ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆ ರದ್ದಾಗಿ 3 ವರ್ಷವಾದ್ರೂ ಸಂಗ್ರಹಿಸಿದ್ದ ಶುಲ್ಕ ವಾಪಸ್ಸಿಲ್ಲ!

KannadaprabhaNewsNetwork |  
Published : Aug 30, 2024, 01:05 AM ISTUpdated : Aug 30, 2024, 09:24 AM IST
When to avoid money transactions ashubh time

ಸಾರಾಂಶ

ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆ (ಎನ್‌ಟಿಎಸ್‌ಇ) ರದ್ದಾಗಿ ಮೂರು ವರ್ಷ ಕಳೆದರೂ ಪರೀಕ್ಷೆಗೆ ಮಕ್ಕಳಿಂದ ಸಂಗ್ರಹಿಸಿದ್ದ ಕೋಟ್ಯತರ ರು. ಶುಲ್ಕವನ್ನು ಇದುವರೆಗೂ ವಾಪಸ್‌ ನೀಡಿಲ್ಲ.

ಲಿಂಗರಾಜು ಕೋರಾ

 ಬೆಂಗಳೂರು :  ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2021-22ನೇ ಸಾಲಿನಲ್ಲಿ ನಡೆಸಬೇಕಿದ್ದ ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆ (ಎನ್‌ಟಿಎಸ್‌ಇ) ರದ್ದಾಗಿ ಮೂರು ವರ್ಷ ಕಳೆದರೂ ಪರೀಕ್ಷೆಗೆ ಮಕ್ಕಳಿಂದ ಸಂಗ್ರಹಿಸಿದ್ದ ಕೋಟ್ಯತರ ರು. ಶುಲ್ಕವನ್ನು ಇದುವರೆಗೂ ವಾಪಸ್‌ ನೀಡಿಲ್ಲ.ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಎನ್‌ಸಿಇಆರ್‌ಟಿ) ನಿರ್ದೇಶನದಂತೆ 2021-22ನೇ ಸಾಲಿನಲ್ಲಿ ರಾಜ್ಯ ಶಿಕ್ಷಣ ಇಲಾಖೆಯು ಅಂದು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಪ್ರೌಢಶಾಲೆಗಳಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 3,23,750 ವಿದ್ಯಾರ್ಥಿಗಳಿಂದ ಒಟ್ಟು 2,66,72,717 ರು. ಎನ್‌ಟಿಎಸ್‌ಇ ಪರೀಕ್ಷಾ ಶುಲ್ಕ ಸಂಗ್ರಹಿಸಿತ್ತು.

ಆದರೆ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಎನ್‌ಸಿಇಆರ್‌ಟಿ ಆ ವರ್ಷ ಎನ್‌ಟಿಎಸ್‌ಇ ಪರೀಕ್ಷೆ ರದ್ದುಪಡಿಸಿದ್ದರಿಂದ ವಿದ್ಯಾರ್ಥಿಗಳಿಂದ ಪಡೆದಿದ್ದ ಶುಲ್ಕವನ್ನು ವಾಪಸ್‌ ನೀಡಬೇಕಿತ್ತು. ಆದರೆ, ಮೂರು ವರ್ಷ ಕಳೆದರೂ ಶುಲ್ಕವನ್ನು ಮಕ್ಕಳಿಗೆ ವಾಪಸ್‌ ಕೊಡದೆ ಇಲಾಖೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ ಎಂಬ ಆರೋಪ ಕೇಳಿಬಂದಿದೆ.ಯಾವುದೇ ಪರೀಕ್ಷೆ ರದ್ದಾದರೆ ಅದು ಯಾವ ಕಾರಣಕ್ಕೆ ರದ್ದುಪಡಿಸಲಾಗಿದೆ. ಪರೀಕ್ಷೆಗೆ ಪಡೆದ ಶುಲ್ಕವನ್ನು ಯಾವಾಗ ವಾಪಸ್‌ ನೀಡಲಾಗುವುದು. ಅಥವಾ ವಾಪಸ್‌ ನೀಡಲಾಗುತ್ತದೋ, ಇಲ್ಲವೋ ಎಂಬ ಬಗ್ಗೆಯಾದರೂ ಸ್ಪಷ್ಟ ಮಾಹಿತಿ ನೀಡಬೇಕಾದ್ದು ಇಲಾಖಾ ಅಧಿಕಾರಿಗಳ ಕರ್ತವ್ಯ. ಆದರೆ, ಇದುವರೆಗೂ ಈ ಬಗ್ಗೆ ಅಧಿಕಾರಿಗಳು ಯಾವುದೇ ಉತ್ತರ, ಸ್ಪಷ್ಟನೆಯನ್ನೂ ನೀಡದೆ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.

ಈ ಸಂಬಂಧ ರಾಜ್ಯದ ವಿವಿಧ ಖಾಸಗಿ ಶಾಲಾ ಸಂಘಟನೆಗಳು ಎನ್‌ಟಿಎಸ್‌ಇ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸುವಂತೆ ಸರ್ಕಾರವನ್ನು ಒತ್ತಾಯಿಸಿವೆ. ಈ ಸಂಬಂಧ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿರುವ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘದ (ಅವರ್‌ ಸ್ಕೂಲ್ಸ್‌) ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌ ಅರಸ್‌, ಪರೀಕ್ಷೆ ರದ್ದಾಗಿ ಮೂರು ವರ್ಷವಾದರೂ ಶುಲ್ಕ ವಾಪಸ್‌ ನೀಡದೆ ಅಧಿಕಾರಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಕೂಡಲೇ ವಿದ್ಯಾರ್ಥಿಗಳಿಗೆ ಶುಲ್ಕ ವಾಪಸ್‌ ಕೊಡಿಸಲು ಕ್ರಮ ವಹಿಸುವಂತೆ ಕೋರಿದ್ದಾರೆ.

ಈ ಮಧ್ಯೆ,ಎನ್‌ಟಿಎಸ್‌ಇ ಪರೀಕ್ಷೆ ರದ್ದಿಗೆ ಅಧಿಕೃತ ಕಾರಣ ನೀಡುವಂತೆ ಹಾಗೂ ಶುಲ್ಕ ವಾಪಸ್‌ ನೀಡದ ಬಗ್ಗೆ ಅವರ್‌ ಸ್ಕೂಲ್ಸ್‌ ಆರ್‌ಟಿಐ ಮೂಲಕ ನ್‌ಸಿಇಆರ್‌ಟಿಗೆ ಮಾಹಿತಿ ಕೋರಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಪರೀಕ್ಷೆ ರದ್ದುಪಡಿಸಲಾಗಿದೆ. ವಿದ್ಯಾರ್ಥಿಗಳಿಂದ ಪಡೆದ ಶುಲ್ಕದ ಬಗ್ಗೆ ತಮ್ಮ ರಾಜ್ಯದ ಸಂಬಂಧಿಸಿದ ನೋಡಲ್‌ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದೆ. 

ಆದರೆ, ಈ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆಗೆ ಹಲವು ಬಾರಿ ಪತ್ರ ಬರೆದರೂ ಯಾವುದೇ ಉತ್ತರ ದೊರಕಿಲ್ಲ. 3.23 ಲಕ್ಷ ವಿದ್ಯಾರ್ಥಿಗಳಿಂದ ತಲಾ 80 ರು.ನಂತೆ ಶುಲ್ಕ ಸಂಗ್ರಹಿಸಲಾಗಿದೆ. ಇದು ವೈಯಕ್ತಿಕವಾಗಿ ಸಣ್ಣ ಮೊತ್ತವೆನಿಸಿದರೂ, ಸಂಗ್ರಹವಾದ ಒಟ್ಟು ಶುಲ್ಕ ಮೊತ್ತ 2.66 ಕೋಟಿ ರು.ಗೂ ಹೆಚ್ಚು. ಇದನ್ನು ವಾಪಸ್‌ ನೀಡುವ ಅಥವಾ ಬೇರೆ ಯಾವುದೇ ಕಾರ್ಯಕ್ಕೆ ಬಳಸಲಾಗಿದೆಯಾ ಎಂಬ ಬಗ್ಗೆ ಮಾಹಿತಿ ನೀಡಬೇಕಾದ್ದು ಇಲಾಖೆಯ ಕರ್ತವ್ಯ. ಕೂಡಲೇ ಉತ್ತರ ನೀಡಬೇಕು ಎಂದು ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ