ಗಂಗಾವತಿ:
ಸಮೀಪದ ಹಳೇ ಕುಮಟಾದಲ್ಲಿ ವಿಪ ಮಾಜಿ ಎಚ್.ಆರ್. ಶ್ರೀನಾಥ ಕಾಲನಿಯ ನಾಮಫಲಕವನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಅನಾವರಣಗೊಳಿಸಿದರು.ಎಚ್.ಆರ್. ಶ್ರೀನಾಥ ಅವರು ಈ ಹಿಂದೆ ಗ್ರಾಮದಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಲು 3 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಈಗ ಗ್ರಾಮಸ್ಥರು ಮನೆ ನಿರ್ಮಿಸಿಕೊಂಡಿದ್ದು, ಶ್ರೀನಾಥ ಹೆಸರಿನಲ್ಲಿ ಕಾಲನಿ ನಾಮಫಲಕ ಹಾಕಿದ್ದಾರೆ.
ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಮಾಜಿ ಸಂಸದ ಎಚ್.ಜಿ. ರಾಮುಲು ಮತ್ತು ಅವರ ಪುತ್ರ ಎಚ್.ಆರ್. ಶ್ರೀನಾಥ ಕುಟುಂಬ ಮೊದಲಿನಿಂದಲು ದಾನ, ಧರ್ಮ ಮಾಡುತ್ತಾ ಬಂದಿದೆ. ರಾಮುಲು ಅವರು ಈ ಹಿಂದೆ ಸಂಸದರಾಗಿ, ಶಾಸಕರಾಗಿ ಜನಪರ ಕೆಲಸ ಮಾಡಿದ್ದಾರೆ. ಧಾರ್ಮಿಕತೆಗೂ ಹೆಚ್ಚಿನ ಒಲವು ನೀಡುತ್ತಾ, ಕ್ಷೇತ್ರದಲ್ಲಿ ಶಾಂತಿ ಕಾಪಾಡುವ ನಾಯಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.ಈ ಗ್ರಾಮ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ಮೂಲಕ ಬರುವ ದಿನಗಳಲ್ಲಿ ಸರ್ಕಾರದ ಯೋಜನೆ ತಲುಪಿಸಲಾಗುವುದು ಎಂದ ಅವರು, ಈ ಪ್ರದೇಶದ ವ್ಯಾಪ್ತಿಯಲ್ಲಿ ಕುಮ್ಮಟದುರ್ಗಾ, ಹಿರೇಬೆಣಕಲ್ , ಹೇಮಗುಡ್ಡ ಸೇರಿದಂತೆ ಪ್ರಸಿದ್ಧ ಐತಿಹಾಸಿಕ ಸ್ಥಳಗಳು ಬರುತ್ತಿದ್ದು, ಇವುಗಳ ಸರ್ವಾಂಗಿಣ ಅಭಿವೃದ್ಧಿಗೆ ಅನುದಾನ ತಂದು ಪ್ರವಾಸಿಗರು ಹೋಗಿ ಬರಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.
ಈಗಾಗಲೇ ಅಂಜನಾದ್ರಿ ಅಭಿವೃದ್ಧಿಗೆ ₹ 120 ಕೋಟಿ ಅನುದಾನ ಬಂದಿದ್ದು, ಕಾಮಗಾರಿ ಪ್ರಾರಂಭಗೊಂಡಿದೆ. ಇನ್ನು ₹ 500 ಕೋಟಿ ಅನುದಾನ ತಂದು ಅಂಜನಾದ್ರಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಲಾಗುವುದು ಎಂದು ಹೇಳಿದರು. ಇದೇ ವೇಳೆ ಜನಾರ್ದನ ರೆಡ್ಡಿ ಅವರನ್ನು ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.