ಕನ್ನಡಪ್ರಭ ವಾರ್ತೆ ಅಮೀನಗಡ
ನನ್ನೂರಿನ ಹಿರಿಯರ, ಪಕ್ಷದ ಕಾರ್ಯಕರ್ತರ ಶ್ರಮವೇ ನನಗೆ ಅಧಿಕಾರ ಸಿಗಲು ಕಾರಣ ಎಂದು ಮಾಜಿ ಶಾಸಕ, ರಾಜ್ಯ ಕೈಗಾರಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.ತಮ್ಮ ಹುಟ್ಟೂರಾದ ಸೂಳೇಬಾವಿಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ಹುಟ್ಟೂರಿನ ಉಪಕಾರ ಸ್ಮರಣೆ ಮಾಡುತ್ತಾ, ನನ್ನೂರಿನ ಮಣ್ಣಿನ ಗುಣವೇ ಅಂತಹುದು. ನಾನು ಎರಡು ಬಾರಿ ಶಾಸಕನಾಗಲು, ಗ್ರಾಮದ ಹಿರಿಯರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ನನ್ನ ಕಾರ್ಯಕರ್ತರು, ಹಿರಿಯರು, ಯುವಕರು, ಪ್ರತಿಯೊಬ್ಬರೂ ನನಗೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಕೆಲವು ಸಂದರ್ಭಗಳಲ್ಲಿ ವೈಮನಸ್ಸು, ವೈರತ್ವ, ಭಿನ್ನಾಭಿಪ್ರಾಯ ಮೂಡಿದ್ದರೂ, ಊರಿನ ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಂದಾಗಿ ನಿಂತ ಉದಾಹರಣೆಗಳಿವೆ ಎಂದು ಹೇಳಿದರು.
ಇದುವರೆಗೂ ಪಕ್ಷ ಯಾವುದೇ ಹುದ್ದೆ ಕೊಟ್ಟರೂ ನಿಷ್ಠೆ, ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ಈ ಹುದ್ದೆಯನ್ನೂ ತಮ್ಮೆಲ್ಲರ ಸಹಕಾರದಿಂದ ಪ್ರಾಮಾಣಿಕ, ಜವಾಬ್ದಾರಿಯುತವಾಗಿ ನಿರ್ವಹಿಸಿ ಪಕ್ಷಕ್ಕೂ, ನನ್ನೂರಿಗೂ ಕೀರ್ತಿ ತರುತ್ತೇನೆ. ಎಲ್ಲರೂ ಒಂದಾಗಿ ಭಾವೈಕ್ಯತೆಯಿಂದ ಮುಂದುವರೆಯುವ ಮೂಲಕ, ಯುವಕರಿಗೆ ಮಾರ್ಗದರ್ಶನ ನೀಡುತ್ತಾ, ಹಿಂದಿನ ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರೆ ಮುಂದುವರೆಸಿಕೊಂಡು ಹೋಗಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.ಗ್ರಾಮ ಪಂಚಾಯತಿ ಅಧ್ಯಕ್ಷ ಪಿಡ್ಡಪ್ಪಣ್ಣ ಕುರಿ, ಉಪಾಧ್ಯಕ್ಷ ಯಮನಪ್ಪ ವಡ್ಡರ, ಸದಸ್ಯರಾದ ಹುಲಗಪ್ಪ ಕುರಿ, ವಿಶ್ವನಾಥ ರಾವಳ, ಜಗದೀಶ ಪಾಟೀಲ, ಜ್ಯೋತಿ ಪೂಜಾರಿ, ಸರೋಜ ವಡ್ಡರ, ಗ್ಯಾನಪ್ಪ ಗೋನಾಳ, ಮಹಾಂತಯ್ಯ ನಂಜಯ್ಯನಮಠ, ಹಿರಿಯರಾದ ಪ್ರಭಯ್ಯ ನಂಜಯ್ಯನಮಠ, ದುರ್ಗಪ್ಪ ಹೊಸಮನಿ, ಅಂದಾನಯ್ಯ ಪಾಟೀಲ, ನಾಗರಾಜ ಕಲಬುರ್ಗಿ, ದೇವರಾಜ ಕಮತಗಿ, ಖಾಜೇಸಾಬ ಮುಲ್ಲಾ, ಆದಮಸಾಬ ತಂಗಡಗಿ, ಮೂಖಪ್ಪ ಮಾದರ, ಅಂದಾನಪ್ಪ ಹಕಾರಿ, ಯಮನಪ್ಪ ಗಾಳಿ ಇತರರು ಇದ್ದರು.