.ಕಾಡಾನೆ ತಡೆಗೆ ಕೊನೆಗೂ ಮುಂದಾದ ಅರಣ್ಯ ಇಲಾಖೆ

KannadaprabhaNewsNetwork |  
Published : May 15, 2024, 01:37 AM IST
14ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಕಾಳಮ್ಮನ ಗುಡಿ ಬಳಿಯ ಅರಣ್ಯದಲ್ಲಿ ಅವ್ಯವಸ್ಥೆಯಲ್ಲಿದ್ದ ಸೋಲಾರ್ ಫನ್ಷಿಂಗ್ ಕಂಬಗಳನ್ನು ಇಲಾಖೆ ದುರಸ್ಥಿ ಮಾಡಿರುವುದು. | Kannada Prabha

ಸಾರಾಂಶ

ಅರಣ್ಯ ಇಲಾಖೆಯ ಅಧಿಕಾರಿಗಳು ಆಗಾಗ ಗಡಿ ಗ್ರಾಮಗಳತ್ತ ಭೇಟಿ ನೀಡುವುದರ ಜತೆಗೆ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಆನೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಇಲಾಖೆ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗಡಿ ಭಾಗದ ಗ್ರಾಮಗಳಲ್ಲಿ ಕಾಡಾನೆಗಳಿಂದ ರೈತರಿಗೆ ಸ್ವಲ್ಪವಾದರೂ ಮುಕ್ತಿ ಕಾಣಿಸಲು ಅರಣ್ಯ ಇಲಾಖೆ ಮುಂದಾಗಿ ಅದರ ಸಲುವಾಗಿ ಮುರಿದು ಬಿದ್ದಿರುವ ಸೋಲಾರ್ ಫೆನ್ಷಿಂಗ್ ಕಂಬಗಳನ್ನು ದುರಸ್ತಿಪಡಿಸಿ ಅವುಗಳಿಗೆ ಬ್ಯಾಟರಿಗಳನ್ನು ಅಳವಡಿಸಿ ಆನೆಗಳು ಅರಣ್ಯದಿಂದ ನಾಡಿನತ್ತ ಸೋಲಾರ್ ಫೆನ್ಷಿಂಗ್ ದಾಟಿ ಬಾರದಂತೆ ಕ್ರಮ ಕೈಗೊಂಡಿರುವುದು ಗಡಿ ಭಾಗದ ರೈತರು ಉಸಿರಾಡುವಂತಾಗಿದೆ.

ಇತ್ತೀಚೆಗೆ ಆನೆಗಳ ಹಾವಳಿ ಗಡಿ ಗ್ರಾಮಗಳಲ್ಲಿ ಮಿತಿ ಮೀರಿತ್ತು, ಈ ಹಿಂದೆ ಅರಣ್ಯ ಇಲಾಖೆ ಆನೆಗಳ ನಿಯಂತ್ರಣಕ್ಕೆ ಅಳವಡಿಸಿದ್ದ ಸೋಲಾರ್ ಫೆನ್ಷಿಂಗ್‌ನ ಬ್ಯಾಟರಿಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರಿಂದ ಆನೆಗಳು ರಾಜರೋಷವಾಗಿ ಗ್ರಾಮಗಳತ್ತ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಬೆಳೆ ರಕ್ಷಣೆಗೆ ಮುಂದಾಗಿದ್ದ ಎಷ್ಟೋ ಮಂದಿ ರೈತರ ಪ್ರಾಣ ಸಹ ಕಳೆದುಕೊಂಡಿದ್ದಾರೆ.

ಬೇಲಿಗೆ ಬ್ಯಾಟರಿ ಅಳವಡಿಕೆ

ರೈತರ ಪ್ರಾಣ ಮತ್ತು ಬೆಳೆ ಹಾನಿಯಿಂದ ಎಚ್ಚೆತ್ತುಕೊಂಡು ಅರಣ್ಯ ಇಲಾಖೆ ಕಾಡಾನೆಗಳ ನಿಯಂತ್ರಣಕ್ಕೆ ಇಲಾಖೆ ಅಧಿಕಾರಿಗಳು ನಿತ್ಯ ರಾತ್ರಿ ಗಸ್ತಿಗೆ ನೇಮಿಸಿ ಕಾರ್ಯಚರಣೆ ನಡೆಸುವುದರ ಜೊತೆಗೆ ಸೋಲಾರ್ ಫೆನ್ಷಿಂಗ್‌ಗೆ ಬ್ಯಾಟರಿಗಳನ್ನು ಅವಳವಡಿಕೆ ಮಾಡಿ ತಂತಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಆನೆಗಳು ಅರಣ್ಯದಿಂದ ನಾಡಿನತ್ತ ಬಂದಾಗ ವಿದ್ಯುತ್ ಶಾಕ್ ನೀಡಿ ಓಡಿಸಲು ಮುಂದಾಗಿದ್ದಾರೆ. ಆನೆಗಳ ತುಳಿತಕ್ಕೆ ನೆಲಕ್ಕೆ ಬಿದ್ದಿದ್ದ ಸೋಲಾರ್ ಫೆನ್ಷಿಂಗ್ ಕಂಬಗಳನ್ನು ಸಹ ಸರಿಪಡಿಸಲಾಗಿದೆ. ಬ್ಯಾಟರಿಗಳು ಮಾಯವಗಿದ್ದ ಎಲ್ಲಾ ಕಡೆ ಬ್ಯಾಟರಿಗಳನ್ನು ಅಳವಡಿಸಿ ಅದ್ದರಿಂದ ತಂತಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ. ತಂತಿಗಳ ಮೂಲಕ ಒಂದು ಮಾರ್ಗದಲ್ಲಿ ಸುಮಾರು ೭.೨ಕಿಲೋ ವೋಲ್ಟ್ಸ್ ಮತ್ತೊಂದು ಮಾರ್ಗದಲ್ಲಿ ೯.೮ ಕಿ.ವ್ಯಾ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

ಬೇಲಿ ಸ್ಪರ್ಶಿಸಿದರೆ ಆನೆಗಳಿಗೆ ಶಾಕ್‌

ಅಕಸ್ಮಾತ್ ಆನೆಗಳು ವಿದ್ಯುತ್ ಸಂಪರ್ಕ ಇರುವಂತಹ ಸೋಲಾರ್ ಫೆನ್ಷಿಂಗ್ ತಂತಿಗಳನ್ನು ಸ್ಪರ್ಶಿಸಿದರೆ ಶಾಕ್ ಹೊಡೆದು ಅಲ್ಲಿಂದ ದೂರ ಓಡಿ ಹೋಗುತ್ತವೆ. ಶಾಕ್ ಹೊಡೆತಕ್ಕೆ ತುತ್ತಾದಂತಹ ಕಾಡಾನೆಗಳು ಮತ್ತೆ ಇತ್ತ ಕಡೆ ಬರಲು ಹಿಂದೇಟು ಹಾಕುತ್ತವೆ ಎಂಬುದು ಅರಣ್ಯಾಧಿಕಾರಿಗಳ ಅಭಿಪ್ರಾಯ.

ಇದರ ಜೊತೆಗೆ ಇಲಾಖೆಯಿಂದ ಸಿಬ್ಬಂದಿಯನ್ನು ಸಹ ಹೆಚ್ಚಿಸಿದ್ದು, ರಾತ್ರಿ ವೇಳೆ ಗಸ್ತು ತಿರುಗಲು ಸೂಚನೆನೀಡಲಾಗಿದೆ. ಅದರಂತೆ ರಾತ್ರಿಯ ವೇಳೆ ನಾನಾ ಪಾಳಿಯ ರೂಪದಲ್ಲಿ ಗಸ್ತು ತಿರುಗುತ್ತಾ ತಾವು ಎಲ್ಲಿ ಇದ್ದೇವೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಗೆ ಆಗಿಂದಾಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಆನೆ ಚಲನವಲನ ಬಗ್ಗೆ ಮಾಹಿತಿ

ಆನೆಗಳು ಅರಣ್ಯ ಪ್ರದೇಶದಿಂದ ಹೊರ ಬಂದ ಕೂಡಲೇ ಪಟಾಕಿ ಸಿಡಿಸಿ ಕಾರ್ಯಾಚರಣೆ ಮಾಡಿ ಕಾಡಿನತ್ತ ಓಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ವಾಟ್ಸಾಪ್ ಗ್ರೂಪ್ ಹಾಗೂ ಇತರೆ ಸಾಮಾಜಿಕ ಜಾಲ ತಾಣದ ಮೂಲಕ ಕಾಡಾನೆಗಳ ಚಲನವಲನದ ಮಾಹಿತಿಯನ್ನು ರೈತರಿಗೆ ಅಪ್‌ಡೇಟ್ ಮಾಡಿ ಅರಿವು ಮೂಡಿಸಲಾಗುತ್ತಿದೆ. ಕಾಡಾನೆ ಇರುವ ಕಡೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುತ್ತಿದೆ.ಅರಣ್ಯ ಇಲಾಖೆಯ ಅಧಿಕಾರಿಗಳು ಆಗಾಗ ಗಡಿ ಗ್ರಾಮಗಳತ್ತ ಭೇಟಿ ನೀಡುವುದರ ಜತೆಗೆ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಹದ್ದಿನ ಕಣ್ಣು ಇಟ್ಟು ಆನೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಕಾಡಾನೆಗಳು ಗಡಿಯೊಳಗೆ ನುಗ್ಗಿ ಬೆಳೆ ನಾಶ ಮಾಡುವುದು ಕಡಿಮೆಯಾಗುತ್ತಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.14ಕೆಬಿಪಿಟಿ.1. ಬಂಗಾರಪೇಟೆ ತಾಲೂಕಿನ ಕಾಳಮ್ಮನ ಗುಡಿ ಬಳಿಯ ಅರಣ್ಯದಲ್ಲಿ ಸೋಲಾರ್ ಫೆನ್ಷಿಂಗ್ ಕಂಬಗಳನ್ನು ಅರಣ್ಯ ಇಲಾಖೆ ದುರಸ್ತಿ ಮಾಡಿರುವುದು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ