ಕನ್ನಡಪ್ರಭ ವಾರ್ತೆ ಸಾಗರ
ಕಳೆದ ೨೦೧೯ರಂದು ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡು ೨೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ನಂತರದ ವರ್ಷಗಳಲ್ಲಿ ತಾಲೂಕಿನಲ್ಲಿ ಒಂದೆರಡು ಕೆಎಫ್‌ಡಿ ಪ್ರಕರಣ ದಾಖಲಾಗಿತ್ತೆ ಹೊರತು ಸಾವು ನೋವು ಸಂಭವಿಸಿರಲಿಲ್ಲ. ಆದರೆ ಈಗ ಮಂಗಗಳ ಸರಣಿ ಸಾವು ಜನರ ನಿದ್ದೆಗೆಡಿಸಿದೆ.
ತಾಲೂಕಿನ ಮಾವಿನಸರ ಗ್ರಾಮದಲ್ಲಿ ೨, ಆವಿನಹಳ್ಳಿ ವ್ಯಾಪ್ತಿಯಲ್ಲಿ ೫, ಎಡಜಿಗಳೆಮನೆಯಲ್ಲಿ ೧, ಆನಂದಪುರ ವ್ಯಾಪ್ತಿಯ ಅಡೂರಿನಲ್ಲಿ ೧, ಮಾಲ್ವೆ ಸಮೀಪದ ಸುಳಗೋಡು ಗ್ರಾಮದಲ್ಲಿ ಒಂದು, ತಲವಾಟ ಪಂಚಾಯತಿಯ ಮಂಜಿನಕಾನಿನಲ್ಲಿ ೫ ಹೀಗೆ ಒಟ್ಟು ೨೦ ಮಂಗಗಳು ಸಾವನ್ನಪ್ಪಿದೆ. ಈ ಪೈಕಿ ಐದಾರು ಮಂಗಗಳ ಅವಶೇಷಗಳನ್ನು ಕೆಎಫ್ಡಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ಬಳಿಕ ಉಳಿದ ಮಾಹಿತಿ ದೊರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಮಾಲ್ವೆ ಸುಳಗೋಡು ಗ್ರಾಮದ ವಿಶ್ವನಾಥ್ ಅವರ ತೋಟದಲ್ಲಿ ಬುಧವಾರ ಸಂಜೆ ವೇಳೆ ಮಂಗವೊಂದು ಸತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಗುರುವಾರ ಬೆಳಗ್ಗೆ ಸ್ಥಳಕ್ಕೆ ತಾಲೂಕಿನ ಪುಶು ವೈದ್ಯಕೀಯ, ಆರೋಗ್ಯ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ತೋಟದಲ್ಲಿ ಸತ್ತು ಬಿದ್ದಿದ್ದ ಮಂಗಕ್ಕೆ ಅಂತ್ಯ ಸಂಸ್ಕಾರ ಮಾಡಿದ್ದಲ್ಲದೆ ಸುತ್ತಲಿನ ಗ್ರಾಮದಲ್ಲಿ ಜನಜಾಗೃತಿ ಮೂಡಿಸಿದ್ದಾರೆ.
ಅಕ್ಟೋಬರ್ ಮೊದಲ ವಾರದಲ್ಲಿ ಆರೋಗ್ಯ ಇಲಾಖೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಡಿಇಪಿಎ ಆಯಿಲ್ ಮಾತ್ರ ಸರಬರಾಜಾಗಿದೆ. ನವೆಂಬರ್ ಮಧ್ಯ ಭಾಗದಿಂದೀಚೆಗೆ ಮಂಗಗಳ ಸಾವು ಪ್ರಕರಣ ಗಣನೀಯವಾಗಿ ಏರುಮುಖದಲ್ಲಿದ್ದರೂ ಮಂಗನಕಾಯಿಲೆಯಿಂದ ಬಳಲುತ್ತಿರುವ ತಾಲೂಕಿನ ಪ್ರದೇಶಗಳಲ್ಲೂ ಸಮರ್ಪಕ ಜಾಗೃತಿ ಕಾರ್ಯ ನಡೆದಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ಸಾಗರದಲ್ಲಿ ನವೆಂಬರ್ ತಿಂಗಳಲ್ಲಿ ೧೧೧ ಜನರ ಸ್ಯಾಂಪಲ್ ಕಳುಹಿಸಿದ್ದು, ಯಾವುದೂ ಪಾಸಿಟಿವ್ ಬಂದಿಲ್ಲ. ಸಾಗರದ ಪ್ರತಿ ಆರೋಗ್ಯ ಕೇಂದ್ರದಿಂದ ನಿತ್ಯ ೪-೫ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ತಾಲೂಕಿನ ಯಾರಿಗಾದರೂ ಜ್ವರ, ಸುಸ್ತು, ಗಂಟು ನೋವು ಕಂಡು ಬಂದರೆ ಕೂಡಲೇ ಉಪವಿಭಾಗೀಯ ಆಸ್ಪತ್ರೆಯಲ್ಲಿ ಸಿಬಿಸಿ ಪರೀಕ್ಷೆ ನಡೆಸಿ, ರಕ್ತಕಣ ಕಡಿಮೆಯಿರುವುದು ಪತ್ತೆಯಾದರೆ ತಕ್ಷಣ ಮಣಿಪಾಲ್‌ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ೧೦ ಹಾಸಿಗೆಯನ್ನು ಕೆಎಫ್ಡಿ ಸಂಬಂಧಿತ ರೋಗಿಗಳಿಗೆ ಕಾಯ್ದಿರಿಸಲಾಗಿದೆ ಎನ್ನುತ್ತಾರೆ ಡಾ.ಶ್ರೀನಿವಾಸ್.