ಸಂಭ್ರಮದ ಗೋಪಾಲಸ್ವಾಮಿ ಜಾತ್ರೆ

KannadaprabhaNewsNetwork |  
Published : Mar 26, 2025, 01:33 AM IST
ಸಂಭ್ರಮದಲ್ಲಿ ನಡೆದ ಗೋಪಾಲಸ್ವಾಮಿ ಜಾತ್ರೆ | Kannada Prabha

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹಿಮವದ್‌ ಗೋಪಾಲಸ್ವಾಮಿ ರಥೋತ್ಸವ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತದೊಳಗಿನ ನಾಡಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಂಗಳವಾರ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ಸಂಭ್ರಮ-ಸಡಗರದಲ್ಲಿ ನಡೆಯಿತು.ಜಾತ್ರೆಗೆ ರಾಜ್ಯದ ನಾನಾ ಕಡೆ ಹಾಗೂ ಸ್ಥಳೀಯ ಭಕ್ತರು ಗುರುವಾರ ಬೆಳಗ್ಗೆಯಿಂದಲೇ ಬೆಟ್ಟಕ್ಕೆ ಬಿಸಿಲಿನ ನಡುವೆಯೂ ಜಮಾಯಿಸಿ ಗೋಪಾಲಸ್ವಾಮಿ ಹೊತ್ತ ತೇರು ಎಳೆದು ಪುನೀತರಾದರು. ಗೋಪಾಲಸ್ವಾಮಿ ಬೆಟ್ಟದ ತಪ್ಪಲು ಹಾಗೂ ಗುಂಡ್ಲುಪೇಟೆಯಿಂದ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಬಂದ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳ ನಂತರ ಹಿಮವದ್‌ ಗೋಪಾಲಸ್ವಾಮಿಯವರ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು ದೇವಾಲಯದ ಸುತ್ತಲೂ ಗೋವಿಂದ, ಗೋಪಾಲ ಎಂಬ ಜೈಕಾರದೊಂದಿಗೆ ಪ್ರದಕ್ಷಿಣೆ ಹಾಕಿಸಲಾಯಿತು. ದೇವಾಲಯದ ಉತ್ತರ ಪಾರ್ಶ್ವದಲ್ಲಿನ ಹಸಿರು ಚಪ್ಪರದಡಿ ಇರಿಸಿ ಪೂಜೆ ಸಲ್ಲಿಸಿದ ಬಳಿಕ ಕಾಡಿನಿಂದ ತಂದಿದ್ದ ಪಣತಾರು (ಕುಚ್ಚು) ವಿವಿಧ ಬಗೆಯ ಫಲಪುಷ್ಪಗಳಿಂದ ಶೃಂಗಾರಗೊಂಡ ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ನಿಲ್ಲಿಸಿದ್ದ ರಥದಲ್ಲಿ ಉತ್ಸವ ಮೂರ್ತಿ ಇರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಕೆ.ವಿ.ಗೋಪಾಲಕೃಷ್ಣ ಭಟ್ ಮಹಾ ಮಂಗಳಾರತಿ ನೆರವೇರಿಸಿದರು. ತಹಸೀಲ್ದಾರ್ ಟಿ.ರಮೇಶ್‌ ಬಾಬು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಭಕ್ತರು ಗೋವಿಂದ, ಗೋವಿಂದ, ಗೋಪಾಲ ಎಂಬ ಹರ್ಷೋದ್ಗಾರದೊಂದಿಗೆ ರಥವನ್ನು ಎಳೆದು ಸಾಗುವಾಗ ದೇವಾಲಯದ ಹೊರ ಆವರಣದ ಎರಡು ಕಡೆ ನಿಂತಿದ್ದ ಭಕ್ತರು ರಥೋತ್ಸವಕ್ಕೆ ನಮಿಸಿ,ಹಣ್ಣು-ಧವನ ಎಸೆದು ಇಷ್ಟಾರ್ಥಗಳ ಸಿದ್ಧಿಗೆ ಪ್ರಾರ್ಥಿಸಿದರು. ಒಂದು ಸುತ್ತು ಪ್ರದಕ್ಷಿಣೆ ನಂತರ ಮೂಲಸ್ಥಾನದಲ್ಲಿ ರಥೋತ್ಸವ ಕೊನೆಗೊಂಡಿತು. ಪಾಲಿಸಿಕೊಂಡು ಬಂದಂತೆ ಅರಣ್ಯದಲ್ಲಿ ಸಿಗುವ ಒತ್ತರದ ಹಂಬು ಬಳಸಿ ರಥವನ್ನುಎಳೆಯುವುದು ಈ ಜಾತ್ರೆಯ ವಿಶೇಷ. ಪ್ರತಿ ವರ್ಷದಂತೆ ಗೋಪಾಲಪುರ,ಕಣ್ಣೇಗಾಲ, ದೇವರಹಳ್ಳಿ ಹಾಗೂ ಹೊನ್ನೇಗೌಡನಹಳ್ಳಿ ಗ್ರಾಮದವರು(ತೇರು ಬಿಟ್ಟಿ ಸಂಘ) ರಥೋತ್ಸವ ಯಶಸ್ವಿಗೊಳಿಸಿದರು.

ತೀವ್ರ ನಿಗಾ:

ಬೇಸಿಗೆ ಕಾಲವಾದ ಕಾರಣ ರಥೋತ್ಸವಕ್ಕೆ ಬರುವ ಭಕ್ತರು ಮತ್ತು ಜನಸಾಮಾನ್ಯರು ಅರಣ್ಯದೊಳಕ್ಕೆ ಪ್ರವೇಶಿಸದಂತೆ ಬ್ಯಾರಿಕೇಡ್ ಮತ್ತು ಟೇಪ್ ಕಟ್ಟಿ,ಕಾವಲು ಕಾಯುವ ಮೂಲಕ ಅರಣ್ಯ ಇಲಾಖೆ ನೌಕರರು ಮತ್ತು ಸ್ವಯಂ ಸೇವಕರು ನಿಗಾ ಇಟ್ಟಿದ್ದರು. ಗುಂಡ್ಲುಪೇಟೆ ಪ್ರಭಾರ ಪೊಲೀಸ್ ಇನ್ಸ್‌ಪೆಕ್ಟರ್‌ ಸಾಗರ್‌ ಮಾರ್ಗದರ್ಶನದಲ್ಲಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು.

ಗೋಪಾಲಸ್ವಾಮಿ ಜಾತ್ರೆಯಂದು ಆಗಮಿಸುವ ಭಕ್ತರಿಗೆ ದಾನಿಗಳು ಮಜ್ಜಿಗೆ, ಪಾನಕ,ಉಪಹಾರ ವ್ಯವಸ್ಥೆ ಮಾಡಿದ್ದರು. ತಾಲೂಕಿನ ಹಂಗಳ,ಹಂಗಳದ ಸೋನಾಪುರದ ಬಸವೇಶ್ವರ ದೇವಾಲಯ,ಬೆಟ್ಟದ ತಪ್ಪಲು,ಮಜ್ಜಿಗೆ,ಪಾನಕ,ರೈಸ್‌ಬಾತ್,ಮೊಸರನ್ನ ದಾನಿಗಳು ವಿತರಿಸಿದರು.

ಬಸವಳಿದ ಭಕ್ತರು:

ಗೋಪಾಲಸ್ವಾಮಿ ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಭಕ್ತರು ಸಾರಿಗೆ ಬಸ್ಸಿನಲ್ಲೇ ಬೆಟ್ಟಕ್ಕೆ ತೆರಳಬೇಕಿರುವ ಕಾರಣ ಬಿಸಿಲಿನಲ್ಲಿ ಬಸ್‌ಗಾಗಿ ಕಾದು ನಿಂತ ಕಾರಣ ನಗರ ಪ್ರದೇಶದ ಭಕ್ತರು ಬಸವಳಿಸಿದರು.

ಗೋಪಾಲನ ದರ್ಶನ ಪಡೆದ ಶಾಸಕ ಗಣೇಶ್

ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದ ಗೋಪಾಲಸ್ವಾಮಿ ಜಾತ್ರೆಗೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭೇಟಿ ನೀಡಿ ದೇವರ ದರ್ಶನ ಪಡೆದರು. ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಶಿಧರ್‌, ಡಿವೈಎಸ್ಪಿ ಲಕ್ಷ್ಮಯ್ಯ, ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ.ನವೀನ್‌ ಕುಮಾರ್, ಆರ್‌ಎಫ್‌ಒ ಬಿ.ಎಂ.ಮಲ್ಲೇಶ್‌ ಜಾತ್ರೆಗೆ ಭೇಟಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''