ದೊಡ್ಡಬಳ್ಳಾಪುರ: ದೇಶದ ಪ್ರಗತಿಗೆ ಅಡ್ಡಿಯಾಗುತ್ತಿರುವ ಮಾದಕ ವ್ಯಸನದಿಂದ ಯುವಜನತೆ ದೂರವಿರಬೇಕು. ವ್ಯಸನಗಳಿಂದ ಯುವಜನರ ಬದುಕು ಕರಾಳವಾಗುತ್ತದೆ ಎಂದು ದೊಡ್ಡಬಳ್ಳಾಪುರ ಮಹಿಳಾ ಪೋಲಿಸ್ ಠಾಣೆಯ ಆರಕ್ಷಕ ನಿರೀಕ್ಷಕ ಡಾ.ನವೀನ್ ಕುಮಾರ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏರ್ಪಡಿಸಿದ್ದ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.ಯುವಜನರು ಸಿಗರೇಟ್, ಮದ್ಯಪಾನ, ಜೂಜಾಟದಂತಹ ದುಶ್ಚಟಗಳಿಂದ ದೂರವಿರಬೇಕು. ಆರೋಗ್ಯಯುತ ಬದುಕು, ಸಶಕ್ತ ಆಲೋಚನೆಗೆಗಳಿಗೆ ಒತ್ತು ನೀಡಬೇಕು. ಓದಿನತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಗ್ರಾಮಾಂತರ ಪೋಲಿಸ್ ಠಾಣೆಯ ಆರಕ್ಷಕ ನಿರೀಕ್ಷಕ ಸಾದಿಕ್ ಪಾಷಾ ಮಾತನಾಡಿ, ಸಾಮಾಜಿಕ ಮಾಧ್ಯಮಗಳಿಂದ ಆಗುವ ಸೈಬರ್ ವಂಚನೆ, ಆನ್‌ಲೈನ್ ಗೇಮಿಂಗ್, ರಮ್ಮಿ ಆಪ್ ಸೇರಿದಂತೆ ಹಣ ಸುಲಿಗೆ ಮತ್ತು ವಂಚನೆಗಳ ಬಗ್ಗೆ ಎಚ್ಚರದಿಂದಿರುವುದು ಅಗತ್ಯ. ಸೈಬರ್ ವಂಚಕರು ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಎಂಬ ಪರಿಕಲ್ಪನೆ ಬಳಸಿ ಹಣ ಲೂಟಿ ಮಾಡುವ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ ಎಂದು ವಿವರಿಸಿದರು.ನಗರ ಠಾಣೆಯ ಆರಕ್ಷಕ ನಿರೀಕ್ಷಕ ಅಮರೇಶ್ ಗೌಡ ಮಾತನಾಡಿ, ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧ. ಅಲ್ಲದೆ ವಿದ್ಯಾರ್ಥಿಗಳು ಪ್ರಾಪ್ತ ವಯಸ್ಕರಾಗುವವರೆಗೆ ವಾಹನ ಚಾಲನೆ ಮಾಡಬಾರದು. ಅಂತಹ ಪ್ರಕರಣಗಳು ಕಂಡು ಬಂದರೆ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದು, ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಪೋಷಕರೂ ಶಿಕ್ಷ ಅನುಭವಿಸಬೇಕಾಗುತ್ತದೆ ಎಂದರು.
ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕಾನೂನು ಸಲಹೆಗಾರ ವಿಜಯಕುಮಾರ್, ಯುವ ಘಟಕದ ಅಧ್ಯಕ್ಷ ಸತೀಶ್ ಎಂ, ದೊಡ್ಡಬಳ್ಳಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಡಿ.ಉಪ್ಪಾರ್, ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ರಾಜ್ಯ ಸಂಚಾಲಕ ಕೆ.ಹೆಚ್ ವೆಂಕಟೇಶ್, ಉಪಾಧ್ಯಕ್ಷ ಸುಮೇಶ್, ವಿನಯಗೌಡ, ಸಂಘಟನಾ ಕಾರ್ಯದರ್ಶಿ ಶಂಕರನಾಗ್ ಮತ್ತಿತರರು ಭಾಗವಹಿಸಿದ್ದರು.13ಕೆಡಿಬಿಪಿ8-ದೊಡ್ಡಬಳ್ಳಾಪುರದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಯುವ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.