ಮುಗಿದ ಉತ್ಸವ; ಮೂಲ ಸ್ವರೂಪದತ್ತ ಹಂಪಿ

KannadaprabhaNewsNetwork |  
Published : Mar 04, 2025, 12:33 AM IST
3ಎಚ್‌ಪಿಟಿ1- ಹಂಪಿ ಉತ್ಸವದ ಪ್ರಧಾನ ವೇದಿಕೆ ಬಳಿ ಕುರ್ಚಿಗಳನ್ನು ತೆರವು ಮಾಡಿದ ಉಡುಪಾಸ್‌ ಸಂಸ್ಥೆ ಸಿಬ್ಬಂದಿ. | Kannada Prabha

ಸಾರಾಂಶ

ಗತ ವೈಭವ ಸಾರಿದ ವಿಜಯನಗರದ ನೆಲದಲ್ಲಿ ಈಗ ದಿವ್ಯಮೌನ ಆವರಿಸಿದ್ದು, ಉತ್ಸವಕ್ಕೆ ನಿರ್ಮಿಸಲಾಗಿದ್ದ ಐದು ವೇದಿಕೆಗಳ ತೆರವು ಕಾರ್ಯಾಚರಣೆ ನಡೆದಿದೆ.

ಐದು ವೇದಿಕೆಗಳ ತೆರವು ಕಾರ್ಯಾಚರಣೆ । ಗಜಶಾಲೆ ಬಳಿ ಧ್ವನಿ ಮತ್ತು ಬೆಳಕು ವೈಭವ

ಕೃಷ್ಣ ಎನ್. ಲಮಾಣಿ

ಕನ್ನಡಪ್ರಭ ವಾರ್ತೆ ಹಂಪಿ

ಗತ ವೈಭವ ಸಾರಿದ ವಿಜಯನಗರದ ನೆಲದಲ್ಲಿ ಈಗ ದಿವ್ಯಮೌನ ಆವರಿಸಿದ್ದು, ಉತ್ಸವಕ್ಕೆ ನಿರ್ಮಿಸಲಾಗಿದ್ದ ಐದು ವೇದಿಕೆಗಳ ತೆರವು ಕಾರ್ಯಾಚರಣೆ ನಡೆದಿದೆ. ಗಜ ಶಾಲೆ ಬಳಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಉತ್ಸವ ಮುಗಿದ ಬಳಿಕ ಹಂಪಿ ನೈಜ ಸ್ವರೂಪಕ್ಕೆ ಬಂದಿದ್ದು, ಸಹಜ ಸೌಂದರ್ಯವನ್ನು ದೇಶ, ವಿದೇಶಿ ಪ್ರವಾಸಿಗರು ವೀಕ್ಷಿಸುತ್ತಿದ್ದಾರೆ.

ಹಂಪಿ ಉತ್ಸವದಲ್ಲಿ ಮೂರು ದಿನಗಳಲ್ಲಿ ಎಂಟು ಲಕ್ಷ ಜನರು ಆಗಮಿಸಿದ್ದು, ನಾಡಿನ ಖ್ಯಾತ ಕಲಾವಿದರು ಕೂಡ ಆಗಮಿಸಿ ಉತ್ಸವದಲ್ಲಿ ಕಾರ್ಯಕ್ರಮ ನೀಡಿ ರಂಜಿಸಿದ್ದಾರೆ. ಉತ್ಸವದಲ್ಲಿ ತಮ್ಮ ನೆಚ್ಚಿನ ನಟರನ್ನು ನೋಡಿ ಜನತೆ ಕಣ್ಣದುಂಬಿಕೊಂಡರು. ಜಾನಪದ ವಾಹಿನಿಯಲ್ಲಿ ಈ ನೆಲದ ಕಲೆ ಅನಾವರಣಗೊಂಡ ಹಿನ್ನೆಲೆ ಇನ್ನಷ್ಟು ಮೆರಗು ನೀಡಿತ್ತು. ಈಗ ವೇದಿಕೆಗಳ ತೆರವು ಕಾರ್ಯಾಚರಣೆಯನ್ನು ಬೆಂಗಳೂರಿನ ಉಡುಪಾಸ್‌ ಸಂಸ್ಥೆ ನಡೆಸುತ್ತಿದ್ದು, ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

ವಿಜಯನಗರ ವಾಸ್ತುಶಿಲ್ಪ:

ಹಂಪಿ ಉತ್ಸವದಲ್ಲಿ ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಾಣ ಮಾಡಲಾದ ಎಂ.ಪಿ. ಪ್ರಕಾಶ ಪ್ರಧಾನ ವೇದಿಕೆ ಕಳೆಗಟ್ಟಿತ್ತು. ಮೂರು ದಿನಗಳು ಈ ವೇದಿಕೆಯಲ್ಲಿ ನಾಡಿನ ಕಲಾವಿದರು ಪ್ರದರ್ಶನ ನೀಡಿದ್ದಾರೆ. ಸಿನಿ ತಾರೆಯರು ಆಗಮಿಸಿ ಅಭಿಮಾನಿಗಳಿಗೆ ರಂಜಿಸಿದರು. ಈ ವೇದಿಕೆ ಕಲಾವಿದರ ಹೃದಯ ಗೆದ್ದಿತ್ತು. ಹಂಪಿ ಪ್ರಮುಖ ಸ್ಮಾರಕಗಳನ್ನು ಬಳಸಿಕೊಂಡು ಈ ವೇದಿಕೆಯನ್ನು ಉಡುಪಾಸ್‌ ಸಂಸ್ಥೆ ವಾಸ್ತುಶಿಲ್ಪಿಗಳು ಸೃಜಿಸಿದ್ದರು. ಉತ್ಸವದಲ್ಲಿ ಕಳೆಗಟ್ಟಿದ್ದ ಈ ವೇದಿಕೆ ತೆರವು ಕಾರ್ಯಾಚರಣೆಯೂ ನಡೆದಿದೆ.

ಹಂಪಿ ಉತ್ಸವದಲ್ಲಿ ಈ ವೇದಿಕೆ ಮುಂಭಾಗದಲ್ಲಿ 70 ಸಾವಿರ ಕುರ್ಚಿಗಳನ್ನು ಅಳವಡಿಸಲಾಗಿತ್ತು. ಭಾರೀ ಪ್ರಮಾಣದಲ್ಲಿ ಜನರು ಹರಿದು ಬಂದ ಹಿನ್ನೆಲೆ ಮತ್ತೆ 30 ಸಾವಿರ ಕುರ್ಚಿಗಳನ್ನು ಅಳವಡಿಸಲಾಗಿತ್ತು. ಹಿಂಬದಿಯಲ್ಲಿ ಖಾಲಿ ಜಾಗ ಕೂಡ ಬಿಡಲಾಗಿತ್ತು. ಈ ಬಾರಿ ಉತ್ಸವದ ಕಾರ್ಯಕ್ರಮ ಲೈವ್‌ ಕೂಡ ನೀಡಲಾಗಿತ್ತು. ಆದರೂ ಈ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ ಲೈವ್‌ ಆಗಿ ನೋಡಲು ಜನರು ಮುಗಿಬಿದ್ದಿದ್ದರು. ಪೊಲೀಸರಂತೂ ಜನರನ್ನು ನಿಯಂತ್ರಿಸಲು ಹೈರಾಣಾದರು. ಈ ವೇದಿಕೆಯಲ್ಲಿ ಕಲಾ ಲೋಕದ ವೈಭವ ಮನೆ ಮಾಡಿತ್ತು. ಈಗ ವೇದಿಕೆ ತೆರವು ಕಾರ್ಯಾಚರಣೆ ನಡೆದಿದೆ.

ಹಂಪಿ ಉತ್ಸವದಲ್ಲಿ ಹಿನ್ನೆಲೆ ಗಾಯಕರ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಪ್ರೇಕ್ಷಕರು, ಈ ಉತ್ಸವ ನಮ್ಮೆಲ್ಲರ ಖುಷಿ ಉತ್ಸವ ಎಂಬುದನ್ನು ಸಾರಿದರು. ಅವರ ಉತ್ಸಾಹದ ಕುಣಿತಕ್ಕೆ ಕುರ್ಚಿಗಳು ಕೂಡ ಪುಡಿಪುಡಿಯಾಗಿವೆ. ಈ ಕುರ್ಚಿಗಳನ್ನು ತೆರವು ಮಾಡುವ ಕಾರ್ಯವನ್ನು ಉಡುಪಾಸ್‌ ಸಿಬ್ಬಂದಿ ಮಾಡಿದರು.

ಹಂಪಿಯ ಎದುರು ಬಸವಣ್ಣ ಮಂಟಪ, ಶ್ರೀವಿರೂಪಾಕ್ಷೇಶ್ವರ ದೇವಾಲಯ ಆವರಣ, ಮಹಾನವಮಿ ದಿಬ್ಬ ವೇದಿಕೆ ಮತ್ತು ಸಾಸಿವೆ ಕಾಳು ಗಣಪತಿ ವೇದಿಕೆಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಯಿತು. ಇನ್ನೂ ಫಲಪುಷ್ಪ ಪ್ರದರ್ಶನ, ಕರಕುಶಲ ಪ್ರದರ್ಶನ ಮತ್ತು ಮಾರಾಟ ಮಳಿಗೆ, ಮತ್ಸ್ಯಮೇಳ, ಕುರಿ, ಟಗರು, ಎತ್ತುಗಳ ಪ್ರದರ್ಶನ, ಕುಸ್ತಿ ಅಖಾಡ, ಪೊಲೀಸ್‌ ತಾತ್ಕಾಲಿಕ ಠಾಣೆಗಳನ್ನು ಕೂಡ ತೆರವು ಮಾಡಲಾಗುತ್ತಿದ್ದು, ಮೂರು ದಿನಗಳಲ್ಲಿ ಎಂಟು ಲಕ್ಷ ಜನರು ಹಂಪಿಯತ್ತ ದೌಡಾಯಿಸಿ ಉತ್ಸವದ ಸೊಬಗನ್ನು ಸವಿದಿದ್ದು, ಈಗ ವೇದಿಕೆಗಳ ತೆರವು ಕಾರ್ಯಾಚರಣೆ ನಡೆದಿರುವುದರಿಂದ ಹಂಪಿ ಮತ್ತೆ ನೈಜ ಕಳೆ ಪಡೆಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!