ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಜಿಲ್ಲಾ ಕೇಂದ್ರದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಜಾಗ ಮಂಜೂರು ಸೇರಿದಂತೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಒತ್ತಾಯಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಟೊಮೆಟೊ ಹಾಗೂ ತರಕಾರಿ ಮಾರುಕಟ್ಟೆಯ ಸಮಸ್ಯೆಗಳು ಆಗರವಾಗಿದೆ ಪಕ್ಕದ ರಾಜ್ಯದ ವಿ.ಕೋಟಾದಲ್ಲಿ ಸುಮಾರು೧೦೦ ಎಕರೆಯಲ್ಲಿ ಮಾರುಕಟ್ಟೆ ನಿರ್ಮಿಸುತ್ತಿದ್ದು, ಅದು ಸಿದ್ಧವಾದರೆ ೫೦ ಕಿ.ಮೀ ದೂರವಿರುವ ಅಲ್ಲಿಗೆ ಮಾರಾಟಗಾರರು, ವರ್ತಕರು ಹೋಗುತ್ತಾರೆ. ಇಲ್ಲಿನ ಎಪಿಎಂಸಿಗೆ ನಷ್ಟವಾಗಲಿದೆ ಎಂದು ಎಚ್ಚರಿಸಿದರು.
ಎಪಿಎಂಸಿಗೆ ಜಾಗ ನೀಡುತ್ತಿಲ್ಲಸರ್ಕಾರ ಕೈಗಾರಿಕೆಗಳಿಗೆ ಜಾಗ ನೀಡುತ್ತದೆ. ಆದರೆ, ರೈತರಿಗಾಗಿ ಇರುವ ಎಪಿಎಂಸಿಗೆ ಜಾಗ ಕೊಡುತ್ತಿಲ್ಲ. ಇದಕ್ಕಾಗಿ ಕೂಡಲೇ ಈ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿರುವ ಕೆ.ಸಿ.ವ್ಯಾಲಿ ಮತ್ತು ಎಚ್.ಎನ್ ವ್ಯಾಲಿಯ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮೀಸಲಿಟ್ಟು ಸುಮಾರು ವರ್ಷಗಳಿಂದ ಎತ್ತಿನಹೊಳೆ ಯೋಜನೆಯ ಮೂಲಕ ನೀರು ಕೊಡುತ್ತೇವೆ ಎಂದು ನಮ್ಮನ್ನು ಆಳುವ ಸರ್ಕಾರಗಳು ಮೂರ್ಖರನ್ನಾಗಿಸುತ್ತಿವೆ. ಇದೆ ವರ್ಷದಲ್ಲಿ ಹಣ ಬಿಡುಗಡೆ ಮಾಡಿ ಯೋಜನೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು
ಸಂಸ್ಕರಣಾ ಘಟಕ ಸ್ಥಾಪಿಸಿಸಂಘಟನೆಯ ಜಿಲ್ಲಾ ಅಧ್ಯಕ್ಷ ಬೆಟ್ಟಶೆಟ್ಟಹಳ್ಳಿ ರಮೇಶ್ ಮಾತನಾಡಿ ಜಿಲ್ಲೆಯ ರೈತರು ಸ್ವಾಭಿಮಾನಿಗಳು ಕಷ್ಟಕರ ಪಟ್ಟು ಟೊಮೆಟೊ ಆಲೂಗಡ್ಡೆ ಸೇರಿ ತರಕಾರಿಗಳನ್ನು ಬೆಳೆಯುತ್ತಿದ್ದು, ಕೂಡಲೇ ಸಂಸ್ಕರಣಾ ಘಟಕ ಸ್ಥಾಪಿಸಬೇಕು ಎಂದರು.
ಸಂಘಟನೆಯ ಬಯಲುಸೀಮೆ ವಿಭಾಗದ ಕಾರ್ಯದರ್ಶಿ ಪ್ರಭಾಕರ್, ರಾಜ್ಯ ಉಪಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಹಸಿರು ಸೇನೆ ರಾಜ್ಯ ಸಂಚಾಲಕ ಕೆ. ಆನಂದ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನ್ನೆಹೊಸಹಳ್ಳಿ ರಮೇಶ್, ಮುಖಂಡರಾದ ತಿಮ್ಮಾರೆಡ್ಡಿ, ಚಿನ್ನಾಪುರ ಮಂಜುನಾಥ್, ಗುರುಪ್ಪ ಇದ್ದರು.