ಭೀಮಣ್ಣ ಗಜಾಪುರ
ಕೂಡ್ಲಿಗಿ: ಸಮೀಪದ ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯುಸಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ 2 ತಿಂಗಳಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳಿಗೆ ಖಾಯಂ ಉಪನ್ಯಾಸಕರೇ ಇಲ್ಲ. ಅತಿಥಿ ಶಿಕ್ಷಕರ ಮೇಲೆಯೇ ಪಾಠ ನಡೆದಿದ್ದು ಅದೂ ಸಮರ್ಪಕವಾಗಿಲ್ಲದ್ದರಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ.ಶಿಕ್ಷಕರಿಲ್ಲದೇ ಪಾಠ ಸರಿಯಾಗಿ ನಡೆಯದಿದ್ದರೂ ಈಗಾಗಲೇ ಒಂದು ಕಿರುಪರೀಕ್ಷೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ಏನು ಉತ್ತರ ಬರೆಯಬೇಕು ಎಂಬುದು ತೋಚದಂತಾಗಿದೆ.
ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರು ವಾರಕ್ಕೆ 3 ದಿನ ಬರುತ್ತಾರೆ. ಕೆಲವೊಮ್ಮೆ ಅದೂ ಬರುವುದಿಲ್ಲ. ಈ ಎರಡೂ ವಿಷಯಗಳ ಪಾಠ ಸರಿಯಾಗಿ ನಡೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ.ಇಲ್ಲಿಯ ವಸತಿ ಶಾಲೆಯಲ್ಲಿ ಈ ಹಿಂದೆ ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಂತಹ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಏನಾದರೂ ತಪ್ಪು ಹೊರಿಸಿ ಅವರನ್ನು ಶಾಲೆ, ಕಾಲೇಜಿನಿಂದ ಹೊರಗಿಡುವ, ಅವರ ಬಾಯಿ ಮುಚ್ಚಿಸುವಂತ ವ್ಯವಸ್ಥಿತ ಸಂಚು ನಡೆದುಕೊಂಡು ಬಂದಿದೆ ಎನ್ನುವ ಆರೋಪವೂ ಇದೆ. ಯಾವ ವಿದ್ಯಾರ್ಥಿಗಳೂ ಈ ಬಗ್ಗೆ ಹೊರಗೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ ಎನ್ನುತ್ತಾರೆ ಸ್ಥಳೀಯರು.
ಇಡೀ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ತಾಲೂಕಿನ ತಿಮ್ಮಲಾಪುರ, ಹರಪನಹಳ್ಳಿ ತಾಲೂಕಿನ ಹಲವಾಗಲು ಹಾಗೂ ಕೊಟ್ಟೂರು ತಾಲೂಕಿನ ಕಂದಗಲ್ಲು ವಸತಿ ಶಾಲೆಗಳಲ್ಲಿ ಮಾತ್ರ ಪಿಯುವರೆಗೂ ವಿದ್ಯಾಭ್ಯಾಸ ಮಾಡಲು ಅವಕಾಶವಿದೆ. ಉಳಿದ ವಸತಿ ಶಾಲೆಗಳಲ್ಲಿ 6ರಿಂದ 10ನೇ ತರಗತಿವರೆಗೆ ಮಾತ್ರ ಅವಕಾಶವಿದೆ. ವಸತಿಶಾಲೆಗಳು ಗ್ರಾಮೀಣ, ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಮಹದುದ್ದೇಶದಿಂದ ಪ್ರಾರಂಭವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಇಂತಹ ವಸತಿ ಶಾಲೆಗಳಲ್ಲಿ ಅವಕಾಶ ದೊರತರೆ ಪುಣ್ಯ ಎಂದುಕೊಂಡಿದ್ದಾರೆ. ಆದರೆ ಇಂತಹ ವಸತಿ ಶಾಲೆಗಳಲ್ಲಿ 2 ತಿಂಗಳಿಗೂ ಹೆಚ್ಚುಕಾಲ ಎರಡು ವಿಷಯಗಳಿಗೆ ಖಾಯಂ ಉಪನ್ಯಾಸಕರೇ ಇಲ್ಲ ಎಂದರೆ ಇಲ್ಲಿ ಯಾವ ರೀತಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ಪ್ರಶ್ನಿಸುತ್ತಾರೆ ಶಿಕ್ಷಣಪ್ರೇಮಿಗಳು.ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಪ್ರಾಂಶುಪಾಲರು ಮತ್ತು ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಮಕ್ಕಳು ಮತ್ತು ಪಾಲಕರಿಂದ ಕೇಳಿ ಬಂದಿದೆ.
ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳಿಗೆ ಈ ವರ್ಷದ ಆರಂಭದಿಂದಲೂ ಉಪನ್ಯಾಸಕರು ಇಲ್ಲ. ಇಬ್ಬರು ಅತಿಥಿ ಉಪನ್ಯಾಸಕರನ್ನು ಹೆಸರಿಗೆ ಮಾತ್ರ ಎನ್ನುವಂತೆ ನೇಮಿಸಿಕೊಂಡಿದ್ದಾರೆ. ಅವರು ಬರುವುದು ವಾರಕ್ಕೆ ಮೂರು ದಿನ ಮಾತ್ರ. ಕೆಲವೊಮ್ಮೆ ಅವರು ಬರುವುದೇ ಇಲ್ಲ. ಬಂದರೂ ಅವರಿಂದ ನಿರೀಕ್ಷಿತ ಪಾಠಗಳು ಆಗುತ್ತಿಲ್ಲ ಎನ್ನುತ್ತಾರೆ ಬಹಿರಂಗಪಡಿಸಲು ಇಚ್ಚಿಸದ ವಿದ್ಯಾರ್ಥಿಗಳು.ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರು ಎರಡು ತಿಂಗಳಿಗೂ ಹೆಚ್ಚು ಕಾಲ ಇಲ್ಲದಿರುವುದು ನಿಜ. ಆದರೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿದ್ದೇವೆ. ಅವರು ವಾರಕ್ಕೆ ಮೂರು ದಿನ ಬರುತ್ತಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಎಸ್.ಸಿ. ಶಿವಕುಮಾರ.