ಕನ್ನಡಪ್ರಭ ವಾರ್ತೆ ಇಂಡಿ
ಶಿಕ್ಷಣ ಇದ್ದಲ್ಲಿ ಸಂಸ್ಕಾರ, ಭವಿಷ್ಯವಿದೆ. ಶಿಕ್ಷಕ ಬಂಧುಗಳು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿ ಭವಿಷ್ಯದ ಪ್ರಜೆಗಳ ಉನ್ನತಿಗೆ ಶ್ರಮಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಇಂಡಿ ವತಿಯಿಂದ ಗೊರನಾಳ ಗ್ರಾಮದ ಪಿಎಂ ಶ್ರೀ ಮಾದರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ಮತ್ತು ಪೋಷಕರ ಮಹಾಸಭೆ 2025-26ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೆಳೆಯುವ ಹಂತದ ಮಕ್ಕಳಿಗೆ ಮಾನವೀಯತೆ, ಜೀವನ ಮೌಲ್ಯ, ಕಲೆ, ದೇಸಿ ಸಂಸ್ಕೃತಿ, ಸನ್ನಡತೆ, ಗುರುಭಕ್ತಿ, ದೇಶಾಭಿಮಾನ ಗುಣಗಳನ್ನು ಕಲಿಸಿ ಸಾಧನೆಯತ್ತ ಹೆಜ್ಜೆ ಹಾಕುವಂತೆ ಪ್ರೇರೇಪಿಸಬೇಕು. ಶಿಕ್ಷಕರು ಹೇಳಿದ್ದೆಲ್ಲವೂ ಸತ್ಯ ಎಂದು ನಂಬುವ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ತಾವು ಮೊದಲು ಶಿಕ್ಷಿತರಾಗಿ ಮಕ್ಕಳನ್ನು ಸರಿದಾರಿಗೆ ತರುವ ಜವಾಬ್ದಾರಿ ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.ಸುಭದ್ರ ಸಮಾಜ ಕಟ್ಟುವ ಕೆಲಸ ಶಿಕ್ಷಕರ ಮೇಲಿದೆ. ಮಕ್ಕಳನ್ನು ಹೊಸ ವಿಧದಲ್ಲಿ ಹೊಸ ಶೈಕ್ಷಣಿಕ ಪ್ರಗತಿಯತ್ತ ಕೊಂಡ್ಯೊಯಬೇಕು. ಮಕ್ಕಳಿಗೆ ಪ್ರಪಂಚದ ಜ್ಞಾನ ನೀಡುವ ಕೆಲಸ ಹಿಂಥ ಶೈಕ್ಷಣಿಕ ಸಂಸ್ಥೆಗಳಿಂದ ನಡೆಯಲಿ ಎಂದ ಅವರು, ಬಂಥನಾಳದ ಶ್ರೀ ಸಂಗನಬಸವ ಶಿವಯೋಗಿಗಳು ಜೋಳಿಗೆ ಹಿಡಿದು ಶಿಕ್ಷಣ ಸಂಸ್ಥೆಗಳು ಕಟ್ಟಿದ್ದಾರೆ. ಶಾಲೆಯೇ ದೇವಾಲಯ, ಮಕ್ಕಳೇ ದೇವರು ಎಂದು ತಿಳಿದು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಶಿಕ್ಷಣ ಇಲಾಖೆ ಪಾಲಕರು, ಶಿಕ್ಷಕರ ಮಹಾಸಭಾ ನಡೆಸಿರುವುದು ಅಭಿನಂದನಾರ್ಹವಾಗಿದೆ. ಶಿಕ್ಷಕರು, ಪಾಲಕರ ನಡುವಿನ ಬಾಂಧವ್ಯ ಹೆಚ್ಚಿಸುವ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಕುರಿತು ಚರ್ಚಿಸುವ ವೇದಿಕೆಯಾಗಿದೆ. ಮಕ್ಕಳಿಗೆ ಸರಿಯಾದ ಗುಣಮಟ್ಟದ ಶಿಕ್ಷಣ ಸಿಗುತ್ತಿದೆಯೋ ಇಲ್ಲವೊ, ಶಿಕ್ಷಕರು ಮಕ್ಕಳಿಗೆ ವಿದ್ಯೆ ಕಲಿಸುತ್ತಾರೆಯೋ ಇಲ್ಲೊ ಎಂಬುದನ್ನು ಗಮನ ಹರಿಸಬೇಕಾಗಿರುವುದು ಪಾಲಕರ ಜವಾಬ್ದಾರಿ ಆಗಿದೆ ಎಂದರು.
ದೇಶ, ನಾಡು ಹೊಸ ಯುಗದಲ್ಲಿ ಸಾಗಲು ಶಿಕ್ಷಣ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಕಾಲದಲ್ಲಿ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ ಇಂದು ಹಾಗಿಲ್ಲ ಕಾಲ ಬದಲಾಗಿದೆ. ಎಲ್ಲರಿಗೂ ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ. ತುಮಕೂರ ಸಿದ್ದಗಂಗಾ ಮಠ ಸೇರಿದಂತೆ ಅನೇಕ ಮಠ ಮಾನ್ಯಗಳು ಸರ್ಕಾರ ಮಾಡದ ಸಮಾಜಮುಖಿ ಕೆಲಸಗಳು ಮಾಡುತ್ತಿವೆ. ಇಂದು ದೇಶ ತಂತ್ರಜ್ಞಾನದಲ್ಲಿ ಮುಂದುವರಿದಿದೆ ಎಂದರೆ ಅದಕ್ಕೆ ಮಾಜಿ ಪ್ರಧಾನಿ ರಾಜೀವಗಾಂಧಿ ಕೊಡುಗೆ ಇದೆ. ರಾಷ್ಟ್ರ ಕಟ್ಟುವಲ್ಲಿ ಸಮರ್ಪಣಾಭಾವದಿಂದ ಕೆಲಸ ಮಾಡಿದಕ್ಕಾಗಿ ಇಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಸ್ಮರಿಸಿಕೊಳ್ಳುತ್ತೇವೆ. ನೆಹರು ಅವರ ಸ್ವರೂಪದಲ್ಲಿ ಮಕ್ಕಳನ್ನು ಕಾಣುತ್ತೇವೆ. ಮಕ್ಕಳ ಮನಸ್ಸು ಸುಭ್ರವಾದ ಬಟ್ಟಯಂತೆ ಹೀಗಾಗಿ ಶಿಕ್ಷಕರು ಆತ್ಮ ಸಂತೃಪ್ತಿಗಾಗಿ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಪ್ರಯತ್ನಿಸಬೇಕು. ಶಾಲೆ ದೇವ ಮಂದರಿದಂತೆ ಭಕ್ತಿಭಾದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.ಎಸ್ಡಿಎಂಸಿ ಅಧ್ಯಕ್ಷ ರಾಜಶೇಖರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ಬಿಇಒ ಎಸ್.ಎ.ಮುಜಾವರ, ಬಿ.ಆರ್.ಸಿ ಎಸ್.ಆರ್.ನಡಗಡ್ಡಿ, ಸುಜಾತಾ ಪೂಜಾರಿ, ಎಚ್.ಕೆ.ಮಾಳಗೊಂಡ, ಸಿ.ಬಿ.ಬಿರಾದಾರ, ಎ.ಓ.ಹೂಗಾರ, ಪ್ರಕಾಶ ನಾಯಕ, ಎ.ಜಿ.ರಾಠೋಡ, ಶರಣು ಗಂಗನಳ್ಳಿ, ಚಿದಾನಂದ ಗಂಗನಳ್ಳಿ, ಚಂದಪ್ಪ ನಾಗನೂರ, ಶರಣಗೌಡ ಹಟ್ಟಿ, ಅಶೋಕ ಜಿಡ್ಡಿಮನಿ, ಬಸವರಾಜ ಹಟ್ಟಿ, ಕಲ್ಯಾಣಗೌಡ ಪಾಟೀಲ, ಭೀಮಣ್ಣ ತಳವಾರ, ಕೆಂಚಪ್ಪ ಹಿರೆಕುರಬರ, ರವಿ ಪೂಜಾರಿ, ಮಲ್ಲು ಸಾಗನೂರ, ಭಾಗಣ್ಣ ಮಾಶ್ಯಾಳ, ಎಸ್.ಎಸ್.ಕ್ಯಾತ್, ಮುಖ್ಯ ಶಿಕ್ಷಕ ಶ್ರೀನಿವಾಸ ಜಮಾದಾರ, ಮುಖ್ಯ ಶಿಕ್ಷಕ ಎಂ.ಸಿ.ಚಿಮ್ಮಾಗೋಳ ಮೋದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ವಿಜ್ಞಾನದ ಪ್ರಯೋಗಾಲಯವನ್ನು ಶಾಸಕರಾದ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು.