ಲಕ್ಷ್ಮೇಶ್ವರ: ಕ್ಷೇತ್ರದ ಶಾಸಕರು ಪಂಚಮಸಾಲಿ ಸಮಾಜದ ಯುವಕರ ಮೇಲೆ ಎಫ್ಐಆರ್ ದಾಖಲು ಮಾಡಿ ಅವರನ್ನು ಹೆದರಿಸುವ ಕಾರ್ಯ ಮಾಡುತ್ತಿರುವುದು ಖಂಡನೀಯ. ಆ ಯುವ ಮುಖಂಡರ ಹಿಂದೆ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಗುರುಗಳು ಇದ್ದಾರೆ ಎಂದು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಎಚ್ಚರಿಕೆ ನೀಡಿದರು.
ಪಂಚಮಸಾಲಿ ಸಮಾಜ ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ. ಕಳೆದ 30 ವರ್ಷಗಳಿಂದ ವಿವಿಧ ಪಕ್ಷಗಳ ರಾಜಕೀಯ ನಾಯಕರಿಂದ ತುಳಿತಕ್ಕೆ ಒಳಗಾಗಿದೆ. ಸಮಾಜಕ್ಕೆ ಸಿಗಬೇಕಾದ ಸೌಲಭ್ಯ ಸಿಕ್ಕಿಲ್ಲ. ಬಿಜೆಪಿ ನಮ್ಮ ಸಮಾಜವನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡು ಬಳಿಕ ಸೈಡ್ ಲೈನ್ ಗೆ ಸರಿಸುವ ಕಾರ್ಯ ಮಾಡಿದೆ. ರಾಜ್ಯ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಕೇಂದ್ರದಲ್ಲಿ ಓಬಿಸಿ ಮೀಸಲಾತಿ ಸಿಕ್ಕಲ್ಲಿ ನಮ್ಮ ಸಮಾಜದ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕು ಐಎಎಸ್, ಐಪಿಎಸ್ ಅಧಿಕಾರಿ ಆಗಲು ಸಾಧ್ಯ.
ರಾಜಕೀಯ ಪಕ್ಷಗಳು ಪಂಚಮಸಾಲಿ ಸಮಾಜವನ್ನು ಚುನಾವಣೆ ಪ್ರಚಾರಕ್ಕೆ ಮಾತ್ರ ಬಳಸಿಕೊಂಡು ಅವರಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನ ಸೇರಿದಂತೆ ಪ್ರಮುಖ ಸ್ಥಾನ ನೀಡುತ್ತಿಲ್ಲ. ನಮ್ಮ ಸಮಾಜದ ಮುಖಂಡರನ್ನು ಗೌರವದಿಂದ ನಡೆಸಿಕೊಂಡಿಲ್ಲ. ಆದ್ದರಿಂದ ನಮ್ಮ ಸಮಾಜದ ಜನಸಂಖ್ಯೆ ಹೆಚ್ಚು ಇರುವ ಪ್ರದೇಶಗಳಿಗೆ ಹೋಗಿ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.ಲಕ್ಷ್ಮೇಶ್ವರ ತಾಲೂಕಿನಲ್ಲಿ ಪಂಚಮಸಾಲಿ ಸಮಾಜದ ಯುವ ಮುಖಂಡರ ಮೇಲೆ ಸ್ಥಳೀಯ ಶಾಸಕರು ಎಫ್ಐಆರ್ ದಾಖಲು ಮಾಡುವ ಮೂಲಕ ಅವರನ್ನು ಹೆದರಿಸುವ ಕಾರ್ಯ ಮಾಡುತ್ತಿರುವುದನ್ನು ಪಂಚಮಸಾಲಿ ಪೀಠವು ಸಹಿಸುವುದಿಲ್ಲ. ಅವರು ಎಷ್ಟೇ ದೊಡ್ಡವರಾಗಿದ್ದರೂ ನಾವು ಸಹಿಸಿಕೊಳ್ಳುವುದಿಲ್ಲ. ನೀವು ಸುಧಾರಿಸಿಕೊಳ್ಳಬೇಕು ನೀವು ಸುಧಾರಿಸಿಕೊಳ್ಳದೇ ಹೋದಲ್ಲಿ ನಾವು ಸುಧಾರಣೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುವ ಕಾರ್ಯ ಸಮಾಜ ಮಾಡುತ್ತದೆ ಎಂದರು.
ಈ ವೇಳೆ ರಜನಿಕಾಂತ್ ದೇಸಾಯಿ, ಚನ್ನಪ್ಪ ಕರೆಯುತ್ತಿನ, ವಸಂತಗೌಡ ಪಾಟೀಲ, ಶ್ರೀಕಾಂತಗೌಡ ಪಾಟೀಲ, ದೇವೆಂದ್ರಪ್ಪ ಮರಳಿಹಳ್ಳಿ, ಜುಂಜನಗೌಡ ನರಸಮ್ಮನವರ, ರುದ್ರಗೌಡ ಪೊಲೀಸ್ ಪಾಟೀಲ, ಶಿವಾನಂದ ಬನ್ನಿಮಟ್ಟಿ, ಭೀಮಣ್ಣ ಹುಲ್ಲೂರು, ಮಹಾದೇವಪ್ಪ ಕಟಗಿ, ಮಂಜುನಾಥ ಗೌರಿ, ಪರಮೇಶ ರಿತ್ತಿ, ನಿಂಗಪ್ಪ ಪಾಟೀಲ, ಶಂಕರಪ್ಪ ದೊಡ್ಡಗೌಡ್ರ ಇದ್ದರು.