ಪರಶಿವಮೂರ್ತಿ ಮಾಟಲದಿನ್ನಿ
ಜಾನಪದ ಕ್ಷೇತ್ರದಲ್ಲಿನ ಸುದೀರ್ಘ ಕಲಾಸೇವೆಗೆ ರಾಜ್ಯಮಟ್ಟದ ಮನ್ನಣೆ ದೊರೆತಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
ದಾವಲಸಾಬ ಅವರ ಕಲಾಸೇವೆಗೆ ಈ ಹಿಂದೆಯೂ ಹಲವು ಗೌರವಗಳು ಸಂದಿವೆ. 2014ರಲ್ಲಿ ಜಾನಪದ ಲೋಕ ಪ್ರಶಸ್ತಿ ಹಾಗೂ 2018ರಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿವೆ. ಅಲ್ಲದೆ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ, ಸನ್ಮಾನಗಳ ಮೂಲಕ ಗೌರವಿಸಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರಿ ಉತ್ಸವಗಳು, ಧಾರವಾಡ, ಬೆಂಗಳೂರು ಸೇರಿದಂತೆ ವಿವಿಧೆಡೆ ಕಾರ್ಯಕ್ರಮ ನೀಡಿರುವ ಅವರು ಮೈಸೂರು ದಸರಾ ಉತ್ಸವದಲ್ಲಿಯೂ ಭಾಗವಹಿಸಿದ್ದಾರೆ.ಮೂರು ತಲೆಮಾರಿನ ಕಲಾಪರಂಪರೆ: ದಾವಲಸಾಬ ಅವರ ಅಜ್ಜ ಬಯಲಾಟ ಕಲಾವಿದರಾಗಿದ್ದರೆ, ತಂದೆ ಮೊಹರಂ ಹಾಡುಗಳಲ್ಲಿ ಪ್ರಸಿದ್ಧಿ ಪಡೆದಿದ್ದರು. ಈ ಪರಂಪರೆಯನ್ನು ಮುಂದುವರಿಸಿದ ದಾವಲಸಾಬ 16ರ ಹರೆಯದಲ್ಲಿಯೇ ಗಾಯನ ಆರಂಭಿಸಿ, 20ನೇ ವಯಸ್ಸಿನಲ್ಲಿ ಇಟಗಿ ಭೀಮಾಂಬಿಕಾ ಜಾತ್ರೆಯಲ್ಲಿ ಮೊದಲ ಕಾರ್ಯಕ್ರಮ ನೀಡಿದರು. ಹಾಬಲಕಟ್ಟಿ, ಬಾದಿಮನಾಳ, ಯರಗೇರಿ, ಗೊರೇಬಾಳ, ರಾಂಪುರ, ಹನುಮಸಾಗರ, ತುಗ್ಗಲದೋಣಿ, ನಿಲೋಗಲ್, ವಾರಿಕಲ್ಲ, ಮಾಲಗಿತ್ತಿ, ಹೊಸಳ್ಳಿ ಸೇರಿದಂತೆ ಹಲವು ಗ್ರಾಮಗಳ ಜಾತ್ರೆ, ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿ ಜನಪ್ರಿಯತೆ ಗಳಿಸಿದ್ದಾರೆ.
ಭಾವೈಕ್ಯತೆಯ ಕಲಾವಿದ: ಮುಸ್ಲಿಂ ಕುಟುಂಬದಲ್ಲಿ ಜನಿಸಿದ ದಾವಲಸಾಬ ಅವರಿಗೆ ಭಜನೆ, ಗೀಗೀ ಪದ, ಲಾವಣಿ ಗಾಯನದಲ್ಲಿಯೂ ಆಸಕ್ತಿ ಇದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರುವ ಅವರು ಅಗರಬತ್ತಿ ಮಾರಾಟದ ಮೂಲಕ ಜೀವನ ಸಾಗಿಸುತ್ತಲೇ ಕಲೆಯನ್ನು ಉಸಿರಾಗಿಸಿಕೊಂಡಿದ್ದು 75ರ ಇಳಿವಯಸ್ಸಿನಲ್ಲಿಯೂ ಗಾಯನದ ಆಸಕ್ತಿ ಉಳಿಸಿಕೊಂಡಿರುವ ಈ ಹಿರಿಯ ಕಲಾವಿದನಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಾಲ್ಕು ದಶಕಗಳ ಕಲಾಸೇವೆಗೆ ಸಂದ ಗೌರವವಾಗಿದೆ.