ಕಾರವಾರ: ಇಲ್ಲಿನ ಕಾಳಿ ನದಿ ದ್ವೀಪದಲ್ಲಿ ಇರುವ ಕಾಳಿಕಾ ದೇವಿಯ ಜಾತ್ರಾ ಮಹೋತ್ಸವ ಭಾನುವಾರ ಶ್ರದ್ಧಾ- ಭಕ್ತಿಯಿಂದ ಜರುಗಿತು. ನೂರಾರು ಜನರು ದೋಣಿಗಳ ಮೂಲಕ ತೆರಳಿ ಮಾತೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.ನಗರದ ಕೋಡಿಬಾಗದಿಂದ 2 ಕಿಮೀ ದೂರದಲ್ಲಿ ವಿಶಾಲವಾದ ದ್ವೀಪದಲ್ಲಿ ನೆಲೆಸಿರುವ ಕಾಳಿ ದೇವಿಯನ್ನು ಅನಾದಿ ಕಾಲದಿಂದಲೂ ಪೂಜಿಸಲಾಗುತ್ತಿದೆ. ಕಾಳಿಯ ಬೃಹತ್ ಮೂರ್ತಿಗೆ ಹೂವಿನ ಮಾಲೆಯ ಜತೆಗೆ ಲಿಂಬು ಮಾಲೆಗಳೊಂದಿಗೆ ಅಲಂಕಾರ ಮಾಡಲಾಗಿತ್ತು. ಭಾನುವಾರ ಭಕ್ತರ ಸಂಖ್ಯೆ ಹೆಚ್ಚಿತ್ತು. ಪ್ರತಿ ವರ್ಷದಂತೆ ಈ ಬಾರಿಯು ಮೂರು ದಿನಗಳ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜಾತ್ರೆಯ ಮೊದಲ ದಿನವಾದ ಶುಕ್ರವಾರ ಹೋಮ ಹವನ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮೂರು ದಿನಗಳ ಕಾಲ ನಡೆದ ಜಾತ್ರೆಯಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ವಿವಿಧ ಹರಕೆಯನ್ನು ತೀರಿಸಿದರು.ಈ ದ್ವೀಪವು ಕಾಳಿ ನದಿಯಿಂದ ಆವೃತವಾಗಿದ್ದು, ದೇವಿ ಜಾತ್ರೆಗೆ ತೆರಳುವ ಪ್ರತಿಯೊಬ್ಬರೂ ದೋಣಿಯನ್ನೇ ಅವಲಂಬಿಸಬೇಕು. ಇಂತಹ ವಿಶಿಷ್ಟ ಅನುಭವ ಪಡೆಯುವುದಕ್ಕಾಗಿಯೇ ಸಾಕಷ್ಟು ಜನರು ಆಗಮಿಸಿದ್ದರು. ಕಾಳಿಮಾತೆಯ ದೇಗುಲಕ್ಕೆ ತೆರಳಲು ನಂದನಗದ್ದಾದ ಸಂತೋಷಿ ಮಾತಾ ದೇವಸ್ಥಾನ ಬಳಿಯ ಕಾಳಿ ನದಿಯ ದಡದಿಂದ ದೋಣಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಜಾತ್ರೆಗೆ ಜಿಲ್ಲೆಯಿಂದ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ ರಾಜ್ಯದಿಂದಲೂ ಸಾಕಷ್ಟು ಭಕ್ತರು ಆಗಮಿಸಿದ್ದರು. ಇಲ್ಲಿಗೆ ಬಂದು ಶ್ರೀದೇವಿಯ ದರ್ಶನ ಪಡೆಯುವುದರಿಂದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಕಾಳಿ ದೇವಿಗಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಕಾಳಿ ನದಿ ಹಾಗೂ ಅರಬ್ಬಿ ಸಮುದ್ರದ ಸಂಗಮ ಪ್ರದೇಶವಾದ್ದರಿಂದ ದ್ವೀಪ ಉಪ್ಪು ನೀರಿನಿಂದ ಜಲಾವೃತಗೊಂಡಿದೆ. ಆದರೆ ಇದರ ತಪ್ಪಲಿನ ಎರಡು ಬಾವಿಗಳು ಮಾತ್ರ ಸದಾ ಸಿಹಿಯಾಗಿದ್ದು, ಇದು ದೇವಿಯ ಮಹಿಮೆಯಿಂದ ಸಾಧ್ಯವಾಗಿದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.ಕಲಿಯುಗದ ಶಕ್ತಿ ಮಂತ್ರ ಹನುಮಾನ ಚಾಲಿಸಾ