ಶಿವಾನಂದ ಗೊಂಬಿ
ಏನು ಈತನ ಸಾಧನೆ?: ನಗರದ ತೋಳನಕೆರೆಯ ಸಮೀಪದಲ್ಲಿ ವಾಸವಾಗಿರುವ ಸುಹಾಸ ಲಿಂಗರಾಜ ಧಾರವಾಡ ಪ್ರತಿಭಾವಂತ ವಿದ್ಯಾರ್ಥಿ. ಈತನ ತಂದೆ ಲಿಂಗರಾಜ ಧಾರವಾಡ ಹೆಲ್ತ್ ಇನ್ಸುರೆನ್ಸ್ ಸಲಹೆಗಾರರಾಗಿದ್ದಾರೆ. ತಾಯಿ ಗೃಹಿಣಿ. ಈ ದಂಪತಿಗೆ ಸುಹಾಸ ಒಬ್ಬನೆ ಮಗ.
ಹುಟ್ಟಿದಾಗ ಎಲ್ಲ ಮಕ್ಕಳಂತೆ ಚೆನ್ನಾಗಿಯೇ ಇದ್ದ ಸುಹಾಸಗೆ ಒಂದುವರ್ಷದವನಿದ್ದಾಗ ರೆಟಿನೋ ಬ್ಲಾಸ್ಟೋಮೋ ಎಂಬ ಕಾಯಿಲೆ ಬಂತು. ಅದರಿಂದಾಗಿ ಈತ ಸಂಪೂರ್ಣ ದೃಷ್ಟಿ ಹೀನನಾದ. ಆದರೆ, ದೃಷ್ಟಿಹೀನನಾದರೂ ಕಲಿಯುವ ಆಸಕ್ತಿ ಮಾತ್ರ ಸ್ವಲ್ಪವೂ ಕಡಿಮೆಯಾಗಲಿಲ್ಲ. ಒಂದರಿಂದ 6ನೆಯ ತರಗತಿ ವರೆಗೂ ಬ್ರೈಲ್ ಲಿಪಿಯಲ್ಲಿ ಬೆಂಗಳೂರು ಜ್ಯೋತಿ ಸೇವಾ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ. ಬಳಿಕ ಈತ ಸಾಮಾನ್ಯ ವಿದ್ಯಾರ್ಥಿಯಂತೆ ಹುಬ್ಬಳ್ಳಿ ಜೇಂಟ್ಸ್ ಸ್ಕೂಲ್‌ನಲ್ಲಿ 7ನೆಯ ತರಗತಿಗೆ ಪ್ರವೇಶ ಪಡೆದು ಎಸ್ಸೆಸ್ಸೆಲ್ಸಿವರೆಗೂ ಕಲಿತ. ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಕಲಿತ, ತಾನೇನು ಕಮ್ಮಿಯಿಲ್ಲವೆಂಬಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬರೋಬ್ಬರಿ ಶೇ. 92 ಅಂಕ ಪಡೆದು ಪಾಸಾದ. ಬಳಿಕ ಹುಬ್ಬಳ್ಳಿ ಕೆಎಲ್‌ಇ ಕಾಮರ್ಸ್ ಕಾಲೇಜ್‌ನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಹಾಗೂ ಗ್ಲೋಬಲ್ ಕಾಲೇಜ್‌ನಲ್ಲಿ ಬಿಸಿಎ ಪದವಿ ಪಡೆದನು.ಎಂಎಸ್ (ಎಚ್‌ಸಿಐ): ಇಷ್ಟೆಲ್ಲವನ್ನು ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಕಲಿತ ಈತ, ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದುಕೊಂಡು ಇಟಲಿಯ ಟ್ರೆಂಟೋ ವಿವಿಯಲ್ಲಿ ಪ್ರಯತ್ನಿಸಿದ್ದಾನೆ. ಅಲ್ಲಿ ಈತನಿಗೆ ಎಂಎಸ್ (ಮಾಸ್ಟರ್ ಇನ್ ಹ್ಯೂಮನ್ ಕಂಪ್ಯೂಟರ್ ಇಂಟ್ರ್ಯಾಕ್ಷನ್)ನಲ್ಲಿ ಸೀಟು ಸಿಕ್ಕಿದೆ. ಅಲ್ಲಿ ಮೊದಲ ಎರಡು ಸೆಮಿಸ್ಟರ್ ಪಾಸಾಗಿದ್ದಾನೆ. ಇನ್ನುಳಿದ ಎರಡು ಸೆಮಿಸ್ಟರ್‌ಗಾಗಿ ನೆದರಲ್ಯಾಂಡ್‌ನ ಟ್ವೆಂಟೆ ವಿವಿಯಲ್ಲಿ ವಿನಿಮಯ ಕಾರ್ಯಕ್ರಮದಡಿ ಪ್ರಯತ್ನಿಸಿದ್ದಾರೆ. ವಿನಿಮಯ್ ಕಾರ್ಯಕ್ರಮದಡಿ 2 ಸೆಮಿಸ್ಟರ್ ಮಾಡಲು ಆಯ್ಕೆಯಾಗಿದ್ದಾರೆ.
ಎಂಎಸ್‌ನಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆ, ಭಾಷಣ ಸಂಸ್ಕರಣೆ, ಕಂಪ್ಯೂಟರ್ ನೀತಿಶಾಸ್ತ್ರ ಮತ್ತು ಮಾನವ- ರೋಬೋಟ್ ವಿಷಯಗಳಿದ್ದು ಅದರಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿಯ ಅಂಧ ವಿದ್ಯಾರ್ಥಿಯೊಬ್ಬ ಅಂತಾರಾಷ್ಟ್ರೀಯ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿ ತೆರಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಚಿಕ್ಕವಯಸ್ಸಿನಲ್ಲಿ ಮಗನಿಗೆ ರೆಟಿನೋ ಬ್ಲಾಸ್ಟೋಮೋ ಕಾಯಿಲೆಯಿಂದ ದೃಷ್ಟಿಹೀನನಾದ. ಹೇಗಪ್ಪ ಈತನ ವಿದ್ಯಾಭ್ಯಾಸ ಎಂಬ ಚಿಂತೆ ಇತ್ತು. ಆದರೆ, ಬರಬರುತ್ತಾ ವಿದ್ಯಾಭ್ಯಾಸ ನೋಡಿ ಸಂತಸವಾಗುತ್ತದೆ. ಜತೆಗೆ ನನ್ನ ಮಗನ ಸಾಧನೆ ಹೆಮ್ಮೆಯೆನಿಸುತ್ತದೆ ಎಂದು ಸುಹಾಸ್ ತಂದೆ ಲಿಂಗರಾಜ ಧಾರವಾಡ ಹರ್ಷ ವ್ಯಕ್ತಪಡಿಸಿದರು.