ಹಾವೇರಿ ಜಿಲ್ಲೆಯಲ್ಲಿ ಸುಗಮವಾಗಿ ನಡೆದ ಎಸ್ಸೆಸ್ಸೆಲ್ಸಿ ಮೊದಲ ಪರೀಕ್ಷೆ

KannadaprabhaNewsNetwork | Published : Mar 22, 2025 2:00 AM

ಸಾರಾಂಶ

ಪರೀಕ್ಷಾ ನಕಲು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಹಾವೇರಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನವಾದ ಶುಕ್ರವಾರ ಜಿಲ್ಲೆಯ 80 ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ಭಾಷಾ ವಿಷಯದ ಪರೀಕ್ಷೆಗಳು ಶಾಂತಿಯುತ ಮತ್ತು ಸುಗಮವಾಗಿ ಜರುಗಿದವು.ಕನ್ನಡ, ಆಂಗ್ಲ ಮತ್ತು ಉರ್ದು ಭಾಷಾ ಪರೀಕ್ಷೆಗಳು ನಡೆದವು. ಜಿಲ್ಲೆಯ ಎಂಟು ತಾಲೂಕಿನ 80 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನ ನಡೆದ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ ವಿಷಯದ ಪರೀಕ್ಷೆಗಳಿಗೆ ಒಟ್ಟು 22,009 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 21,741 ವಿದ್ಯಾರ್ಥಿಗಳು ಹಾಜರಾಗಿದ್ದರು. 268 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 10ರಿಂದ ಆರಂಭವಾದ ಪರೀಕ್ಷೆಗಳು ಮಧ್ಯಾಹ್ನ 1.15ರ ವರೆಗೆ ನಡೆದವು. ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಗುರುತಿಸಲಾಗಿದ್ದ 80 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಅರ್ಧ ಗಂಟೆ ಮುಂಚಿತವಾಗಿಯೇ ಆಗಮಿಸಿದ್ದರು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕುಡಿಯುವ ನೀರು, ಶೌಚಾಲಯ, ಆರೋಗ್ಯ, ಗಡಿಯಾರ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಪರೀಕ್ಷಾ ನಕಲು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಪಡೆಯುತ್ತಿದ್ದಂತೆ ಮಾಹಿತಿ ಕೇಂದ್ರವನ್ನು ತೆರೆಯಲಾಗಿತ್ತು. ಮಾಹಿತಿ ಕೇಂದ್ರದ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಮೊಬೈಲ್ ಸ್ವಾಧೀನಾಕಾರಿಗಳು ಕೂಡ ಹಾಜರಿದ್ದು, ವಿದ್ಯಾರ್ಥಿಗಳಾಗಲಿ, ಪರೀಕ್ಷಾ ಮೇಲ್ವಿಚಾರಕ ಸಿಬ್ಬಂದಿಯಾಗಲಿ ಮೊಬೈಲ್ ಬಳಸದೇ ಕೌಂಟರ್‌ನಲ್ಲಿ ಇಟ್ಟು ತೆರಳುವಂತೆ ಸೂಚನೆ ನೀಡುತ್ತಿದ್ದ ದೃಶ್ಯಗಳು ಕಂಡುಬಂದವು.ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇತ ಪ್ರದೇಶವೆಂದು ಘೋಷಣೆ ಮಾಡಿ ಹೊರಗಿನ ಯಾರೂ ಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಕೊಠಡಿ ಮೇಲ್ವಿಚಾರಕರು, ಸಿಟ್ಟಿಂಗ್ ಸ್ಕ್ವಾಡ್‌ಗಳು, ಪೊಲೀಸ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಚ್ಚುಕಟ್ಟಾಗಿ ಕಾರ್ಯವನ್ನು ನಿರ್ವಹಿಸಿದರು. ಜತೆಗೆ ಆರೋಗ್ಯ ಸಿಬ್ಬಂದಿ ಕೂಡ ಹಾಜರಿರುವುದು ಕಂಡುಬಂದಿತು.ಪರೀಕ್ಷೆಯನ್ನು ಹಬ್ಬದಂತೆ ಸಂತೋಷದಿಂದ ಎದುರಿಸಿ

ಸವಣೂರು: ಪರೀಕ್ಷೆಯನ್ನು ಹಬ್ಬದಂತೆ ಸಂತೋಷದಿಂದ ಕಂಡಲ್ಲಿ ಒತ್ತಡದಿಂದ ಮುಕ್ತಿ ಹೊಂದಲು ಸಾಧ್ಯವಾಗಲಿದೆ ಎಂದು ಬಿಇಒ ಎಂ.ಎಫ್. ಬಾರ್ಕಿ ತಿಳಿಸಿದರು.

ಪಟ್ಟಣದ ಕೆಪಿಎಸ್(ಸರ್ಕಾರಿ ಮಜೀದ ಪ್ರೌಢಶಾಲೆ)ಯಲ್ಲಿ ಸ್ಥಾಪಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ವಿಶೇಷ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಮೊದಲ ಕನ್ನಡ ಭಾಷೆ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿ ಮಾತನಾಡಿದರು.ನಿರಂತರ ಕಠಿಣವಾಗಿ ಅಭ್ಯಾಸ ಕೈಗೊಂಡ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಿ ಪರೀಕ್ಷೆ ಎದುರಿಸುವ ಬದಲಾಗಿ ಮಾನಸಿಕವಾಗಿ ಪರೀಕ್ಷೆ ಎದುರಿಸಲು ಮುಂದಾಗಬೇಕು ಎಂದರು.ಪಟ್ಟಣದ ಕೆಪಿಎಸ್(ಸರ್ಕಾರಿ ಮಜೀದ ಪ್ರೌಢಶಾಲೆ), ಸರ್ಕಾರಿ ಪದವಿಪೂರ್ವ ಕಾಲೇಜು, ಎಸ್‌ಎಫ್‌ಎಸ್ ಶಾಲೆ, ಹತ್ತಿಮತ್ತೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಹೂವಿನಶಿಗ್ಲಿ ಗ್ರಾಮದ ಪ್ರೌಢಶಾಲೆ, ಕುಣಿಮೆಳ್ಳಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಕಡಕೋಳ ಗ್ರಾಮದ ಕೆಜಿಎಲ್ ಪ್ರೌಢಶಾಲೆ ಹಾಗೂ ಕಾರಡಗಿ ಉರ್ದು ಪ್ರೌಢಶಾಲೆ ಸೇರಿ ತಾಲೂಕಿನಲ್ಲಿ ಒಟ್ಟು 8 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಂದೇಶ ಲಾಡ್ ಪರೀಕ್ಷಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಪ್ರಥಮ ಭಾಷೆ(ಕನ್ನಡ) ಪರೀಕ್ಷೆಯನ್ನು 2133 ವಿದ್ಯಾರ್ಥಿಗಳು ಎದುರಿಸಬೇಕಿತ್ತು. ಅದರಲ್ಲಿ 2117 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 16 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ನಕಲು ತಡೆಯುವ ನಿಟ್ಟಿನಲ್ಲಿ ಮಾರ್ಗಾಧಿಕಾರಿಗಳು, ಸ್ಥಾನಿಕ ಜಾಗೃತ ದಳ, ಮೊಬೈಲ್ ಸ್ವಾಧೀನಾಧಿಕಾರಿಗಳು, ತಹಸೀಲ್ದಾರ್ ಭರತರಾಜ್ ಕೆ.ಎನ್. ಅವರ ನೇತೃತ್ವದಲ್ಲಿ ತಾಲೂಕು ಜಾಗೃತ ದಳವು ಸೇರಿದಂತೆ ವಿಶೇಷ ತಂಡದ ಸದಸ್ಯರು ಕಾರ್ಯ ಕೈಗೊಂಡರು.

ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕ ಎಂ.ಎನ್. ಅಡಿವೆಪ್ಪನವರ, ನೋಡಲ್ ಅಧಿಕಾರಿ ವಿಜೇಂದ್ರಚಾರಿ ಎನ್., ರಮೇಶಗೌಡ ಗುಡಿಸಾಗರ, ಎಸ್‌ಡಿಎಂಸಿ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.

Share this article