವಣಗೆರೆಯಲ್ಲಿ ನಡೆದ ಲಿಂ.ಜಯದೇವ ಜಗದ್ಗುರುಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಡಾ.ಬಸವಪ್ರಭು ಸ್ವಾಮೀಜಿ ಅವರು ಜಗದ್ಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ