ಕನ್ನಡಪ್ರಭ ವಾರ್ತೆ ಹೊಸಪೇಟೆ
ಬಹುನಿರೀಕ್ಷಿತ ಸೆಪ್ಟೆಂಬರ್ 10 ಚಿತ್ರ ರಾಜ್ಯಾದ್ಯಂತ ಆ. 8ರಂದು ತೆರೆ ಕಾಣಲಿದ್ದು, ಉತ್ತಮ ಸಂದೇಶ ಸಾರುವ ಈ ಚಿತ್ರವನ್ನು ಕನ್ನಡ ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ಸಾಯಿಪ್ರಕಾಶ್ ಮನವಿ ಮಾಡಿದರು.ನಗರದ ಪತ್ರಿಕಾ ಭವನದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲಿಯೂ ಯುವಕರು, ಮಕ್ಕಳು ಹಾಗೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ, ಇದರಿಂದ ಹೊರ ಬರುವುದು ಹೇಗೆ ಎಂಬ ಸಂದೇಶವನ್ನು ಚಿತ್ರ ಸಾರಿ ಹೇಳಲಿದೆ. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ಹೋಗಲಿದೆ. ಹೀಗಾಗಿ ಸರ್ಕಾರ ಈ ಚಿತ್ರಕ್ಕೆ ವಿಶೇಷ ರಿಯಾಯತಿ ನೀಡಿ, ಪ್ರೋತ್ಸಾಹಿಸಬೇಕಾಗಿದೆ ಎಂದರು.
ಈ ಚಿತ್ರದಲ್ಲಿ ಹಿರಿಯ ಕಲಾವಿದರಾದ ಶ್ರೀನಿವಾಸ ಮೂರ್ತಿ, ಪದ್ಮ ವಾಸಂತಿ, ಶಶಿಕುಮಾರ್, ರಂಗಾಯಣ ರಘು, ಪ್ರಕಾಶ್ ರಾವ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಹೊಸ ಪ್ರತಿಭೆ ಜಯಸಿಂಹ ನಾಯಕ ನಟನಾಗಿ ನಟಿಸುತ್ತಿದ್ದಾರೆ ಎಂದರು.ಕಳೆದ 40 ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ನೆಲಯೂರಿರುವ ನಾನು ಅನೇಕ ಭಕ್ತಿ ಪ್ರಧಾನ ಚಿತ್ರಗಳಿಗೆ ನಿರ್ದೇಶನ ಮಾಡಿರುವೆ. ಅದರಲ್ಲಿ 9 ಚಿತ್ರಗಳನ್ನು ನಿರ್ಮಾಣ ಮಾಡಿರುವೆ. ಶೇ.80ರಷ್ಟು ಚಿತ್ರಗಳು ಯಶ್ವಸಿಯಾಗಿವೆ. ನಟರಾದ ವಿಷ್ಣುವರ್ಧನ, ಶಿವರಾಜ್ ಕುಮಾರ್, ಮಾಲಾಶ್ರೀ, ಪುನೀತ್ ರಾಜಕುಮಾರ್ ಸೇರಿದಂತೆ ಹಲವು ದಿಗ್ಗಜರ ಚಿತ್ರಗಳನ್ನು ನಿರ್ದೇಶನ ಮಾಡಿ, ಯಶಸ್ಸು ಕಂಡಿರುವೆ. ಬಹುದಿನಗಳ ಬಳಿಕ ಇದೀಗ ವಿಭಿನ್ನವಾದ ಕಥಾವಸ್ತು ಒಳಗೊಂಡ ಚಿತ್ರವನ್ನು ಕನ್ನಡ ಪ್ರೇಕ್ಷಕರ ಮುಂದೆ ತಂದಿರುವೆ. ಕನ್ನಡಿಗರು ಈ ಚಿತ್ರ ಗೆಲ್ಲಿಸಬೇಕು ಎಂದರು. ಈ ಸಂದರ್ಭ ನಟರಾದ ಪ್ರಕಾಶ್ ರಾವ್, ಜಯಸಿಂಹ, ಕರವೇ ಮುಖಂಡರಾದ ಗುಜ್ಜಲ ನಾಗರಾಜ, ತಾರಿಹಳ್ಳಿ ಹನುಮಂತಪ್ಪ, ಜಾಫರ್ ಇದ್ದರು.