ಪುತ್ರ ಸಂತಾನಕ್ಕೆ ಮಣೆ ಹಾಕದ ಕೋಟೆ ನಾಡು

KannadaprabhaNewsNetwork |  
Published : Jul 15, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಎಸ್.ನಿಜಲಿಂಗಪ್ಪ, ಜಿ.ಶಿವಪ್ಪ, ಡಿ.ಮಂಜುನಾಥ್, ಕೆ.ಎಚ್.ರಂಗನಾಥ್, ಎಚ್.ಏಕಾಂತಯ್ಯ, ತಿಪ್ಪೇಸ್ವಾಮಿ

ಚಿತ್ರದುರ್ಗ ಜಿಲ್ಲೆಯ ಯಾರೊಬ್ಬ ರಾಜಕಾರಣಿಯ ಮಕ್ಕಳು ಚುನಾವಣೆಯಲ್ಲಿ ಗೆದ್ದಿಲ್ಲ । ಅವಕಾಶಗಳ ಕ್ಷಿತಿಜ ತೆರೆದುಕೊಂಡಿಲ್ಲ ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪಕ್ಷ ರಾಜಕಾರಣದ ಮೇಲೆ ಕುಟುಂಬ ಹಿಡಿತ ಸಾಧಿಸುವುದು, ಮಕ್ಕಳಿಗೂ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವುದು, ಎರಡನೇ ಹಂತದ ನಾಯಕತ್ವಕ್ಕಾಗಿ ಮಕ್ಕಳ ರೂಪಿಸಿ ಚುನಾವಣಾ ಕಣಕ್ಕಿಳಿಸುವುದು ವರ್ತಮಾನದ ರಾಜಕಾರಣದಲ್ಲಿ ಸಹಜ ಪ್ರಕ್ರಿಯೆ. ಅಚ್ಚರಿಯೆಂದರೆ 1952ರಲ್ಲಿ ನಡೆದ ಮೈಸೂರು ಸರ್ಕಾರದ ವಿಧಾನಸಭೆಗೆ ಚುನಾವಣೆಗಳಿಂದ ಇಲ್ಲಿಯವರೆಗೂ ಚಿತ್ರದುರ್ಗ ಜಿಲ್ಲೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿಲ್ಲ. ವಿಧಾನ ಪರಿಷತ್ತಿನ ವಿರಳ ಪ್ರಸಂಗ ಹೊರತು ಪಡಿಸಿ ಉಳಿದಂತೆ ವಂಶವಾಹಿನ ರಾಜಕಾರಣವ ಬೆಂಬಲಿಸಿಲ್ಲ.

ಮೂರು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ತಮ್ಮ ನಂತರದ ರಾಜಕಾರಣಕ್ಕೆ ತಮ್ಮ ಪುತ್ರರಾರನ್ನೂ ಸಜ್ಜುಗೊಳಿಸಲಿಲ್ಲ. ವಿಧಾನಸೌಧದ ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ರಾಜಕಾರಣ ಮಕ್ಕಳನ್ನು ಪ್ರಭಾವಿಸಲಿಲ್ಲ. ಅಷ್ಟರ ಮಟ್ಟಿಗೆ ನಿಜಲಿಂಗಪ್ಪ ಬದ್ಧತೆ ಪ್ರದರ್ಶಿಸಿ ಗಾಂದಿವಾದಿಗಳಾಗಿಯೇ ನೆಲದ ಸಂಪರ್ಕ ಕಡಿದುಕೊಂಡರು.

ನಿಜಲಿಂಗಪ್ಪ ಅವರ ಸಮಕಾಲೀನರಾಗಿದ್ದ ಭೀಮಸಮುದ್ರದ ಜಿ.ಶಿವಪ್ಪ 1952 ರಿಂದ 1962 ರವರೆಗೆ ಹೊಳಲ್ಕೆರೆ ಡಬಲ್ ಕ್ಷೇತ್ರದ ಶಾಸಕರಾಗಿದ್ದರು. ನಂತರದಲ್ಲಿ ಅವರ ಕುಟುಂಬಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲೇ ಇಲ್ಲ. ಅವರ ಪುತ್ರ ಜಿ.ಎಸ್.ಮಂಜುನಾಥ್ ಮೂರು ಬಾರಿ ವಿಧಾನಸಭೆ, ಒಮ್ಮೆ ವಿಧಾನ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿದರಾದರೂ ಜನ ಬೆಂಬಲ ಸಿಗಲಿಲ್ಲ.

ಲೋಕಸಭೆ ಹಾಗೂ ವಿಧಾನಸಭೆ ಎರಡೂ ಕ್ಷೇತ್ರಗಳಿಂದ ಗೆದ್ದಿದ್ದ ಹಿರಿಯ ಮುತ್ಸದ್ದಿ ಕೆ.ಎಚ್.ರಂಗನಾಥ್ ಅವರ ಪುತ್ರರಾರೂ ರಾಜಕೀಯಕ್ಕೆ ಬರಲಿಲ್ಲ. ಒಮ್ಮೆ ಹಿರಿಯೂರು ಕ್ಷೇತ್ರದಿಂದ ರಂಗನಾಥ್ ಪುತ್ರ ಭಾಸ್ಕರ್ ಕಣಕ್ಕಿಳಿಯಲು ಸಜ್ಜಾಗಿದ್ದರಾದರೂ ರಂಗನಾಥ್ ಟಿಕೆಟ್ ಕೊಡಬಾರದೆಂದು ಪಟ್ಟು ಹಿಡಿದ್ದರು.

ಹಿರಿಯೂರು ವಿಧಾನಸಭೆ ಕ್ಷೇತ್ರದ ಮತ್ತೋರ್ವ ಹಿರಿಯ ನಾಯಕ ಡಿ.ಮಂಜುನಾಥ್ ಅವರ ಪುತ್ರರಾರೂ ಶಾಸನ ಸಭೆ ಪ್ರವೇಶಿಸಲಿಲ್ಲ. ಜಿಲ್ಲಾ ಪಂಚಾಯಿತಿಗೆ ಸೀಮಿತರಾದರು. ಮತ್ತೋರ್ವ ಹಿರಿಯ ನಾಯಕ ಎಚ್.ಏಕಾಂತಯ್ಯ ತಮ್ಮ ಕುಟುಂಬದ ಯಾವ ಸದಸ್ಯರನ್ನೂ ರಾಜಕಾರಣದ ಹತ್ತಿರಕ್ಕೆ ಬಾರದಂತೆ ನೋಡಿಕೊಂಡರು. ಇದಲ್ಲದೇ ಬಿ.ಎಲ್.ಗೌಡ, ಮಸಿಯಪ್ಪ, ರಾಮಯ್ಯ ಇವರ ಕುಟುಂಬದವರರೂ ಕೂಡ ರಾಜಕೀಯ ಪ್ರವೇಶಿಸಿ ಶಾಸಕರಾಗಲೇ ಇಲ್ಲ. ಸಚಿವರಾಗಿದ್ದ ಡಿ.ಸುಧಾಕರ್ ಉಸಿರು ಇರುವ ತನಕ ಮಕ್ಕಳನ್ನು ರಾಜಕೀಯಕ್ಕೆ ಬಿಟ್ಟುಕೊಂಡಿರಲಿಲ್ಲ. ಇದೀಗ ಅವರ ಪುತ್ರ ಸುಹಾಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ.

ಚಳ್ಳಕೆರೆ ವಿಧಾನಸಭೆ ಕ್ಷೇತ್ರದಿಂದ ಗೆದ್ದಿದ್ದ ತಿಪ್ಪೇಸ್ವಾಮಿ, ನನ್ನಿವಾಳ ಶಿವಶಿಂಕರಪ್ಪ, ಎನ್.ಜಯಣ್ಣ, ಬಸವರಾಜ ಮಂಡಿಮಠ ಹಾಲಿ ಶಾಸಕ ರಘುಮೂರ್ತಿ ಅವರಾರೂ ಕೂಡ ತಮ್ಮ ರಾಜಕಾರಣದ ಹತ್ತಿರಕ್ಕೆ ಮಕ್ಕಳ ಬಿಟ್ಟುಕೊಂಡಿಲ್ಲ. ತಿಪ್ಪೇಸ್ವಾಮಿ ಅವರ ಪುತ್ರ ಕೆ.ಟಿ.ಕುಮಾರಸ್ವಾಮಿ ಎರಡು ಬಾರಿ ಚಳ್ಳಕೆರೆ ಕ್ಷೇತ್ರದಿಂದ ಕಣಕ್ಕೆ ಇಳಿದರಾದರೂ ಜನ ಬೆಂಬಲಿಸಲಿಲ್ಲ.

ಮೊಳಕಾಲ್ಮೂರು ಕ್ಷೇತ್ರದಿಂದ ಗೆದ್ದಿದ್ದ ಎನ್.ಜಿ.ನಾಯಕ, ಪೂರ್ಣಮುತ್ತಪ್ಪ, ಎನ್.ವೈ.ಗೋಪಾಲಕೃಷ್ಣ ಅವರು ತಮ್ಮ ಪುತ್ರರ ರಾಜಕೀಯಕ್ಕೆ ಎಂಟ್ರಿ ಕೊಡಿಸಲೇ ಇಲ್ಲ.

ಹೊಸದುರ್ಗದಲ್ಲಿ ಒಂದು ಕಾಲದಲ್ಲಿ ಎಸ್.ನಿಜಲಿಂಗಪ್ಪ ಅವರನ್ನು ಸೋಲಿಸಿದ್ದ ಸಿದ್ದವೀರಪ್ಪ, ನಂತರದಲ್ಲಿ ಶಾಸಕರಾಗಿದ್ದ ಇಲ್ಕಲ್ ವಿಜಯಕುಮಾರ್, ತಂಡಗದ ಬಸವರಾಜ್, ಬಿ.ಜಿ.ಗೋವಿಂದಪ್ಪ ಕೂಡ ಎರಡನೇ ಹಂತದ ನಾಯಕರನ್ನಾಗಿ ತಮ್ಮ ಮಕ್ಕಳ ರೂಪಿಸಲಿಲ್ಲ. ಚಿತ್ರದುರ್ಗಲ್ಲಿ ನಿರಂತರವಾಗಿ ಗೆಲವು ಸಾಧಿಸಿದ್ದ ಜಿ.ಎಚ್.ತಿಪ್ಪಾರೆಡ್ಡಿ ಅವರ ಪುತ್ರ ಬಿಜೆಪಿಯಲ್ಲಿ ಇದ್ದಾರೆ ಆದರೂ ಚುನಾವಣೆಗೆ ನಿಲ್ಲುವ ಅವಕಾಶಗಳು ಕೂಡಿ ಬಂದಿಲ್ಲ. ಮತ್ತೋರ್ವ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ತಮ್ಮ ಪುತ್ರನ ರಾಜಕೀಯಕ್ಕೆ ಕರೆತಂದಿಲ್ಲ, ಆದರೆ ಪತ್ನಿ ಸೌಭಾಗ್ಯ ಬಸವರಾಜನ್ ಸಮಯಕ್ಕಾಗಿ ಎದಿರು ನೋಡುತ್ತಿದ್ದಾರೆ.

ಭರಮಸಾಗರ ಹಾಗೂ ಹೊಳಲ್ಕೆರೆಯಲ್ಲಿ ಈ ಹಿಂದೆ ಗೆದ್ದಿದ್ದ ಡಾ.ಬಿ.ಎಂ.ತಿಪ್ಪೇಸ್ವಾಮಿ, ಶಿವಮೂರ್ತಿ ನಾಯಕ, ಚೌಡಯ್ಯ, ದುಗ್ಗಪ್ಪ, ಎ.ವಿ.ಉಮಾಪತಿ, ಜಾನಕಲ್ ಮಂಜುನಾಥ್, ತುಪ್ಪದಹಳ್ಳಿ ತಿಮ್ಮಣ್ಣ, ಪಿ.ರಮೇಶ್, ಹೆಚ್.ಆಂಜನೇಯ ಅವರ ಪುತ್ರರಾರೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿಲ್ಲ. ಹಾಲಿ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘುಚಂದನ್ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.

ಸ್ವಾತಂತ್ರ್ಯಾನಂತರ ಕರ್ನಾಟಕದ ರಾಜಕೀಯದ ಚಿತ್ರದುರ್ಗ ಇತಿಹಾಸ ವಂಶಾವಳಿ ರಾಜಕಾರಣಕ್ಕೆಗೆ ಮಣೆ ಹಾಕಿಯೇ ಇಲ್ಲವೆಂಬುದ ಸಾಕ್ಷೀಕರಿಸಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ವಿಶಿಷ್ಟತನವನ್ನು ಬಿಂಬಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಗಡದಲ್ಲಿ ಕೋವಿಡ್ ಮುಂಜಾಗ್ರತೆಗೆ ಡಿಸಿ ಸೂಚನೆ
ಕುರಿ ಮಾಲೀಕನಿಗೆ ಪರಿಹಾರ ಮಂಜೂರಾತಿ ಆದೇಶ ಪತ್ರ