ಗ್ಯಾರಂಟಿಯಿಂದ ಸಂಪೂರ್ಣ ಹದಗೆಟ್ಟಿದೆ ರಾಜ್ಯದ ಆರ್ಥಿಕ ಪರಿಸ್ಥಿತಿ

KannadaprabhaNewsNetwork | Published : Apr 18, 2024 2:25 AM

ಸಾರಾಂಶ

ಕಾಂಗ್ರೆಸ್ಸಿನ 5 ಗ್ಯಾರಂಟಿಯಿಂದ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯದ ಅಭಿವೃದ್ಧಿ ಶೂನ್ಯ ವಾಗಿದೆ. ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಶಾಸಕರನ್ನು ತೃಪ್ತಿಗೊಳಿಸಲು 139 ಶಾಸಕರ ಪೈಕಿ 94 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಗಾದಿ ಕೊಟ್ಟು, ಸಚಿವ ಸ್ಥಾನಮಾನ ನೀಡಿ ಆರ್ಥಿಕ ದಿವಾಳಿಗೆ ಪುಷ್ಟಿ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.

ರಾಜ್ಯದ 28 ಸ್ಥಾನಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುವುದು ನಿಸ್ಸಂಶಯ; ದೇವೇಗೌಡ ಭರವಸೆ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಕಾಂಗ್ರೆಸ್ಸಿನ 5 ಗ್ಯಾರಂಟಿಯಿಂದ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯದ ಅಭಿವೃದ್ಧಿ ಶೂನ್ಯ ವಾಗಿದೆ. ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಶಾಸಕರನ್ನು ತೃಪ್ತಿಗೊಳಿಸಲು 139 ಶಾಸಕರ ಪೈಕಿ 94 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಗಾದಿ ಕೊಟ್ಟು, ಸಚಿವ ಸ್ಥಾನಮಾನ ನೀಡಿ ಆರ್ಥಿಕ ದಿವಾಳಿಗೆ ಪುಷ್ಟಿ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಸರ್ಕಾರ ಆರ್ಥಿಕವಾಗಿ ಸಂಕಷ್ಟ ಅನುಭವಿಸಿದ ಸಂದರ್ಭದಲ್ಲಿ ಪಿಯರ್‌ಲೆಸ್ ಕಂಪನಿಯಿಂದ 180 ಕೋಟಿ ಹಣ ಸಾಲ ಪಡೆದಿದ್ದರು. 1994 ರಲ್ಲಿ ನಾನು ಮುಖ್ಯಮಂತ್ರಿಯಾದಾಗ ಸರ್ಕಾರದ ಬೊಕ್ಕಸ ತುಂಬಿಸುವ ಕೆಲಸ ಮಾಡಿದ್ದೆ. ಸಂಪೂರ್ಣ ಸಾಲ ತೀರಿಸಿದ್ದೆ. ಆಗ ಎಲ್ಲಾ ಶಾಸಕರಿಗೂ ಸ್ಥಾನಮಾನ ನೀಡಲು ಅವಕಾಶವಿದ್ದರೂ ನಾನು ಹಾಗೆ ಮಾಡಲಿಲ್ಲ. ಈಗಿನ ಸರ್ಕಾರದಲ್ಲಿ ಅಧಿಕಾರ ನೀಡಲು ಸಾಧ್ಯವಿಲ್ಲದಿದ್ದರೂ ಶಾಸಕರ ಹಿಡಿದಿಟ್ಟುಕೊಳ್ಳಲು ಸಿದ್ದರಾಮಯ್ಯ ಅವರಿಗೆ ನಿಗಮ ಮಂಡಳಿಯಲ್ಲಿ ಸಂಪುಟ ದರ್ಜೆ ಸ್ಥಾನಮಾನ ನೀಡಿ ಬೇಕಾ ಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.ತಾನು ಪ್ರಧಾನಿಯಾಗಿದ್ದಾಗ ತೆರಿಗೆ ಸಂಗ್ರಹಿಸಿ ರೈತರ ಸಾಲದ ಮೇಲಿನ 980 ಕೋಟಿ ರು. ಬಡ್ಡಿ ಮನ್ನಾ ಮಾಡಿದ್ದೆ. ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ನೀಡಿದ್ದೆ ಎಂದು ತಿಳಿಸಿದರು.ಉತ್ತರ ಪ್ರದೇಶದಲ್ಲಿ ನೆಹರೂ 16 ವರ್ಷ, ಇಂದಿರಾಗಾಂಧಿ 17 ವರ್ಷ ಮತ್ತು ರಾಜೀವ್‌ಗಾಂಧಿ 6 ವರ್ಷ ಸಂಸದರಾಗಿದ್ದರು. ಈಗ ಗಾಂಧಿ ಕುಟುಂಬವನ್ನು ಉತ್ತರಪ್ರದೇಶದಿಂದ ಹೊರಹಾಕಲಾಗಿದೆ. ಸೋನಿಯಾ ರಾಜಸ್ಥಾನದಿಂದ ರಾಜ್ಯ ಸಭೆಗೆ, ರಾಹುಲ್‌ಗಾಂಧಿ ಕೇರಳದ ವಯನಾಡ್‌ನಿಂದ ಲೋಕಸಭೆಗೆ ಹೋಗಬೇಕಾಯಿತು. ದೇಶದ 18 ರಾಜ್ಯದಲ್ಲಿ ಬಿಜೆಪಿ ಅಧಿಕಾರ ದಲ್ಲಿದೆ. ಕೇಂದ್ರದಲ್ಲಿ 10 ವರ್ಷದ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರಮೋದಿ ಸ್ವಚ್ಛ ಆಡಳಿತ ನಡೆಸಿದ್ದಾರೆ. ವಿಶ್ವದ ಆರ್ಥಿಕ ಸ್ಥಿತಿಯಲ್ಲಿ ಭಾರತ ಈಗ 5ನೇ ಸ್ಥಾನದಲ್ಲಿದೆ. ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ನಮ್ಮ ಸ್ಥಾನ 3ಕ್ಕೇರಲಿದೆ ಎಂದರು.ನಾಲ್ವಡಿ ಕೃಷ್ಣರಾಜ ಒಡೆಯರ್ ಅರಮನೆ ಸಂಪತ್ತನ್ನೆಲ್ಲಾ ಮಾರಾಟ ಮಾಡಿ ಕನ್ನಂಬಾಡಿಕಟ್ಟೆ ನಿರ್ಮಿಸಿದ್ದರು. ವಿಶ್ವೇಶ್ವರಯ್ಯ ನಂತರ ಬಂದು ಹೋಗಿದ್ದಾರೆ. ಅಂತಹ ರಾಜಮನೆತನದ ಸದಸ್ಯನಿಗೆ ಮೈಸೂರು ಲೋಕ ಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದ್ದನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದು ಕಾಂಗ್ರೆಸ್ಸಿಗರಿಗೆ ಶೋಭೆ ತರುವುದಿಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರ ಗಳಲ್ಲಿ ಒಂದೂವರೆ ಯಿಂದ ಎರಡೂವರೆ ಲಕ್ಷದವರೆಗೆ ಜೆಡಿಎಸ್ ಮತವಿದೆ. ಈ ಮತಗಳು ಬಿಜೆಪಿಗೆ ಸಿಗಬೇಕು. ಹಾಸನ, ಮಂಡ್ಯ, ಕೋಲಾರದಲ್ಲಿ ಈ ಮತಗಳು ಜೆಡಿಎಸ್ ಅಭ್ಯರ್ಥಿಗೆ ತಲುಪಬೇಕು ಎಂದರು.ರಾಜ್ಯದ 28 ಸ್ಥಾನಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುವುದು ನಿಸ್ಸಂಶಯ. ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಪರ ಮತಯಾಚನೆ ಮಾಡುತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಪ್ರತಿ ಕ್ಷೇತ್ರದಲ್ಲಿ ನಾನೇ ಪ್ರವಾಸ ಮಾಡಿ ಬಿಜೆಪಿಗೆ ಮತ ನೀಡಲು ಕಾರ್ಯ ಕರ್ತರಿಗೆ ಹೇಳುತ್ತೇನೆ. 28 ಸ್ಥಾನಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ ಕುಮಾರ್, ಮಾಜಿ ಶಾಸಕ ವೈಎಸ್‌ವಿ ದತ್ತ,, ಮುಖಂಡರಾದ ಡಿ.ಜೆ.ಸುರೇಶ್, ಚೈತ್ರಶ್ರೀ ಮಾಲತೇಶ್, ದೀಪಕ್ ದೊಡ್ಡಯ್ಯ, ಸುಧಾಕರ ಶೆಟ್ಟಿ ಇದ್ದರು.----- ಬಾಕ್ಸ್ ------ಆಸ್ತಿ ಗಳಿಕೆ ಸಮರ: ಡಿಕೆಶಿಗೆ ಟಾಂಗ್ ಕೊಟ್ಟ ದೇವೇಗೌಡಮೂಡಿಗೆರೆ: ಅಮೇರಿಕಾದಲ್ಲಿ ಹಣ ಸಂಪಾದನೆ ಮಾಡಿಕೊಂಡು ಬಂದ ಬಿಡದಿ ವ್ಯಕ್ತಿಯ 9 ವರ್ಷದ ಮಗಳನ್ನು ಕಿಡ್ನಾಪ್ ಮಾಡಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಡುತ್ತಾರೆ. ನಂತರ, ವ್ಯಕ್ತಿಯನ್ನು ಬೆದರಿಸಿ ಎಲ್ಲ ಆಸ್ತಿಯನ್ನು ಬರೆಸಿಕೊಳ್ಳುತ್ತಾರೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲದಕ್ಕೂ ನನ್ನ ಬಳಿ ದಾಖಲೆಯಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಮೆರಿಕಾದಲ್ಲಿ ಹಣ ಸಂಪಾದಿಸಿಕೊಂಡು ಬಂದ ಮನುಷ್ಯನ ಆಸ್ತಿ ಬರೆಸಿಕೊಂಡಿದ್ದರು. ಬಿಡದಿ ಹತ್ತಿರ ರಸ್ತೆ ಪಕ್ಕದಲ್ಲಿ, ಅವರು ಒಂದು ಐಟಿ ಕಂಪನಿಯನ್ನು ಸ್ಥಾಪನೆ ಮಾಡಿದ್ದರು. ಅದರ ಹಿಂದಿನ ದಿನ ಇವರು ಒಂದು ಸುಳ್ಳು ಕ್ರಯ ಪತ್ರ ಸ್ಥಾಪನೆ ಮಾಡುತ್ತಾರೆ. ಅದರ ದಾಖಲೆ ನನ್ನ ಬಳಿ ಇದೆ. ಆಸ್ತಿ ಬರೆಸಿಕೊಂಡಿದ್ದ ಕೇಸ್ ಅನ್ನು ಹೈ ಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಹಾಕಿದರು. ಅಲ್ಲಿ ಅವರಿಗೆ ಭಾರಿ ಮುಖಭಂಗ ಆಯ್ತು. ಇದಾದ ನಂತರ ಆಸ್ತಿ ಮಾಲೀಕನ 9 ವರ್ಷದ ಮಗಳನ್ನ ಕರೆದುಕೊಂಡು ಹೋಗಿ ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಇಡ್ತಾರೆ. ನಿನ್ನ ಮಗಳು ಬೇಕು ಅಂದ್ರೆ ಸಹಿ ಮಾಡು ಎಂದು ಬೆದರಿಸುತ್ತಾರೆ. ಆ ಮಗುವಿನ ತಾಯಿ ಎಲ್ಲಾ ಬರೆದುಕೊಟ್ಟು ನನ್ನ ಮಗಳ ಕರೆದುಕೊಂಡು ಬನ್ನಿ ಎಂದು ಗಂಡನ ಕಾಲು ಹಿಡಿಯುತ್ತಾಳೆ.

ಗಂಡ ಹೆಂಡತಿ ಮಗುವಿನ ಬಳಿ ಹೋದಾಗ ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಟ್ಟಿದ್ದ ಹೆಣ್ಣು ಮಗುವನ್ನು ಮುಂದೆ ಕರೆದುಕೊಂಡು ಬಂದು ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತದೆ. ಮತ್ತೆ ಒಳಗೆ ತೆಗೆದುಕೊಂಡು ಹೋಗ್ತಾರೆ. ಇದಕ್ಕೆ ನನ್ನ ಮುಂದೆ ದಾಖಲೆ ಇದೆ. ಇದನ್ನ ಎಲೆಕ್ಷನ್ ನಲ್ಲಿ ಬಳಸಿಕೊಳ್ಳಿ ಎಂದು ಲಾಯರ್ ಒಬ್ಬರು ನನಗೆ ಸಂಪೂರ್ಣ ದಾಖಲೆ ತಂದುಕೊಟ್ಟರು. ನಾನು ಅನ್ಯಾಯಕ್ಕೊಳಗಾದ ವ್ಯಕ್ತಿ ಬಳಿಗೆ ಹೋದಾಗ ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನಾನು ಓಟರ್ ಲಿಸ್ಟ್‌ನಲ್ಲಿಯೇ ಇಲ್ಲ. ಈ ಕರ್ನಾಟಕ ಸಾಕು ಎಂದರು.

ಅವರ ಹೆಸರು ನನಗೆ ಮರೆತೋಗಿದೆ. ಬಹಳ ವರ್ಷ ಆಯ್ತು. ಎಲ್ಲವನ್ನೂ ಕಳೆದುಕೊಂಡ ಮೇಲೆ ಅವರು ಜೀವನಕ್ಕಾಗಿ ಬೇರೆ ಯವರ ಅಧೀನದಲ್ಲಿ ಕೆಲಸ ಮಾಡ್ತಾರೆ ಎಂಬ ದೊಡ್ಡ ಅಪರಾಧ ಕೃತ್ಯವನ್ನೇ ಮಾಧ್ಯಮಗಳ ಮುಂದೆ ಬಿಚ್ಚಿಡುತ್ತಾರೆ.ಇದಾದ ನಂತರ ಸಂಬಂಧಪಟ್ಟ ವ್ಯಕ್ತಿಗೆ ಆಸ್ತಿ ಮಾರಾಟ ಮಾಡಿದ್ದೀಯೆಂದು ಚೆಕ್ ಕೊಡ್ತಾರೆ 16 ಲಕ್ಷ ರು. ಮೌಲ್ಯದ ಹಾಗೂ 6 ಲಕ್ಷ ರು.. ಮೌಲ್ಯದ ಎರಡು ಚೆಕ್ ಕೊಡುತ್ತಾರೆ. ಆದರೆ, ಅವರು ಕೊಟ್ಟ ಆ ಎರಡೂ ಚೆಕ್‌ಗಳು ಲ್ಯಾಪ್ಸ್ ಆಗುತ್ತವೆ. ಆಗ ವ್ಯಕ್ತಿ ಮುಂದೆ ಹೇಳ್ತಾರೆ ಏಯ್.... ಇದನ್ನ ಹೊರಗೆ ಹೇಳಿದ್ರೆ ಕಬ್ಬನ್ ಪಾರ್ಕ್ ನಲ್ಲಿ ಏನಾಗುತ್ತೆ ಅಂತಾ ತಿಳ್ಕೋ ಎಂದು ಬೆದರಿಸುತ್ತಾರೆ. ಇವರು ಕಾಂಗ್ರೆಸ್ ಅಧ್ಯಕ್ಷರು ಅಬ್ಬಾ.. ಸೋನಿಯಾ, ರಾಹುಲ್ ಅವರಿಗೆ ಬಹಳ ಇಷ್ಟ ಎಂದು ವಾಗ್ದಾಳಿ ಮಾಡಿದರು.- 17 ಕೆಸಿಕೆಎಂ 4ಮೂಡಿಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಪರ ಬುಧವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಚಿವ ಸಿ.ಟಿ. ರವಿ, ವೈಎಸ್‌ವಿ ದತ್ತ, ಪ್ರಾಣೇಶ್ ಪಾಲ್ಗೊಂಡಿದ್ದರು.

Share this article