ಲಕ್ಷ್ಮೇಶ್ವರ: ಪ್ರೌಢಶಾಲಾ ಹಂತದ ಶಿಕ್ಷಣ ವಿದ್ಯಾರ್ಥಿಯ ಜೀವನದ ಬುನಾದಿ. ಈ ಹಂತವನ್ನು ಸದೃಢಗೊಳಿಸಿ ವಿದ್ಯಾರ್ಥಿ ನಾಳಿನ ನಾಡಿನ ಸಮರ್ಥ ನಾಗರಿಕರನ್ನಾಗಿ ನಿರ್ಮಾಣ ಮಾಡುತ್ತಿರುವ ಗುರುತರ ಜವಾಬ್ದಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಣಾಧಿಕಾರಿಗಳ ಮೇಲಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಬಿ.ಸಿ.ಎನ್ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ, ಶಿಕ್ಷಣಾಧಿಕಾರಿಗಳ ಸಂಘ ಗದಗ ಜಿಲ್ಲೆ ಹಾಗೂ ಶಿರಹಟ್ಟಿ ತಾಲೂಕು ಸಹಯೋಗದಲ್ಲಿ ಜರುಗಿದ ಸರ್ಕಾರಿ ಪ್ರೌಢಶಾಲೆಗಳ ಅಭಿವೃದ್ಧಿ, ಗುಣಾತ್ಮಕ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ಮಾತನಾಡಿ, ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಂದ ಹಿಡಿದು ಶಿಕ್ಷಣ ಇಲಾಖೆಯ ರಾಜ್ಯ ನಿರ್ದೇಶಕರವರೆಗೆ ಇರುವ ಎಲ್ಲ ಶಿಕ್ಷಣಾಧಿಕಾರಿಗಳು ಶಿಕ್ಷಣ ಇಲಾಖೆಯ ಮೆದುಳು ಇದ್ದ ಹಾಗೆ. ಇಲಾಖೆಯ ಎಲ್ಲ ಕಾರ್ಯಚಟುವಟಿಕೆಗಳನ್ನು ಅತ್ಯಂತ ಕಾಳಜಿ ಪೂರ್ವಕವಾಗಿ ಅನುಷ್ಠಾನಗೊಳಿಸುವ ಕಾರ್ಯ ಅಧಿಕಾರಿಗಳು ಮಾಡುತ್ತಿದ್ದಾರೆ. ಅವರಿಗೆ ನೈತಿಕವಾದ ಬೆಂಬಲ ಶಿಕ್ಷಣಾಧಿಕಾರಿಗಳ ಸಂಘ ನೀಡುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್. ಬಾರಾಟಕ್ಕೆ ಮಾತನಾಡಿ, ದಸರಾ ರಜಾ ದಿನಗಳಲ್ಲಿಯೂ ಕೂಡ ನಮ್ಮ ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಣಾಧಿಕಾರಿಗಳು, ಶಿಕ್ಷಕರು ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ರಜಾ ದಿನದ ವಿಶೇಷ ತರಗತಿ ಸಂಘಟಿಸಿ, ಮೇಲ್ವಿಚಾರಣೆ ಮಾಡಿ ಫಲಿತಾಂಶ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಶಹರ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಪ್ರಾಸ್ತಾವಿಕಾಗಿ ಮಾತನಾಡಿ, ಗದಗ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಅಭಿವೃದ್ಧಿಗಾಗಿ, ಗುಣಾತ್ಮಕ ಶಿಕ್ಷಣಕ್ಕಾಗಿ ಇಲಾಖೆಯ ಅಧಿಕಾರಿಗಳು ಸಮರ್ಥವಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದರ ಮೂಲಕ ಇಲಾಖೆಗೆ ಅಮೂಲ್ಯ ಆಸ್ತಿ ಎನಿಸಿದ್ದಾರೆ ಎಂದರು.ರೋಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರುಳಿ ಮಾತನಾಡಿ, ರಾಜ್ಯಾದ್ಯಂತ ಎಲ್ಲ ತರಹದ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಿ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ನಮ್ಮ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಣಾಧಿಕಾರಿಗಳ ಸಂಘ ನಿರಂತರವಾಗಿ ಬೆಂಬಲವಾಗಿ ನಿಂತಿದೆ, ನಿಲ್ಲುತ್ತದೆ ಎಂದರು.
ಈ ವೇಳೆ ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಎಸ್.ಡಿ.ಕನವಳ್ಳಿ, ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಡಯಟ್ ಉಪನ್ಯಾಸಕ ಎಚ್.ಬಿ. ರಡ್ಡೇರ, ಶಂಕರ ಹಡಗಲಿ, ಎಸ್.ಕೆ.ಹವಾಲ್ದಾರ ಹಾಗೂ ಹಲವಾರು ಅಧಿಕಾರಿಗಳು ಮಾತನಾಡಿದರು.ಮುಂಡರಗಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ, ನರಗುಂದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಮಜ್ಜಿಗಿ, ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ, ಲಕ್ಷ್ಮೇಶ್ವರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ ಉಪಸ್ಥಿತರಿದ್ದರು. ಶಿರಹಟ್ಟಿ ತಾಲೂಕು ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ ಸ್ವಾಗತಿಸಿದರು. ಸಿ.ಆರ್.ಪಿ ಜೆ.ಎಸ್.ಗಾಯಕವಾಡ, ಕೆ.ಪಿ. ಕಂಬಳಿ ಪ್ರಾರ್ಥಿಸಿದರು. ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ನಿರೂಪಿಸಿದರು. ಡಯಟ್ ಉಪನ್ಯಾಸಕ ಎಸ್.ಎಸ್. ಕುರಿ ವಂದಿಸಿದರು.