ಚೆಲುವನಾರಾಯಣಸ್ವಾಮಿ ಪ್ರಹ್ಲಾದ ಪರಿಪಾಲನ ಉತ್ಸವ

KannadaprabhaNewsNetwork | Published : Apr 10, 2025 1:02 AM

ಸಾರಾಂಶ

ವೈರಮುಡಿ ಉತ್ಸವದ ನಂತರ ರಾಜ ಒಡೆಯರ್ ರಾಜಮುಡಿ ಉತ್ಸವಕ್ಕಾಗಿಯೇ ನಿರ್ಮಿಸಿರುವ ವಾಹನೋತ್ಸವ ಮಂಟಪದಲ್ಲಿ ವೈರಮುಡಿ ಅಲಂಕಾರ ತೆಗೆದು ರಾಜಮುಡಿ ಕಿರೀಟಧರಿಸಿ ಉತ್ಸವ ನೆರವೇರಿಸಲಾಯಿತು. ನಂತರ ಪಡಿಯೇತ್ತಕಾರ್ಯಕ್ರಮ ನಡೆದು ವೈರಮುಡಿ ಉತ್ಸವದ ಧಾರ್ಮಿಕ ಕೈಂಕರ್ಯಗಳು ಮಂಗಳವಾರ ಬೆಳಗ್ಗೆ 8ಗಂಟೆಗೆ ಮುಕ್ತಾಯವಾಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ 5ನೇ ತಿರುನಾಳ್ ನಿಮಿತ್ತ ಮಂಗಳವಾರ ಸಂಜೆ ಪ್ರಹ್ಲಾದ ಪರಿಪಾಲನ ಉತ್ಸವ ವೈಭವದಿಂದ ನೆರವೇರಿತು.

ಹಿರಣ್ಯಕಶುಪುವನ್ನು ಸಂಹರಿಸಿ ಪ್ರಹ್ಲಾದನಿಗೆ ಅಭಯ ನೀಡಿದ ಮಹಾವಿಷ್ಣುವಿನ ನರಸಿಂಹ ಅವತಾರದ ಪ್ರತೀಕವಾಗಿ ಚೆಲುವನಾರಾಯಣನಿಗೆ ಪ್ರಹ್ಲಾದ ಪರಿಪಾಲನ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.

ಶ್ವೇತಛತ್ರಿಗಳ ನಡುವೆ ರಾಜಮುಡಿ ಕಿರೀಟಧಾರಣೆಯೊಂದಿಗೆ ಕಂಗೊಳಿಸಿದ ಸ್ವಾಮಿಯ ಚೆಲುವನ್ನು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು. ನಂತರ 9ಗಂಟೆಗೆ ಗರುಡವಾಹನೋತ್ಸವ ವೈಭವದಿಂದ ನೆರವೇರಿತು.

ವೈರಮುಡಿ ಉತ್ಸವದ ನಂತರ ರಾಜ ಒಡೆಯರ್ ರಾಜಮುಡಿ ಉತ್ಸವಕ್ಕಾಗಿಯೇ ನಿರ್ಮಿಸಿರುವ ವಾಹನೋತ್ಸವ ಮಂಟಪದಲ್ಲಿ ವೈರಮುಡಿ ಅಲಂಕಾರ ತೆಗೆದು ರಾಜಮುಡಿ ಕಿರೀಟಧರಿಸಿ ಉತ್ಸವ ನೆರವೇರಿಸಲಾಯಿತು. ನಂತರ ಪಡಿಯೇತ್ತಕಾರ್ಯಕ್ರಮ ನಡೆದು ವೈರಮುಡಿ ಉತ್ಸವದ ಧಾರ್ಮಿಕ ಕೈಂಕರ್ಯಗಳು ಮಂಗಳವಾರ ಬೆಳಗ್ಗೆ 8ಗಂಟೆಗೆ ಮುಕ್ತಾಯವಾಯಿತು.

ಇಂದು ಮಹಾರಥೋತ್ಸವ:

ವೈರಮುಡಿ ಬ್ರಹ್ಮೋತ್ಸವದ 6ನೇ ತಿರುನಾಳ್ ಅಂಗವಾಗಿ ಗುರುವಾರ ಮಹಾರಥೋತ್ಸವ ನೆರವೇರಲಿದ್ದು ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಶ್ರೀದೇವಿಭೂದೇವಿ ಕಲ್ಯಾಣನಾಯಕಿಯರು ಆಚಾರ್ಯರಾಮಾನುಜರ ಸಮೇತನಾದ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ 7 ನೇ ತಿರುನಾಳ್ ಅಂಗವಾಗಿ ಮಹಾರಥೋತ್ಸವ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಯಾತ್ರಾದಾನದ ನಂತರ ಉತ್ಸವ ಆರಂಭವಾಗಲಿದೆ. ಪೂಜಾಕೈಂಕರ್ಯಗಳು ಮುಗಿದ ನಂತರ ಮಹಾರಥೋತ್ಸವ ಆರಂಭವಾಗಿ ಚತುರ್ವೀದಿಗಳಲ್ಲಿ ಸಂಚರಿಸಲಿದೆ. ರಥೋತ್ಸವದ ರಾತ್ರಿ ಹರಿಜನರ ಸೇವೆಯಾದ ಬಂಗಾರದ ಪಲ್ಲಕ್ಕಿ ಉತ್ಸವ ನೆರವೇರಲಿದೆ.

6ನೇ ತರಗತಿಗೆ ದಾಖಲಿಸಲು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಮಳವಳ್ಳಿ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರತಿಷ್ಟಿತ ಶಾಲೆಗಳಲ್ಲಿ 6ನೇ ತರಗತಿಗೆ ದಾಖಲಿಸಲು ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 5ನೇ ತರಗತಿಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತಿರ್ಣದ ಜೊತೆಗೆ ವಾರ್ಷಿಕ ಎರಡೂವರೆ ಲಕ್ಷಗಳ ಆದಾಯದ ಮಿತಿಯೊಳಗಿರುವ ಅರ್ಹ ಅಭ್ಯರ್ಥಿಗಳು ಏ.15ರಿಂದ ಮೇ 3ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ದಾಖಲೆಗಳನ್ನು ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಮಂಡ್ಯ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಸಂಪರ್ಕಿಸಬೇಕೆಂದು ಇಲಾಖೆಯ ಸಹಾಯಕ ನಿರ್ದೆಶಕ ಸಂತೋಷ್ ಕುಮಾರ್ ತಿಳಿಸಿದ್ದಾರೆ.

Share this article