ಪ್ರಾಮಾಣಿಕರಿಗೆ ಸಮಾಜದಲ್ಲಿ ಬೆಲೆ ಇಲ್ಲ: ಸಂತೋಷ್ ಹೆಗ್ಡೆ

KannadaprabhaNewsNetwork |  
Published : Jan 13, 2025, 12:45 AM IST
೧೨ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಜೇಸಿಐ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಶಾಫಿ ನಿರ್ಗಮಿತ ಅಧ್ಯಕ್ಷ ಎನ್.ಶಶಿಧರ್ ಅವರಿಂದ ಅಧಿಕಾರ ಸ್ವೀಕರಿಸಿದರು. ನಿವೃತ್ತ ಲೋಕಾಯುಕ್ತ ಎನ್.ಸಂತೋಷ್‌ಹೆಗ್ಡೆ, ವಿಜಯಕುಮಾರ್, ಪ್ರಶಾಂತ್‌ಕುಮಾರ್, ಅಶೋಕ, ಶೃಜಿತ್ ಹಾಜರಿದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಸಮಾಜದಲ್ಲಿ ಇಂದು ನಾನು ಶ್ರೀಮಂತನಾಗಬೇಕು, ದೊಡ್ಡ ವ್ಯಕ್ತಿಯಾಗಬೇಕು ಎಂಬ ಪೈಪೋಟಿ ಶುರುವಾಗಿರುವ ನಡುವೆ ಪ್ರಾಮಾಣಿಕರಿಗೆ ಬೆಲೆ ಇಲ್ಲವಾಗಿದೆ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್‌ಹೆಗ್ಡೆ ಹೇಳಿದರು.

ಜೇಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಮಾಜದಲ್ಲಿ ಇಂದು ನಾನು ಶ್ರೀಮಂತನಾಗಬೇಕು, ದೊಡ್ಡ ವ್ಯಕ್ತಿಯಾಗಬೇಕು ಎಂಬ ಪೈಪೋಟಿ ಶುರುವಾಗಿರುವ ನಡುವೆ ಪ್ರಾಮಾಣಿಕರಿಗೆ ಬೆಲೆ ಇಲ್ಲವಾಗಿದೆ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್‌ಹೆಗ್ಡೆ ಹೇಳಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಶನಿವಾರ ಆಯೋಜಿಸಿದ್ದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದಲ್ಲಿ ಜನರ ಸೇವೆಗಾಗಿ ರಚಿಸಿರುವ ಸಂಘ, ಸಂಸ್ಥೆ, ಇಲಾಖೆಗಳಲ್ಲಿ ಇಂದು ಅನ್ಯಾಯ ಕಾಣುತ್ತಿದ್ದು, ಇದು ವ್ಯಕ್ತಿಗಳ ತಪ್ಪಲ್ಲ. ಸಮಾಜದ ತಪ್ಪು. ಸಮಾಜದ ಭಾವನೆಯಲ್ಲಿ ಇಂದು ಸಾಕಷ್ಟು ಬದಲಾವಣೆಗಳು ಬಂದಿವೆ.

ಸಂವಿಧಾನದ ಚೌಕಟ್ಟಿನಲ್ಲಿ ಶ್ರೀಮಂತ, ದೊಡ್ಡ ವ್ಯಕ್ತಿ ಆದರೆ ತಪ್ಪಿಲ್ಲ. ಆದರೆ ದುರಾಸೆ ಕಾರಣದಿಂದ ವಾಮಮಾರ್ಗದಿಂದ ಶ್ರೀಮಂತರಾದರೆ ಅದು ತಪ್ಪು. ದುರಾಸೆ ಯಿಂದಾಗಿ ಇಂದು ಪ್ರಾಮಾಣಿಕತೆ ಕಡಿಮೆಯಾಗಿದೆ. ದೇಶದಲ್ಲಿ ಒಂದೊಂದು ದಶಕದಲ್ಲಿ ಒಂದೊಂದು ಹಗರಣಗಳು ನಡೆದಿದೆ. ಪ್ರತೀ ದಶಕದಲ್ಲಿ ನಡೆದ ಹಗರಣಗಳಿಂದ ಸೋರಿಕೆಯಾದ ಹಣದಿಂದ ಎಷ್ಟು ಅಭಿವೃದ್ಧಿ ಮಾಡಬಹುದಿತ್ತು ಎಂದು ಯೋಚನೆ ಮಾಡಬೇಕಾಗಿದೆ. 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹೇಳಿದಂತೆ ಪ್ರತೀ ರುನಲ್ಲಿ 15 ಪೈಸೆ ಮಾತ್ರ ಅಭಿವೃದ್ಧಿ ಕೆಲಸಗಳಿಗೆ ಹೋಗುತ್ತಿದೆ ಎಂದಿದ್ದರು.

ಅಭಿವೃದ್ಧಿ ಹಣ ಅಧಿಕಾರದಲ್ಲಿ ಇದ್ದವರಿಗೆ ಹೋದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಹೇಗೆ ಸಾಧ್ಯವಿದೆ? ಇಂದು ಹಗರಣಗಳಲ್ಲಿ ಜೈಲಿಗೆ ಹೋಗಿ ಬರುವ ವ್ಯಕ್ತಿಗಳಿಗೆ ಅದ್ಧೂರಿ ಸ್ವಾಗತ ಮಾಡುತ್ತಿದ್ದಾರೆ ಎಂದರೆ ಪರಿಸ್ಥಿತಿ ಎಲ್ಲಿಗೆ ಹೋಗಿದೆ?ದುರಾಸೆಗೆ ಮದ್ದು, ಮಿತಿ ಇಲ್ಲ. ಆದರೆ ಮನಸ್ಸು ಮಾಡಿದರೆ ದುರಾಸೆ, ಹಗರಣಗಳನ್ನು ತಡೆಯಬಹುದು. ಅದು ನಮ್ಮ ಹಿರಿಯರು ಕೊಟ್ಟ ತೃಪ್ತಿ ಎಂಬ ಸಾಧನದಿಂದ ಮಾತ್ರ ಸಾಧ್ಯವಾಗಿದೆ. ಇಂದು ನಾವು ಆರ್ಥಿಕ ಪರಿಸ್ಥಿತಿಯಲ್ಲಿ 4ನೇ ಸ್ಥಾನ ದಲ್ಲಿದ್ದು, ದುರಾಸೆಗೆ ಮಟ್ಟ ಹಾಕದಿದ್ದರೆ ಸಮಾಜದಲ್ಲಿ ಆರ್ಥಿಕ ಪರಿಸ್ಥಿಯಿಂದಾಗಿ ಶಾಂತಿ, ಸೌಹಾರ್ದತೆ ಕದಡಲಿದೆ.ಇಂದು ನಾವು ಎಂತಹ ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಎಂದು ನೋಡಬೇಕಾಗಿದೆ. ಹಿಂದೆ ಶಾಲೆಗಳಲ್ಲಿ ನೀತಿ ಪಾಠ ಇತ್ತು. ಆದರೆ ಇಂದು ಅದು ಇಲ್ಲವಾಗಿದೆ. ಪೋಷಕರು ಮಕ್ಕಳಿಗೆ ನೀತಿ ಪಾಠ ಹೇಳದೆ ಮೊಬೈಲ್, ಲ್ಯಾಪ್‌ಟಾಪ್‌ಗಳ ಮುಂದೆ ಕೂರು ತ್ತಿದ್ದಾರೆ.ಮಕ್ಕಳಿಗೆ ಅವರ ಭವಿಷ್ಯಕ್ಕಾಗಿ ಪ್ರಾಮಾಣಿಕತೆ ಮೌಲ್ಯಗಳನ್ನು ಅಳವಡಿಸಬೇಕು. ಮುಂದೆ ದೇಶದಲ್ಲಿ ಆರ್ಥಿಕತೆಗೆ ಕ್ರಾಂತಿ ಆಗಬಹುದು. ಆದರೆ ಇಂತಹ ಕ್ರಾಂತಿಗೆ ಎಂದೂ ಜಯವಾದ ಉದಾಹರಣೆ ಇಲ್ಲ. ತೃಪ್ತಿ ಮತ್ತು ಮಾನವೀಯತೆಯನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದರು.ಜೇಸಿ ವಲಯಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಜೇಸಿ ಸಂಸ್ಥೆ ಯುವಜನರ ವ್ಯಕ್ತಿತ್ವ ವಿಕಸನದಲ್ಲಿ ತೊಡಗಿಕೊಂಡಿದ್ದು, ಯುವಕರಿಗೆ ಅಗತ್ಯ ತರಬೇತಿಗಳನ್ನು ನೀಡುತ್ತ ಸಮಾಜದಲ್ಲಿ ಬದಲಾವಣೆ ತರುತ್ತಿದೆ. ಬಾಳೆಹೊನ್ನೂರು ಜೇಸಿ ಘಟಕ ಉತ್ತಮ ಕಾರ್ಯಗಳನ್ನು ಮಾಡುತ್ತ ಜನರ ಮನದಲ್ಲಿ ನೆಲೆಯೂರಿದೆ ಎಂದರು.ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಶಾಫಿ, ಕಾರ್ಯದರ್ಶಿಯಾಗಿ ವಿ.ಅಶೋಕ, ಲೇಡಿ ಜೇಸಿ ಅಧ್ಯಕ್ಷೆಯಾಗಿ ಫೌಜಿಯಾ ಶಾಫಿ, ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ನಿಶ್ಚಿತ್ ಹಿಲರಿ ಮಿಸ್ಕಿತ್ ಪದಗ್ರಹಣ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ಶೃಜಿತ್ ಹುಯಿಗೆರೆ, ಜೇಸಿ ವಲಯ ಉಪಾಧ್ಯಕ್ಷ ಪ್ರಶಾಂತ್‌ಕುಮಾರ್, ಪ್ರಮುಖರಾದ ಬಿಂದು ಶಶಿಧರ್, ಅಂಕುಶ್ ಪೂಜಾರಿ, ಕಾರ್ಯಕ್ರಮ ನಿರ್ದೇಶಕ ಸಿ.ವಿ.ಸುನೀಲ್ ಮತ್ತಿತರರು ಹಾಜರಿದ್ದರು.೧೨ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಜೇಸಿಐ ಸಂಸ್ಥೆ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಶಾಫಿ ನಿರ್ಗಮಿತ ಅಧ್ಯಕ್ಷ ಎನ್.ಶಶಿಧರ್ ಅವರಿಂದ ಅಧಿಕಾರ ಸ್ವೀಕರಿಸಿದರು. ನಿವೃತ್ತ ಲೋಕಾಯುಕ್ತ ಎನ್. ಸಂತೋಷ್‌ಹೆಗ್ಡೆ, ವಿಜಯಕುಮಾರ್, ಪ್ರಶಾಂತ್‌ಕುಮಾರ್, ಅಶೋಕ, ಶೃಜಿತ್ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ