ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಒಂದಿಂಚೂ ಅರಣ್ಯ ಇಲಾಖೆಯ ಭೂಮಿ ಆಗಲಿ, ಕಂದಾಯ ಇಲಾಖೆಯ ಒಂದಿಂಚೂ ಭೂಮಿಯನ್ನೂ ತಗೊಳಲ್ಲ. ನನ್ನ ಮೇಲೆ ವಿನಾಕಾರಣ ಆರೋಪಗಳು ನಡೆಯುತ್ತಿವೆ ಎಂದು ಅಬಕಾರಿ ಇಲಾಖೆ ಸಚಿವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ತಮ್ಮ ಒಡೆತನದ ಸಕ್ಕರೆ ಕಾರ್ಖಾನೆಗಾಗಿ ಅರಣ್ಯ ಇಲಾಖೆಯ ಭೂಮಿಯನ್ನು ಕಬಳಿಕೆ ಮಾಡಿರುವ ಆರೋಪದ ಕುರಿತು ಈ ರೀತಿ ಪ್ರತಿಕ್ರಿಯೆ ನೀಡಿದರು.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುನಕಲ್ ಬಳಿ ಸಕ್ಕರೆ ಕಾರ್ಖಾನೆ ನಿರ್ಮಿಸುತ್ತಿರುವ ಆರ್.ಬಿ.ಶುಗರ್ಸ್ ಕಾರ್ಖಾನೆಯ ಯಾವುದೇ ಕಟ್ಟಡ ಪ್ರಾರಂಭ ಇನ್ನೂ ಆಗಿಲ್ಲ. ಹೀಗಾಗಿ ಒತ್ತುವರಿ ಪ್ರಶ್ನೆಯೇ ಬರಲ್ಲ. ಸಿಂಗಲ್ ಇಂಚು ನಾನು ಭೂ ಕಬಳಿಕೆ ಮಾಡಲ್ಲ. ನಾನೇಕೆ ಭೂ ಕಬಳಿಕೆ ಮಾಡಬೇಕು? ನಾನೊಬ್ಬ ಜನಪ್ರತಿನಿಧಿ ಇದಿನಿ. ಅರಣ್ಯ, ಕಂದಾಯ ಇಲಾಖೆ ಭೂಮಿ ಕಾಪಾಡೋದು ನನ್ನ ಕರ್ತವ್ಯವಾಗಿದೆ. ಅದು ದುರುಪಯೋಗ ಆಗದಂತೆ ನಡೆದುಕೊಳ್ಳುವುದು ನನ್ನ ಕರ್ತವ್ಯ. ನನ್ನ ಕರ್ತವ್ಯವನ್ನು ನಾನು ಕಾಪಾಡಿಕೊಳ್ತೀನಿ. ಯಾವುದೇ ಅರಣ್ಯ, ಕಂದಾಯ ಇಲಾಖೆ ಭೂಮಿಯಲ್ಲಿ ಕಾರ್ಖಾನೆ ಕಟ್ಟಲ್ಲ. ನನ್ನ ಮೇಲೆ ವಿನಾಕಾರಣ ಆರೋಪಗಳು ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದರು.ನಾನು ಭೂ ಕಬಳಿಕೆ ಮಾಡದಿರುವ ಕುರಿತು ಅಲ್ಲಿನ ತಹಸೀಲ್ದಾರರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲಿರುವ ದೇವಸ್ಥಾನಕ್ಕೆ ಜನರಿಗೆ ಅನುಕೂಲ ಆಗಲಿ ಎಂಬ ಉದ್ದೇಶಕ್ಕೆ ಅಲ್ಲಿದ್ದ ತೆಗ್ಗು-ಗುಂಡಿಯೊಂದನ್ನು ಮುಚ್ಚಿಸಿದ್ದೇವೆ. ಜನರೇ ತೆಗ್ಗು-ಗುಂಡಿ ಮುಚ್ಚಿಸಿಕೊಡುವಂತೆ ಮನವಿ ಮಾಡಿದ್ದರು. ಹೀಗಾಗಿ ತೆಗ್ಗು-ಗುಂಡಿ ಮುಚ್ಚಿಸಿ ಕೊಟ್ಟಿದ್ದೇನೆ. ಆ ಜಾಗದಲ್ಲಿ ನಮ್ಮ ಕಾರ್ಖಾನೆಯ ಯಾವುದೇ ಒಂದು ವಸ್ತು ಕೂಡ ನಾವು ಅಲ್ಲಿಡಲ್ಲ ಎಂದು ತಿಳಿಸಿದರು.ಯತ್ನಾಳ ಬೊಗಳುವುದಂತೂ ಬಿಡಲ್ಲ:ಟಿಪ್ಪು ಸುಲ್ತಾನ್ ಬಗ್ಗೆ ಶಾಸಕ ಯತ್ನಾಳ ಅವರು ಮಾಡಿರುವ ಅವಾಚ್ಯ ಶಬ್ದ ಬಳಕೆ ಬಗ್ಗೆ ಪ್ರತಿಕ್ರಿಯಿಸಿ, ಯತ್ನಾಳ ಅವರಷ್ಟು ಕೆಳಗಿಳಿದು ಮಾತನಾಡೋಕೆ ನನಗಾಗಲ್ಲ, ಯತ್ನಾಳ ಅವರು ಬೊಗಳುವುದಂತೂ ಬಿಡಲ್ಲ ಎಂದರು.ದೇವಾಲಯಗಳನ್ನು ಹಿಂದುಗಳಿಗೆ ಕೊಡಬೇಕು, ಮುಜರಾಯಿ ಇಲಾಖೆಗೆ ಕೊಡಬೇಡಿ ಎಂಬ ಕೆಲವರ ಆಗ್ರಹದ ಬಗ್ಗೆ ಮಾತನಾಡಿ, ಸಂವಿಧಾನದಲ್ಲಿ ಎಲ್ಲ ಸರ್ವಧರ್ಮದವರಿಗೂ ಅವಕಾಶ ಇದೆ. ಒಬ್ಬರಿಗೆ ಕೊಡಬೇಕಾದ ಅವಶ್ಯಕತೆ ಇಲ್ಲ. ನಾನು ಒಬ್ಬ ಹಿಂದೂ ಧರ್ಮಿಯನೆ. ನಾನು ಮಂದಿರದ ಕೆಳಗಡೆ ನಿಲ್ಲುವುದಿಲ್ಲವೇನು? ಆದರೂ ನಾನು ಹಿಂದೂ, ಹಿಂದೂ ಅನ್ನಲ್ವ? ದೇವಸ್ಥಾನದ ಬಗ್ಗೆ ಮಾತನಾಡುವವರಿಗೆ ಹಿಂದೂ ಜನರ ಬಗ್ಗೆಯೂ ಯೋಚನೆ ಇರಲಿ. ಹಿಂದೂ ಧರ್ಮದಲ್ಲೇ ಇದ್ದರೂ ಯಾವ ರೀತಿ ನಡೆಸಿಕೊಳ್ತೀವಿ ಎನ್ನುವುದರ ಬಗ್ಗೆಯೂ ಗಮನ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆ.ಎಸ್.ಈಶ್ವರಪ್ಪ ಮುಂದಿನ ಸಿಎಂ ಎಂಬ ಶಾಸಕ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರನ್ನು ನೋಡಿ ಪಾಪ ಅನಿಸುತ್ತೆ. ಈಶ್ವರಪ್ಪ ಅವರನ್ನು ಇಂತಹ ಸ್ಥಿತಿಗೆ ತಂದು ನಿಲ್ಲಿಸಿದರಲ್ಲ. ಈಶ್ವರಪ್ಪ ಪರಿಸ್ಥಿತಿ ನೋಡಿದರೇ ಅಯ್ಯೋ ಪಾಪ ಅನಿಸುತ್ತೆ ಎಂದು ವ್ಯಂಗ್ಯವಾಡಿದರು.ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ಪ್ರತಿ ವಿಷಯದಲ್ಲಿಯೂ ಪತ್ರ ಬರೆಯುವ ಕುರಿತು ನಾನು ಮಾಧ್ಯಮಗಳಲ್ಲಿ ನೋಡಿದೆ. ನಮ್ಮ ನಾಯಕರು ತೆಗೆದುಕೊಂಡ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ. ಯಾವುದೋ ಒಬ್ಬ ಚೀಟಿ ಕೊಟ್ರೆ ಇದಕ್ಕೆ ಏನ್ ಉತ್ತರ ಕೊಡುತ್ತೀರಿ? ಎನ್ನುವ ಪ್ರವೃತ್ತಿ ರಾಜ್ಯಪಾಲರಿಗೆ ಶೋಭೆ ತರುವಂತದಲ್ಲ. ಹಿಂದೆ ಭಾರದ್ವಾಜ್ ಅವರೂ ಹೀಗೆ ಮಾಡಿದ್ದರು ಎಂಬ ಪ್ರಶ್ನೆಗೆ
ನಾವು ಈ ಲೆವೆಲ್‌ಗೆ ಮಾಡಿರಲಿಕ್ಕಿಲ್ಲ. ಬೇಕಾದರೆ ನಮ್ಮ ರೆಕಾರ್ಡ್ ತೆಗೆದು ನಾವು ಏನು ಮಾಡಿದ್ದೆವು ಅಂತ ಹೇಳಿ. ಈ ಹಂತಕ್ಕೆ ನಾವು ಯಾವತ್ತೂ ಮಾಡಿಲ್ಲ ಎಂದರು.