ಕನ್ನಡಪ್ರಭ ವಾರ್ತೆ ಅರಸೀಕೆರೆ
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಕಳೆ ರಂಗು ತಂದಿತ್ತು. ದೇವತೆ ಶ್ರೀ ಪ್ಲೇಗಿನಮ್ಮ ದೇವಿಯವರ ದೇವಾಲಯದಲ್ಲಿ ಬೆಳಿಗ್ಗೆ ಅಭಿಷೇಕ, ಅಷ್ಟಾವದಾನ ಸೇವೆ, ವಿಶೇಷ ಹೂವಿನ ಅಲಂಕಾರ, ನಾನಾ ಬಗೆಯ ಪೂಜಾ ಕೈಂಕರ್ಯ ಧಾರ್ಮಿಕ ವಿಧಿ-ವಿಧಾನಗಳಿಂದ ಶಾಸ್ತ್ರೋಕ್ತವಾಗಿ ನೆರವೇರಿದವು.
ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಭಾಗವಹಿಸಿ ಮಾತನಾಡಿ, ಯಾವುದೇ ಧರ್ಮದ ಹಬ್ಬ ಆಚರಣೆ ಇರಬಹುದು ಅಥವಾ ಈ ರೀತಿಯ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವವಿರಬಹುದು ಇವುಗಳ ಆಚರಣೆಯ ಮೂಲ ಆಶಯವೆಂದರೆ, ಸಮಾಜದ ಪ್ರತಿಯೊಬ್ಬರು ಕೂಡಿಕೊಂಡು ಹಬ್ಬ, ಹರಿದಿನ ಜಾತ್ರಾ ಮಹೋತ್ಸವ ಆಚರಣೆ ಮಾಡಿದರೆ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ ಎಂದರು.ಶ್ರೀ ಪ್ಲೇಗಿನಮ್ಮ ದೇವಿ ಶಕ್ತಿ ದೇವತೆಯಾಗಿದ್ದು, ಶ್ರದ್ಧೆ ಭಕ್ತಿಯಿಂದ ನಡೆದುಕೊಳ್ಳುವ ತನ್ನ ಭಕ್ತರನ್ನು ಉದ್ದರಿಸುತ್ತಾ ಬಂದಿರುವುದರಿಂದಲೇ ದೇವಿಯ ಮಹಿಮೆ ಮತ್ತು ಪವಾಡಗಳು ಭಕ್ತರಿಗೆ ಮನವರಿಕೆಯಾಗಿದೆ. ದಯಾಮಯಳಾಗಿರುವ ಶ್ರೀ ಪ್ಲೇಗಿನಮ್ಮ ದೇವಿ ಆಶೀರ್ವಾದ ನಮ್ಮೆಲ್ಲರ ಮೇಲು ಇರಲಿ ಎಂದು ಪ್ರಾರ್ಥಿಸಿವುದಾಗಿ ಹೇಳಿದರು.
ನೆರೆದಿದ್ದ ಭಕ್ತರು ಶ್ರೀ ದೇವಿಯ ನಾಮ ಸ್ಮರಣಿಯ ಜಯಘೋಷ ಮುಗಿಲು ಮುಟುತ್ತಿದ್ದಂತೆ ಭಕ್ತರು ರಥ ಎಳೆದರು. ಇದೇ ವೇಳೆ ಭಕ್ತಾದಿಗಳು ರಥದ ಕಲಶಕ್ಕೆ ಬಾಳೆಹಣ್ಣು, ಧವನ ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ನಂತರ ಉಯ್ಯಾಲೆ ಸೇವೆ ಮತ್ತು ವಸಂತ ಸೇವೆ ನಡೆಸಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ವೇಳೆ ರಂಗಾಪುರ, ಮೂತಿಕೆರೆ, ಮತ್ತಿಹಳ್ಳಿ ಕೊಪ್ಪಲು ಗ್ರಾಮದ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ಮುಖಂಡರು, ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.