ಕನಸಿನ ಮೆಟ್ರೋ ಮಾರ್ಗದ ಮೂಲಕ ಸಾಗಿದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಂತಿಮಯಾತ್ರೆ

KannadaprabhaNewsNetwork | Updated : Dec 12 2024, 11:02 AM IST

ಸಾರಾಂಶ

ಬೆಂಗಳೂರನ್ನು ಸಿಲಿಕಾನ್‌ ಸಿಟಿಯಾಗಿಸಿದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪಾರ್ಥಿವ ಶರೀರದ ಅಂತಿಮ ಯಾತ್ರೆ ಅವರದೇ ಕನಸಿನ ಮೆಟ್ರೋ ಮಾರ್ಗದ ಪಕ್ಕದ ರಸ್ತೆಗುಂಟ ಸಾಗಿ ರಾಜಧಾನಿಯಿಂದ ನಿರ್ಗಮಿಸಿತು.

  ಬೆಂಗಳೂರು : ಬೆಂಗಳೂರನ್ನು ಸಿಲಿಕಾನ್‌ ಸಿಟಿಯಾಗಿಸಿದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪಾರ್ಥಿವ ಶರೀರದ ಅಂತಿಮ ಯಾತ್ರೆ ಅವರದೇ ಕನಸಿನ ಮೆಟ್ರೋ ಮಾರ್ಗದ ಪಕ್ಕದ ರಸ್ತೆಗುಂಟ ಸಾಗಿ ರಾಜಧಾನಿಯಿಂದ ನಿರ್ಗಮಿಸಿತು.

ಫ್ಲೈಓವರ್‌, ಸ್ಕೈವಾಕ್‌, ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನ ಪಾರದರ್ಶಕವಾಗಿದ್ದ ‘ಚಿರಶಾಂತಿ’ ವಾಹನದಿಂದ ಗೋಚರಿಸುತ್ತಿದ್ದ ಕೃಷ್ಣರ ಅಂತಿಮ ದರ್ಶನ ಪಡೆದರು. ಮಾರ್ಗದುದ್ದಕ್ಕೂ ಫ್ಲೈಓವರ್‌ ಪಿಲ್ಲರ್‌ಗಳಿಗೆ ಶ್ರದ್ಧಾಂಜಲಿ ಅಶ್ರುತರ್ಪಣದ ಫ್ಲೆಕ್ಸ್‌ಗಳು ಅಳವಡಿಕೆಯಾಗಿದ್ದವು. ಕೃಷ್ಣ ಪರ ಘೋಷಣೆ ಮೊಳಗಿಸಿದ ಅಭಿಮಾನಿಗಳು, ಕಾರ್ಯಕರ್ತರು ಪುಷ್ಪ ಎರಚಿ ನಮನ ಸಲ್ಲಿಸಿ ನೆಚ್ಚಿನ ನಾಯಕನನ್ನು ಕಳಿಸಿಕೊಟ್ಟರು.

ಮನೆಯಲ್ಲಿ ಪೂಜೆ: ಬೆಳಗ್ಗೆ 7.30ಕ್ಕೆ ಸದಾಶಿವನಗರದ ಆರ್‌ಎಂವಿ ಎಕ್ಸ್‌ಟೆನ್ಷನ್‌ 5ನೇ ಅಡ್ಡರಸ್ತೆಯ ‘ಶಾಂಭವಿ’ ನಿವಾಸದಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಲಾಯಿತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪ್ರೇಮಾ ಕೃಷ್ಣ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೃಷ್ಣ ಅವರ ಪುತ್ರಿಯರು, ಮೊಮ್ಮಕ್ಕಳು ಸಂಪ್ರದಾಯದಂತೆ ಪೂಜೆ ಮಾಡಿದರು. ಡಿ.ಕೆ.ಶಿವಕುಮಾರ್ ಅವರು ನಸುಕಿನಿಂದಲೇ ಕೃಷ್ಣ ನಿವಾಸದಲ್ಲಿದ್ದು ಅಂತಿಮ ಯಾತ್ರೆಯ ಸಕಲ ಸಿದ್ಧತಾ ವ್ಯವಸ್ಥೆ ನೋಡಿಕೊಂಡರು.

ಶಾಂತಿಯ ಸಂಕೇತ: ಕುಟುಂಬದ ಸದಸ್ಯರ ಕೋರಿಕೆ ಮೇರೆಗೆ 200ಕ್ಕೂ ಅಧಿಕ ಮಾರಿನ 150 ಹಾರಗಳಿಂದ ‘ಚಿರಶಾಂತಿ’ ವಾಹನವನ್ನು ಅಲಂಕರಿಸಲಾಗಿತ್ತು. ಶಾಂತಿಯ ಸಂಕೇತವಾಗಿ ಬಿಳಿ, ಹಸಿರು ಬಣ್ಣದ ಹೂವುಗಳನ್ನು ಮಾತ್ರ ಬಳಸಲಾಗಿತ್ತು. ವಾಹನದ ಮುಂಭಾಗದಲ್ಲಿ ಕೃಷ್ಣ ಭಾವಚಿತ್ರ ಅಳವಡಿಸಲಾಗಿತ್ತು. ಮನೆಯಲ್ಲಿದ್ದ ಪಾರ್ಥಿವ ಶರೀರವನ್ನು ಬೆಳಗ್ಗೆ 8.25ರ ಸುಮಾರಿಗೆ ವಾಹನದಲ್ಲಿ ಇರಿಸಲಾಯಿತು.

ಸಾಗಿದ ಚಿರಶಾಂತಿ ವಾಹನ: 8.30ಕ್ಕೆ ಅಂತಿಮ ಯಾತ್ರೆ ಆರಂಭವಾಯಿತು. ಯಾತ್ರೆಯುದ್ದಕ್ಕೂ ಪಾರದರ್ಶಕ ವಾಹನದಲ್ಲಿ ಡಿ.ಕೆ.ಶಿವಕುಮಾರ್ ಕುಳಿತಿದ್ದರು. ಸದಾಶಿವನಗರದಿಂದ ಅರಮನೆ ಮೈದಾನ ರಸ್ತೆ ಮೂಲಕ ಗುಟ್ಟಹಳ್ಳಿ, ಕಾವೇರಿ ಥಿಯೇಟರ್ ಜಂಕ್ಷನ್, ಚಾಲುಕ್ಯ ಸರ್ಕಲ್, ಟೌನ್ ಹಾಲ್, ಕೆ.ಆರ್. ಮಾರ್ಕೆಟ್ ಫ್ಲೈ ಓವರ್ ಮೂಲಕ 9 ಗಂಟೆ ವೇಳೆಗೆ ಮೈಸೂರು ರಸ್ತೆ ಮೂಲಕ ಕೆಂಗೇರಿ ಮಾರ್ಗವಾಗಿ ವಾಹನ ಸಾಗಿತು. ಮಾರ್ಗದಲ್ಲಿ ಎಲ್ಲೂ ಟ್ರಾಫಿಕ್‌ ಜಾಮ್‌ ಆಗದಂತೆ, ಜನ ಮುನ್ನುಗ್ಗಿ ಬರುವುದು ಸೇರಿ ಯಾವುದೇ ಸಮಸ್ಯೆ ಉಂಟಾಗದಂತೆ ಸಂಚಾರಿ ಪೊಲೀಸರು ವ್ಯವಸ್ಥೆ ಮಾಡಿದ್ದರು.

ಎಕ್ಸ್‌ಪ್ರೆಸ್‌ ವೇ ಕೆಳಭಾಗದಲ್ಲಿ ಫ್ಲೈಓವರ್ ಪಿಲ್ಲರ್‌ಗಳಿಗೆ ಕೃಷ್ಣ ಶ್ರದ್ಧಾಂಜಲಿಯ ಫ್ಲೆಕ್ಸ್ ಹಾಕಲಾಗಿತ್ತು. ಸಾರ್ವಜನಿಕರು ರಸ್ತೆ ಇಕ್ಕೆಲ ಹಾಗೂ ಸ್ಕೈವಾಕ್ ಮೇಲ್ಭಾಗದಲ್ಲಿ ನಿಂತು, ಕಟ್ಟಡ, ಮನೆಗಳ ಮೇಲೆ ನಿಂತು ಅಂತಿಮ ದರ್ಶನ ಪಡೆದರು.

ಎಸ್‌ಟಿಎಸ್‌ ನಮನ: ಕೆಂಗೇರಿ ವೃತ್ತದ ಬಳಿ 5 ನಿಮಿಷಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೃಷ್ಣಪುರ ಕನ್ವೆನ್ಷನ್ ಹಾಲ್ ಬಳಿ ಪೆಂಡಾಲ್ ಹಾಕಿ ಕೃಷ್ಣ ಭಾವಚಿತ್ರವಿಟ್ಟು ವೇದಿಕೆಯನ್ನು ಅಲಂಕಾರ ರೂಪಿಸಲಾಗಿತ್ತು. ಇಲ್ಲಿ ಸುಮಾರು ಅರವತ್ತು ಪೊಲೀಸರನ್ನು ಭದ್ರತಾ ವ್ಯವಸ್ಥೆಗೆ ನಿಯೋಜನೆ ಆಗಿದ್ದರು. ಇಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಅಂತಿಮ ದರ್ಶನ ಪಡೆದು ಪುಷ್ಪಹಾರ ಅರ್ಪಿಸಿ ನಮನ ಸಲ್ಲಿಸಿದರು. ಸೇರಿದ್ದ ನೂರಾರು ಜನ ಕೂಡ ಪುಷ್ಪಗಳನ್ನು ಅರ್ಪಿಸಿದರು. ಎಸ್.ಎಂ.ಕೃಷ್ಣ ಪರ ಘೋಷಣೆ ಕೂಗಿದರು.

Share this article