ಶಿವಕುಮಾರ ಕುಷ್ಟಗಿ
ಗದಗ: ಗದಗ-ಬೆಟಗೇರಿ ನಗರಸಭೆಯ ರಾಜಕೀಯದಲ್ಲಿ ಕಾನೂನು ಸಮರ ತೀವ್ರಗೊಂಡಿದ್ದು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಒಂದು ವರ್ಷ ಕಳೆದರೂ ಮುಗಿಯುತ್ತಿಲ್ಲ.ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಪೂರ್ಣಗೊಂಡಿದ್ದರೂ, ಕಾನೂನು ತೊಡಕುಗಳಿಂದಾಗಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ. ಇದರ ಪರಿಣಾಮವಾಗಿ, ನಗರಸಭೆಯ ಆಡಳಿತವು ಅಧಿಕಾರಿಗಳ ಕೈಯಲ್ಲಿದ್ದು, ಅಭಿವೃದ್ಧಿ ಕಾರ್ಯಗಳು ಮತ್ತು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಹಿನ್ನಡೆಯಾಗಿದೆ.
35 ಜನ ಸದಸ್ಯ ಬಲದ ಈ ನಗರಸಭೆಯಲ್ಲಿ 18 ಸ್ಥಾನಗಳ ಬಲದ ಬಿಜೆಪಿ ಅಧಿಕಾರ ಗದ್ದುಗೆ ಏರಿತ್ತು. 17 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿತ್ತು. ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯ ಮೊದಲ ದಿನವೇ ಮತದಾನದ ವೇಳೆಯಲ್ಲಿ ಗೊಂದಲವಾಗಿ ಅದು ಕೂಡಾ ನ್ಯಾಯಾಲಯದ ಮೆಟ್ಟಿಲೇರಿ ಪ್ರಾರಂಭದಲ್ಲಿಯೂ ವಿಳಂಬವಾಗಿತ್ತು. 2024ರ ಜುಲೈ 24ರಂದು ನಗರಸಭೆಯ ಮೊದಲ ಎರಡೂವರೆ ವರ್ಷಗಳ ಅವಧಿಯು ಪೂರ್ಣಗೊಂಡಿತು. ಆದರೆ, 2ನೇ ಅವಧಿಗೆ ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ನಾಟಕೀಯ ತಿರುವು ಪಡೆಯಿತು. ಆರಂಭದಲ್ಲಿ ಕಾಂಗ್ರೆಸ್ ಸದಸ್ಯರು ಮೀಸಲಾತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದರು. ಇದರಿಂದ ಅಧ್ಯಕ್ಷರ ಆಯ್ಕೆ ಆರು ತಿಂಗಳು ವಿಳಂಬವಾಯಿತು.ನಕಲಿ ಠರಾವಿನಿಂದ ಗೊಂದಲ: ಮೀಸಲಾತಿ ಗೊಂದಲ ನಿವಾರಣೆಯಾಗಿ ಚುನಾವಣೆ ದಿನಾಂಕ ನಿಗದಿಯಾದಾಗ, ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂತು. ನಗರಸಭೆಯ ವಾಣಿಜ್ಯ ಮಳಿಗೆಗಳ ಗುತ್ತಿಗೆ ಅವಧಿ ವಿಸ್ತರಣೆಗೆ ಸಂಬಂಧಿಸಿದ ನಕಲಿ ಠರಾವು ಆರೋಪ ಕೇಳಿ ಬಂದು, ಅಂದು ಕಮಿಷನರ್ ಆಗಿದ್ದ ಪ್ರಶಾಂತ ವರಗಪ್ಪನವರ ಮೂವರು ಬಿಜೆಪಿ ಸದಸ್ಯರಾದ ಉಷಾ ದಾಸರ, ಅನಿಲ ಅಬ್ಬಿಗೇರಿ ಮತ್ತು ಮುತ್ತು ಮುಷಿಗೇರಿ ಅವರ ಮೇಲೆ ಪ್ರಕರಣ ದಾಖಲಿಸಿದರು. ಈ ಪ್ರಕರಣವು ಕೂಡಾ ಸುದೀರ್ಘ ವಿಚಾರಣೆ ನಡೆದು ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂರು ಜನ ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಅಮಾನತುಗೊಳಿಸಿದರು. ಈ ಅಮಾನತು ಆದೇಶದಿಂದ ಬಿಜೆಪಿಯ ಬಹುಮತ ಕಳೆದುಕೊಂಡಿತು.
ಅಧಿಕಾರ ಕಳೆದುಕೊಂಡ ಬಿಜೆಪಿ: ಅಮಾನತು ಆದೇಶದ ಬೆನ್ನಲ್ಲೇ ಹೊಸ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಅಧಿಸೂಚನೆಯೂ ಪ್ರಕಟವಾಯಿತು. ಈ ಅಧಿಸೂಚನೆಯನ್ನು ಪ್ರಶ್ನಿಸಿ ಅಮಾನತುಗೊಂಡ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದರು. ಆದರೆ, ನ್ಯಾಯಾಲಯದ ಆದೇಶ ಬರುವ ಮುನ್ನವೇ ಚುನಾವಣಾ ಪ್ರಕ್ರಿಯೆ ಮುಗಿದು, ಕಾಂಗ್ರೆಸ್ ಪಕ್ಷದ ಕೃಷ್ಣಾ ಪರಾಪುರ ಅಧ್ಯಕ್ಷರಾಗಿ ಆಯ್ಕೆಯಾದರು.ಬಹುಮತವಿದ್ದರೂ ಅಧಿಕಾರ ಕೈತಪ್ಪಿದ ಬಿಜೆಪಿ, ಕೂಡಲೇ ಈ ಆಯ್ಕೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆಯಿತು. ಸದ್ಯ, ನಕಲಿ ಠರಾವು ಪ್ರಕರಣ, ಸದಸ್ಯರ ಅಮಾನತು ಮತ್ತು ಹೊಸ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಈ ಪ್ರಕರಣಗಳ ಇತ್ಯರ್ಥವಾಗುವವರೆಗೂ ನಗರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಾಧ್ಯವಿಲ್ಲದಂತಾಗಿದೆ.
ಜನರ ಮೇಲೆ ಪರಿಣಾಮ: ನಗರಸಭೆಯ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ, ನೀರು ಸರಬರಾಜು, ರಸ್ತೆ ದುರಸ್ತಿ, ಕಸ ವಿಲೇವಾರಿ ಸೇರಿದಂತೆ ಅನೇಕ ಮೂಲಸೌಕರ್ಯ ಮತ್ತು ನಾಗರಿಕ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಇದರೊಟ್ಟಿಗೆ ನಗರಸಭೆಗೆ ಸದಸ್ಯರಾಗಿ ಆಯ್ಕೆಯಾದವರು ಕಳೆದೊಂದು ವರ್ಷದಿಂದ ಸದಸ್ಯರಿದ್ದರೂ ಇಲ್ಲದಂತೆ, ನಗರಸಭೆಗೆ ಹೊರಗಿನವರಂತೆ ಬಂದು ಹೋಗುವಂತಾಗಿದೆ.ಗದಗ-ಬೆಟಗೇರಿ ನಗರಸಭೆಯಲ್ಲಿನ ಕಾನೂನು ತೊಡಕುಗಳನ್ನು ಸರ್ಕಾರ ಮಧ್ಯ ಪ್ರವೇಶಿಸಿ ಕೂಡಲೇ ಬಗೆ ಹರಿಸಬೇಕು. ಇಲ್ಲವಾದಲ್ಲಿ, ಉಳಿದ ಒಂದೂವರೆ ವರ್ಷದ ಅವಧಿಯೂ ಸಹ ಅಧಿಕಾರವಿಲ್ಲದೆ ಕಳೆದುಹೋಗುವ ಸಾಧ್ಯತೆ ಇದೆ. ಎಲ್ಲಾ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಬಿಜೆಪಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು.