ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಚಾಲುಕ್ಯ ಉತ್ಸವದ ಎರಡನೇ ದಿನವಾದ ಮಂಗಳವಾರ ಬಾದಾಮಿ ತಾಲೂಕಿನ ಪಟ್ಟದಕಲ್ಲಿನ ವಿಕ್ರಮಾದಿತ್ಯ ವೇದಿಕೆಯಲ್ಲಿ ಜರುಗಿದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಚಾಲುಕ್ಯ ಇತಿಹಾಸ ತಿಳಿಸಲು ವಿಶೇಷ ಗ್ರಂಥಾಲಯ ಸ್ಥಾಪನೆಯಾಗಬೇಕು. ಪ್ರತಿಷ್ಠಾನವೊಂದನ್ನು ಸ್ಥಾಪಿಸಿ ಇತಿಹಾಸ ತಿಳಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂದು ಪಕ್ಷವನ್ನು ನೋಡದೆ ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ವೇದಿಕೆಯಲ್ಲಿದ್ದ ಪಿ.ಸಿ.ಗದ್ದಿಗೌಡರ ಅವರನ್ನು ಉದ್ದೇಶಿಸಿ ಹೇಳಿದರು.
ಚಾಲುಕ್ಯರ ಪ್ರವಾಸೋದ್ಯಮ ಅಭಿವೃದ್ಧಿಗೆ ₹೨೦೦ ಕೋಟಿಯನ್ನು ಕೇಂದ್ರ ಸರ್ಕಾರದಿಂದ ಕೊಡಿಸುವುದಾಗಿ ಸಂಸದ ಗದ್ದಿಗೌಡರ ಹೇಳಿದ್ದಾರೆ. ಅವರು ತರುವ ವಿಶ್ವಾಸವೂ ಇದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದರು.ಚಾಲುಕ್ಯರ ಇತಿಹಾಸ ಹೇಳಲು ಗೋವಾದ ಗೈಡ್‌ಗಳು ಬರುವಂತ್ತಾಗಬಾರದು. ಪ್ರವಾಸೋದ್ಯಮ ಅಭಿವೃದ್ಧಿಗೊಂಡರೆ ಇಲ್ಲಿನ ಯುವಕರಿಗೆ ಕೆಲಸ ಸಿಗುತ್ತದೆ. ಅವರ ಭವಿಷ್ಯವೂ ಭದ್ರಗೊಳ್ಳಲಿದೆ ಎಂದರು. ಚಾಲುಕ್ಯ ಉತ್ಸವಕ್ಕೆ ಸಿಎಂ ₹೪ ಕೋಟಿ ಅನುದಾನ ಒದಗಿಸಿದ್ದಾರೆ. ಜಿಲ್ಲಾಡಳಿತದ ಸಿಬ್ಬಂದಿಯೂ ತಮ್ಮ ಸಂಬಳದ ಪಾಲನ್ನು ಉತ್ಸವದ ಯಶಸ್ಸಿಗೆ ನೀಡಿದ್ದಾರೆ. ಎಲ್ಲರನ್ನೂ ತಾವು ಅಭಿನಂದಿಸುವುದಾಗಿ ತಿಳಿಸಿದರು.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಭಾರತದ ನೌಕಾಪಡೆಯ ನಿರ್ಮಾತೃ ಇಮ್ಮಡಿ ಪುಲಕೇಶಿ ಎಂಬುದು ಹೆಮ್ಮೆಯ ವಿಷಯ. ಹರ್ಷವರ್ಧನನ್ನು ಸೋಲಿಸುವುದು ಸುಲಭವಾಗಿರಲಿಲ್ಲ. ಅಂಥ ಚಕ್ರವರ್ತಿಯನ್ನು ಇಮ್ಮಡಿ ಪುಲಕೇಶಿ ಸೋಲಿಸಿ ತೋರಿಸಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯ. ಬೇರೆ ರಾಜ್ಯರನ್ನು ಹೊಗಳುವ ನಾವು ನಮ್ಮದೇ ಮಣ್ಣಿನ ರಾಜನ ಬಗ್ಗೆ ಅಭಿಮಾನ ಬೆಳಿಸಿಕೊಳ್ಳಬೇಕೆಂದು ಕರೆ ನೀಡಿದರು.ಅಭಿವೃದ್ಧಿಗೆ ಕೇಂದ್ರ ಬದ್ಧ:
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಪಟ್ಟದಕಲ್ಲು ವಾಸ್ತುಶಿಲ್ಪದ ಪ್ರಯೋಗಾಲಯವಾಗಿದೆ. ಬಾದಾಮಿ, ಪಟ್ಟದಕಲ್ಲಿ, ಐಹೊಳೆ ಸರ್ಕ್ಯೂಟ್ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ ತರುವ ಸಂಬಂಧ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಮ್ಮುಖದಲ್ಲಿ ಹೇಳಿದ್ದೆ. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರೊಂದಿಗೂ ಈ ಸಂಬಂಧ ಚರ್ಚೆ ನಡೆಸಿದ್ದೇನೆ. ಪ್ರಸ್ತಾವನೆ ಸಲ್ಲಿಕೆಯಾದರೆ ಅನುದಾನ ತರುವುದಾಗಿ ಹೇಳಿದರು.ಪಟ್ಟದಕಲ್ಲು ದೇವಸ್ಥಾನ ಸಮುಚ್ಛಯಕ್ಕೆ ₹೧.೭೦ ಕೋಟಿ ಕೇಂದ್ರ ಸರ್ಕಾರದ ಅನುದಾನದಲ್ಲಿ ದೀಪಾಲಂಕಾರ ಮಾಡಿಸಲಾಗಿದೆ. ಇಲ್ಲಿನ ಸ್ಮಾರಕಗಳ ರಕ್ಷಣೆಗೆ ಕಾಲ, ಕಾಲಕ್ಕೆ ಕೇಂದ್ರದಿಂದ ಅನುದಾನ ತಂದಿದ್ದೇನೆ, ಮುಂದೆಯೂ ತರುವುದಾಗಿ ಹೇಳಿದರು.
ಪ್ರವಾಸೋದ್ಯಮ ಗಮನದಲ್ಲಿರಿಸಿಕೊಂಡು ಬಾಣಾಪುರ-ಗದ್ದನಕೇರಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲಾಗುತ್ತಿದೆ. ಬಾಗಲಕೋಟೆ-ಕುಡಚಿ ರೈಲು ಮಾರ್ಗ ಪೂರ್ಣಗೊಂಡಲ್ಲಿ ಈ ಭಾಗದ ಪ್ರವಾಸೋದ್ಯಮಕ್ಕೂ ಅನುಕೂಲ ಸಿಗಲಿದೆ ಎಂದರು.ಮೂರು ದಿನದ ಹಬ್ಬವಲ್ಲ ಇತಿಹಾಸ ತಿಳಿಯಿರಿ:
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು, ಅದ್ಧೂರಿ ಚಾಲುಕ್ಯ ಉತ್ಸವ ಆಯೋಜನೆಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರೋತ್ಸಾಹ ಅಪಾರವಾಗಿದೆ. ಉತ್ಸವಕ್ಕಾಗಿ ಹೆಚ್ಚುವರಿ ೧ ಕೋಟಿ ರೂ.ಗಳನ್ನು ಸಿಎಂ ಘೋಷಿಸಿದ್ದು, ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.ಚಾಲುಕ್ಯ ಉತ್ಸವದ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದರು. ಆದರೆ ಸಚಿವರಾದ ಎಚ್.ಕೆ.ಪಾಟೀಲ, ಆರ್.ಬಿ.ತಿಮ್ಮಾಪೂರ, ಶಿವರಾಜ ತಂಗಡಗಿ ಅವರ ಪ್ರಯತ್ನ ಸಾಥ್ ನೀಡಿದ್ದರಿಂದ ಉತ್ಸವ ಸಾಕಾರಗೊಂಡಿದೆ ಎಂದು ಹೇಳಿದರು.
ಪಟ್ಟದಕಲ್ಲಿನಲ್ಲಿ ೯೮ ರಾಜರ ಪಟ್ಟಾಭಿಷೇಕ ಮಾಡಲಾಗಿತ್ತು ಎಂಬ ಇತಿಹಾಸವಿದೆ. ಇಲ್ಲಿ ಹರಿಯುವ ಮಲಪ್ರಭೆ ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತದೆ. ಇದು ಅಪರೂಪದ ಸಂಗತಿ. ಪಟ್ಟದಕಲ್ಲು ಅತ್ಯಂತ ಪವಿತ್ರ ಸ್ಥಳವಾಗಿದೆ ಎಂದು ಹೇಳಿದರು. ಬಾದಾಮಿಯಲ್ಲಿ ಇಮ್ಮಡಿ ಪುಲಕೇಶಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಇಮ್ಮಡಿ ಪುಲಕೇಶಿ ೯೮ ಸಾವಿರ ಹಳ್ಳಿಗಳನ್ನು ಹೊಂದಿದ ಕ್ಷೇತ್ರವನ್ನು ಆಳಿದ್ದ, ಜಾತಿ,ಪಂಥಗಳಿಗೆ ಸೀಮಿತಗೊಳ್ಳಲಿಲ್ಲ. ಮೂರು ರಾಷ್ಟçಗಳನ್ನು ಇಮ್ಮಡಿ ಪುಲಕೇಶಿ ಆಳಿದ್ದ. ಆದರೆ ಈ ಇತಿಹಾಸವನ್ನು ನಮ್ಮ ಮಕ್ಕಳಿಗೆ ಹೇಳುತ್ತಿಲ್ಲ ನಾವು. ಅದನ್ನು ಬಿಟ್ಟು ಕೇವಲ ದೊಡ್ಡ, ದೊಡ್ಡ ಕಲಾವಿದರನ್ನು ವೇದಿಕೆಗೆ ಕರೆಯಿಸಿ ಉತ್ಸವ ಜರುಗಬೇಕೆಂಬುದು ಸರಿಯಲ್ಲ ಎಂದರು. ಪ್ರತಿ ಶಾಲೆ, ಮನೆಯಲ್ಲಿ ಇಮ್ಮಡಿ ಪುಲಕೇಶಿಯ ಇತಿಹಾಸ ತಿಳಿಸುವ ಕಾರ್ಯವಾಗಬೇಕೆಂದರು.ಹರ್ಷವರ್ಧನನ್ನು ಇಮ್ಮಡಿ ಪುಲಕೇಶಿ ಸೋಲಿಸುವುದು ಸುಲಭವಾಗಿರಲಿಲ್ಲ. ಇಮ್ಮಡಿ ಪುಲಕೇಶಿಗಿರುವ ದಕ್ಷಿಣಪಥೇಶ್ವರ ಬಿರುದು ಚಿಕ್ಕದಲ್ಲ. ಇಂಥ ಮಹಾನ್ ರಾಜರನ್ನು ಕೇವಲ ಬಾದಾಮಿ ಸೀಮಿತಗೊಳಿಸಿರುವುದು ಬೇಸರದ ಸಂಗತಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಸಿಇಒ ಶಶಿಧರ ಕುರೇರ ಅವರು, ಚಾಲುಕ್ಯ ಇತಿಹಾಸ ಶ್ರೀಮಂತವಾಗಿದೆ. ಅತ್ಯಂತ ಅಪರೂಪದ ಶಿಲ್ಪಕಲೆಗಳನ್ನು ಅವರು ನಮಗಾಗಿ ನೀಡಿದ್ದಾರೆ. ಪಟ್ಟದಕಲ್ಲಿನ ಕಥೆ, ಇತಿಹಾಸವನ್ನು ಜನ, ಮಕ್ಕಳು ಮನೆಗೆ ತೆಗೆದುಕೊಂಡು ಹೋಗಬೇಕು. ಚಾಲುಕ್ಯ ಇತಿಹಾಸವನ್ನು ಪರಿಚಯಿಸುವ ನಿಟ್ಟಿನಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಕೆಎಂಎಫ್ ಅಧ್ಯಕ್ಷ ಐ.ಎಸ್.ಕರಿಗೌಡರ, ಪಟ್ಟದಕಲ್ಲು ಗ್ರಾಪಂ ಅಧ್ಯಕ್ಷೆ ನೀಲವ್ವ ಕಾಲಗಗ್ಗರಿ, ವೇದಿಕೆಯಲ್ಲಿ ಜಿಲ್ಲಾಧಿಕಾರಿ ಎಂ.ಸಂಗಪ್ಪ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ್, ಜಿಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಮತ್ತಿತರರು ವೇದಿಕೆಯಲ್ಲಿದ್ದರು.
ಮೆಕಾಲೆ ಶಿಕ್ಷಣದಿಂದ ನೈಜ ಇತಿಹಾಸ ಕಣ್ಮರೆ:ಶಾಲೆಯಲ್ಲಿ ನಮಗೆ ಕೇವಲ ಮೊಘಲರು, ಬ್ರಿಟೀಷರ ಇತಿಹಾಸ ತಿಳಿಸಿದ್ದಾರೆ. ರಾಯಣ್ಣ, ಒನಕೆ ಓಬ್ಬವ್ವ, ರಾಣಿ ಚೆನ್ನಮ್ಮ, ಪುಲಕೇಶಿ ಬಗ್ಗೆ ಸರಿಯಾಗಿ ಕಲಿಸಲಿಲ್ಲ. ಮೆಕಾಲೆ ಶಿಕ್ಷಣದಿಂದಾಗಿ ಭಾರತೀಯ ನೈಜ ಇತಿಹಾಸ ತಿಳಿಸಿಲಿಲ್ಲ. ವಿಷ ಕುಡಿಸುವ ಹಾವಿಗೂ ಹಾಲು ನೀಡುವ, ಶರಣಾದವರಿಗೆ ಆಶ್ರಯ ನೀಡಿದ ಪರಂಪರೆ ನಮ್ಮದು. ಇಂಥ ಇತಿಹಾಸವನ್ನು ತಿಳಿಸುವ ಕೆಲಸವಾಗಬೇಕೆಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.