ಜಿ.ಸೋಮಶೇಖರ

ಕೊಟ್ಟೂರು: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಹಗರಿಬೊಮ್ಮನಹಳ್ಳಿ ತಾಲೂಕು ಬನ್ನಿಗೋಳ ಜಲಾಶಯದಲ್ಲಿ ತಿಂಗಳು ಪೂರ್ತಿಯಾಗುವಷ್ಟು ನೀರಿದ್ದರೂ ಕೊಟ್ಟೂರು ಪಟ್ಟಣಕ್ಕೆ ಸಿಗುವುದೇ ವಾರಕ್ಕೆ ಒಂದು ಬಾರಿ. ಬಳಕೆಗೆ ತೀವ್ರ ಬರ ಉಂಟಾಗಿದೆ.

ಪಟ್ಟಣಕ್ಕೆ ನೀರು ಐದು ಅಥವಾ ಆರು ದಿನಕ್ಕೊಮ್ಮೆ ಪೂರೈಕೆಯಾಗುತ್ತಿರುವುದಕ್ಕೆ ನೀರಿನ ಕೊರತೆ ಇಲ್ಲವೇ ಇಲ್ಲ. ವಿದ್ಯುತ್ ಪೂರೈಕೆ ಸಮಸ್ಯೆ ಕಾರಣಕ್ಕಾಗಿ ನಾಗರಿಕರು ನೀರಿನ ತೀವ್ರ ಬಗೆಯ ತೊಂದರೆ ಅನುಭವಿಸುವಂತಾಗಿದೆ.

ತಾಲೂಕಿನ 14 ಹಳ್ಳಿಗಳನ್ನು ಸಮಸ್ಯಾತ್ಮಾಕಗಳೆಂದು ತಾಲೂಕು ಆಡಳಿತ ಗುರುತಿಸಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರನ್ನು ಪಡೆಯಲು ಬೋರ್‌ವೆಲ್ ಕೊರೆಸುವುದು ಸೇರಿದಂತೆ ಇತರ ಯೋಜನೆಗಳನ್ನು ಕೈಗೊಳ್ಳಬಹುದು ಎಂದು ಟಾಸ್ಕ್ ಫೋರ್ಸ್ ಸಮಿತಿಗೆ ವರದಿ ಸಲ್ಲಿಕೆಯಾಗಿದೆ.

ಬನ್ನಿಗೋಳ ಬಳಿಯ ತುಂಗಭದ್ರಾ ನದಿ ಹಿನ್ನೀರು ಪ್ರದೇಶದ ಜಾಕ್‌ವೆಲ್‌ನಿಂದ ಕೊಟ್ಟೂರಿಗೆ ನೀರು ಸರಬರಾಜು ಆಗುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಸುಲಲಿತ ನೀರು ಪೂರೈಕೆಗೆ 18 ತಾಸುಗಳ ನಿರಂತರ ವಿದ್ಯುತ್ ಪೂರೈಕೆ ಅಗತ್ಯವಿದೆ. ಆದರೆ ಕಾರಣ ಕೇಳಿದರೆ ನೀರು ಪಂಪ್‌ ಮಾಡಲು ವಿದ್ಯುತ್‌ ತೊಂದರೆ ಇದೆ ಎಂದು ಪಪಂನವರು ಹೇಳುತ್ತಿದ್ದಾರೆ. ಇತ್ತ ಜೆಸ್ಕಾಂನವರು 15 ದಿನದಿಂದಲೂ ಲೋ ವೋಲ್ಟೇಜ್‌ ಸಮಸ್ಯೆಯ ಕಾರಣ ತೋರಿಸಿ ಇಲ್ಲಿನ ಜನರಿಗೆ ಬಾಯಾರಿಕೆಯಾಗುವಂತೆ ಮಾಡಿದ್ದಾರೆ.


ಕುಡಿಯುವ ನೀರಿಗೆ ಸರಿಯಾದ ವಿದ್ಯುತ್ ಪೂರೈಕೆಯಾಗಬೇಕಿದೆ. ಈ ಬಗೆಯ ವಿದ್ಯುತ್‌ ತೊಂದರೆ ಬಗ್ಗೆ ವಿಚಾರಿಸಲು ಸಂಬಂಧಪಟ್ಟ ವಿಭಾಗೀಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ನಮ್ಮದೇನೋ ಸಮಸ್ಯೆ ಇಲ್ಲವೇ ಇಲ್ಲ ಎಂದು ಹೇಳುತ್ತಾರೆ. ಇಷ್ಟರಲ್ಲೇ ಮತ್ತೊಂದು ಟ್ರಾನ್ಸ್‌ಫಾರ್ಮರ್‌ ಅಳವಡಿಸಲು ಯೋಜನೆ ರೂಪಿಸಿದ್ದೇವೆ. ಅಲ್ಲಿವರೆಗೂ ಸ್ವಲ್ಪ ವ್ಯತ್ಯಾಸ ಆಗುತ್ತದೆ ಎನ್ನುವ ಸಮಜಾಯಿಸಿ ಉತ್ತರವನ್ನು ಜೆಸ್ಕಾಂ ನೀಡುವುದು ಗಮನಿಸಿದರೆ ಸುಮಾರು 10 ದಿನ ನೀರಿನ ತೊಂದರೆ ಅನುಭವಿಸಬೇಕಿರುವುದು ಅನಿವಾರ್ಯ ಎನ್ನುವಂತಿದೆ. ಕೊಟ್ಟೂರಿಗರಿಗೆ ಬನ್ನಿಗೋಳ ಜಲಾಶಯದಲ್ಲಿ ನೀರಿದ್ದರೂ ವಿದ್ಯುತ್ ಇಲಾಖೆಯ ಅವಕೃಪೆಯಿಂದ ಅಗತ್ಯ ನೀರು ಸಿಗದಂತಾಗಿರುವುದು ನಗ್ನ ಸತ್ಯ.

ಪಟ್ಟಣದ ಅಂದಾಜು 40 ಸಾವಿರಕ್ಕೂ ಅಧಿಕ ಜನರಿಗೆ ಕುಡಿಯುವ ನೀರು ಪೂರೈಸಲು ಪಪಂ ಆಡಳಿತ ಯೋಜನೆ ರೂಪಿಸಿ ಮೊದಲು 3 ದಿನಕ್ಕೊಮ್ಮೆ, ಬಳಿಕ 5 ದಿನಕ್ಕೊಮ್ಮೆ ನೀರು ಬಿಡುತ್ತಿದ್ದರು. ಇದೀಗ ನೀರು ಯಾವಾಗ ಪೂರೈಕೆಯಾದೀತೋ ಎನ್ನುವ ಪ್ರಶ್ನೆಗೆ ಅವರೆಲ್ಲರೂ ವಿದ್ಯುತ್‌ ಲೋವೋಲ್ಟೇಜ್‌ ಕಾರಣ ತೋರಿಸುತ್ತಿರುವುದು ಜನತೆಯಲ್ಲಿ ನಿಜಕ್ಕೂ ಆತಂಕ ಸೃಷ್ಟಿಸಿದೆ. ಬೇಸಿಗೆ ಆರಂಭದಲ್ಲೇ ಈ ಪರಿ ನೀರಿನ ಪರಿತಾಪವಾದರೆ ಮುಂದಿನ ಮೇ ತಿಂಗಳಲ್ಲಿ ನೀರು ಪೂರೈಕೆ ಯಾವ ಹಂತಕ್ಕೆ ತಲುಪುವುದೋ ಎಂದು ಯೋಚಿಸುವಂತಾಗಿದೆ.

ಸಮಸ್ಯೆ ಕಾಣಿಸಬಹುದಾದ ಹಳ್ಳಿಗಳು: ಕೊಟ್ಟೂರು ತಾಲೂಕಿನ 14 ಗ್ರಾಪಂಯ 325 ಬೋರ್‌ವೆಲ್‌ಗಳಲ್ಲಿ 183 ಬೋರ್‌ವೆಲ್‌ಗಳು ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿವೆ. 42 ಬೋರ್‌ಗಳು ಸ್ಥಗಿತಗೊಂಡಿವೆ. ಚಿರಿಬಿ, ದೂಪದಹಳ್ಳಿ, ಕೋಗಳಿ, ಉಜ್ಜಯನಿ, ತಿಮ್ಮಲಾಪುರ, ತೂಲಾಹಳ್ಳಿ, ಹನುಮನಹಳ್ಳಿ, ನಿಂಬಳಗೇರಿ, ಗಾಣಗಟ್ಟೆ, ಹ್ಯಾಳ್ಯಾ, ಮಲ್ಲನಾಯಕನಹಳ್ಳಿ, ಮೋತಿಕಲ್ ತಾಂಡ, ಲೊಟ್ಟನಕೆರೆ, ಮೂರ್ತಿನಾಯಕನಹಳ್ಳಿ, ಹಾರಕನಾಳು.

ಕೊಟ್ಟೂರು ಪಟ್ಟಣದ ನೀರು ಸರಬರಾಜು ಆಗುವ ಬನ್ನಿಗೋಳ ಜಾಕ್‌ವೆಲ್, ಬೆಣಕಲ್ಲು ಪಂಪ್ ಭಾಗದಲ್ಲಿ ವಿದ್ಯುತ್ ತೊಂದರೆಯಾಗದಂತೆ ಜೆಸ್ಕಾಂ ಅಧಿಕಾರಿಗಳು ಗಮನ ಹರಿಸಿಬೇಕು. ನಿರಂತರ ವಿದ್ಯುತ್ ಪೂರೈಕೆಗೆ ಅಡಚಣೆ ಆಗುವ ಎಲ್ಲ ಬಗೆಯ ತೊಂದರೆಗಳನ್ನು ಅವರ ನಿವಾರಿಸಬೇಕು ಎನ್ನುತ್ತಾರೆ ಕೊಟ್ಟೂರು ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ.

ಕೊಟ್ಟೂರು ತಾಲೂಕಿನ ಗ್ರಾಮಗಳಲ್ಲಿ ಸದ್ಯಕ್ಕೆ ನೀರಿನ ತೊಂದರೆ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ತೊಂದರೆ ಮುನ್ನವೇ ಸಮಸ್ಯೆಯನ್ನು ನಿವಾರಿಸಲು ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎನ್ನುತ್ತಾರೆ ನಮ್ಮ ಕರವೇ ತಾಲೂಕು ಅಧ್ಯಕ್ಷ ಬಸವರಾಜ್ ರಾಂಪುರ.