ಕನ್ನಡಪ್ರಭ ವಾರ್ತೆ ಕೊಪ್ಪಳ
ತುಂಗಭದ್ರಾ ಜಲಾಶಯದ ಮುರಿದ 19ನೇ ಕ್ರಸ್ಟ್ ಗೇಟ್‌ಗೆ ಪರ್ಯಾಯವಾಗಿ ಎಲಿಮೆಂಟ್ ಗೇಟ್ ಯಶಸ್ವಿಯಾಗಿ ಅಳವಡಿಸುವುದಕ್ಕೆ ಕಾರಣವಾಗಿರುವ ಜಿಂದಾಲ್, ನಾರಾಯಣ, ಹಿಂದೂಸ್ಥಾನ ಎಂಜಿನಿಯರ್ ಕಂಪನಿಗೆ, ಕಾರ್ಮಿಕರಿಗೆ, ಸಂಸದರು ಸೇರಿದಂತೆ ನಮ್ಮೆಲ್ಲ ಜನಪ್ರತಿನಿಧಿಗಳಿಗೆ ಹಾಗೂ ವಿಶೇಷವಾಗಿ ತಜ್ಞ ಕನ್ಹಯ್ಯ ನಾಯ್ಡು ಅವರ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.ತುಂಗಭದ್ರಾ ಜಲಾಶಯದ ಮುರಿದಿದ್ದ 19ನೇ ಕ್ರಸ್ಟ್ ಗೇಟ್ ಅಳವಡಿಕೆಗೆ ಎಲಿಮೆಂಟ್ ಗೇಟ್ ಮೊದಲ ಭಾಗವನ್ನು ಶುಕ್ರವಾರ ರಾತ್ರಿ ಯಶಸ್ವಿಯಾಗಿ ಅಳವಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಗಲು-ಇರುಳು, ಊಟ ನಿದ್ರೆ ಯಾವುದನ್ನೂ ಲೆಕ್ಕಿಸದೇ ಶ್ರಮಿಸಿದ ಕಾರ್ಮಿಕರು, ಎಂಜಿನಿಯರ್ ಹಾಗೂ ತಜ್ಞ ಕನ್ಹಯ್ಯ ನಾಯ್ಡು ಅವರ ಶ್ರಮವನ್ನು ಬಣ್ಣಿಸಲು ಸಾಧ್ಯವೇ ಇಲ್ಲ ಎಂದರು.
ಹರಿಯುವ ನೀರಿನಲ್ಲಿ ಎಲಿಮೆಂಟ್ ಅಳವಡಿಸುವ ಪ್ರಯತ್ನ ನಮಗೆ ಸವಾಲಾಗಿತ್ತು. ಇದು ಇಡೀ ದೇಶದಲ್ಲಿಯೇ ಮೊದಲ ಪ್ರಯತ್ನ ಎಂದು ಹೇಳುತ್ತಿದ್ದಾರೆ. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎನ್ನುವುದು ಮಹಾನ್ ಸಾಧನೆ ಎಂದರು.ನಾವೆಲ್ಲರೂ ಎದೆಗುಂದಿದ್ದಾಗ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನಮಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಅಲ್ಲಿಂದ ನಮಗೆ ಒಂದಷ್ಟು ಶಕ್ತಿ ಮತ್ತು ವಿಶ್ವಾಸ ಮೂಡಲು ಸಾಧ್ಯವಾಯಿತು. ಸತತವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದ ಸಿಎಂ ಹಾಗೂ ಡಿಸಿಎಂ ಅವರು ಪ್ರತಿಯೊಂದನ್ನು ಮಾಹಿತಿ ಪಡೆದು, ಮಾರ್ಗದರ್ಶನ ಮಾಡುತ್ತಿದ್ದರು.
ಇನ್ನು ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಎದೆಗುಂದಿದ್ದರು. ಆದರೆ, ಈಗ ಅವರೆಲ್ಲರೂ ನಿರಾಳವಾಗಿದ್ದಾರೆ. ಒಂದು ಎಲಿಮೆಂಟ್ ಯಶಸ್ವಿಯಾಗಿ ಅಳವಡಿಸಿದ್ದು, ಉಳಿದವುಗಳನ್ನು ನಾಳೆಯೇ ಅಳವಡಿಸುತ್ತೇವೆ. ಹೀಗಾಗಿ, ಈಗ ಇರುವ 68 ಟಿಎಂಸಿಯನ್ನು ಸೇರಿ ಸುಮಾರು 70ರಿಂದ 72 ಟಿಎಂಸಿ ನೀರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದನೇ ಬೆಳೆಗೆ ನೀರಿನ ಸಮಸ್ಯೆಯಾಗುವುದಿಲ್ಲ.ನನಗಂತೂ ಬಹಳ ಖುಷಿಯಾಗಿದೆ. ರೈತರಿಗೆ ಎದುರಾಗಿದ್ದ ಆತಂಕವನ್ನು ನಿವಾರಣೆ ಮಾಡಲು ನಾನು ಹಗಲಿರುಳು ರಾತ್ರಿ ಕೆಲಸ ಮಾಡಿದ ಖುಷಿಯಾಗಿದೆ ಎಂದು ಸಂತಸದಲ್ಲಿಯೇ ಹೇಳಿದರು.
ಈ ವೇಳೆ ಸಂಸದ ರಾಜಶೇಖರ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಸೇರಿದಂತೆ ಮೊದಲಾದವರು ಇದ್ದರು.ಬಾಗಿನ ಅರ್ಪಿಸಲು ಸಿಎಂ ಬರುತ್ತಾರೆ:
ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ದುರಸ್ತಿ ಕಾರ್ಯ ಮುಗಿದ ಮೇಲೆ ಜಲಾಶಯ ಮತ್ತೆ ಭರ್ತಿಯಾಗುತ್ತದೆ. ಸಿಎಂ ಸಿದ್ದರಾಮಯ್ಯ ಆಗಮಿಸಿ ಭಾಗಿನ ಅರ್ಪಿಸುತ್ತಾರೆ ಎನ್ನುವ ವಿಶ್ವಾಸವಿದೆ.ಈಗಲೂ ಒಂದು ಬೆಳೆಗೆ ನೀರಿನ ಸಮಸ್ಯೆ ನೀಗಿದ್ದು, ಖುಷಿಯಾಗಿದೆ.ತುಂಗಭದ್ರಾ ಜಲಾಶಯದಲ್ಲಿ ಸಂಭ್ರಮ:
ತುಂಗಭದ್ರಾ ಜಲಾಶಯದ ಮುರಿದ 19ನೇ ಕ್ರಸ್ಟ್ ಗೇಟ್‌ಗೆ ಪರ್ಯಾಯವಾಗಿ ಎಲಿಮೆಂಟ್ (ನಾಲ್ಕು ಅಡಿಯ) ಗೇಟ್ ಅಳವಡಿಸುವ ಕಾರ್ಯ ಯಶಸ್ವಿಯಾಗುತ್ತಿದ್ದಂತೆ ತುಂಗಭದ್ರಾ ಜಲಾಶಯ ಮೇಲ್ಭಾಗದಲ್ಲಿ ಸಂಭ್ರಮ ಮುಗಿಲುಮುಟ್ಟಿತ್ತು. ಕೇಕೆ ಹಾಕಿ, ಸಂಭ್ರಮಿಸಿದರು.ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಜ್ಞ ಕನ್ಹಯ್ಯ ನಾಯ್ಡು ಅವರಿಗೆ ಸಿಹಿ ತಿನ್ನಿಸಿದರು.
ಸಂಸದ ರಾಜಶೇಖರ ಹಿಟ್ನಾಳ ಅವರು ಸಚಿವ ಶಿವರಾಜ ತಂಗಡಗಿ ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ.ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಮುರಿದಿದ್ದರಿಂದಾಗಿ ಅದಕ್ಕೆ ಪರ್ಯಾಯ ಗೇಟ್ ಅಳವಡಿಸುವ ಕಾರ್ಯಾಚರಣೆಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಕಾಡಾಧ್ಯಕ್ಷ ಹಸನ್‌ಸಾಬ್ ದೋಟಿಹಾಳ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಬಹುತೇಕ ಅಲ್ಲಿಯೇ ಬಿಡುಬಿಟ್ಟು ನಿಗಾವಹಿಸಿದರು. ಹಗಲಿರುಳು ಎನ್ನದೇ ಜಲಾಶಯ ವ್ಯಾಪ್ತಿಯಲ್ಲಿಯೇ ತಂಗಿ, ಕಾರ್ಯಾಚರಣೆ ಯಶಸ್ವಿಯಾಗಿಸಲು ಶ್ರಮಿಸಿದರು.
ಸಚಿವ ಶಿವರಾಜ ತಂಗಡಗಿ ಅವರಂತೂ 6 ದಿನಗಳಲ್ಲಿ ಒಂದು ದಿನ ಮಾತ್ರ ಬೆಂಗಳೂರಿಗೆ ಹೋಗಿದ್ದನ್ನು ಬಿಟ್ಟರೆ ಹಗಲು, ರಾತ್ರಿ ಜಲಾಶಯದ ಮೇಲ್ಭಾಗದಲ್ಲಿಯೇ ಕಳೆದಿದ್ದಾರೆ.