ನರಗುಂದ: ಕರ್ನಾಟಕ ಏಕೀಕರಣಗೊಳ್ಳಲು ಗದಗ ಜಿಲ್ಲೆಯ ಕೊಡುಗೆ ಅಪಾರ. ಇದರ ಹಿಂದೆ ಹಲವಾರು ಹೋರಾಟಗಾರರ ತ್ಯಾಗ ಬಲಿದಾನವಿದೆ. ಪ್ರಸ್ತುತ ಕನ್ನಡದ ಸ್ಥಿತಿ, ಗತಿ ಅರಿತು ನಾಡು ನುಡಿ ಉಳಿಸಿ, ಬೆಳೆಸಲು ಸಂಕಲ್ಪ ತೊಡುವ ಅಗತ್ಯವಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಆಡಳಿತ, ಪುರಸಭೆ ಆಶ್ರಯದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕರ್ನಾಟಕ ತನ್ನದೇ ಆದ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಹೊಂದಿದೆ. ಅದನ್ನು ಉಳಿಸಿ, ಬೆಳೆಸುವಲ್ಲಿ ಪ್ರತಿಯೊಬ್ಬನ ಕನ್ನಡಿಗನ ಪಾತ್ರ ಅಪಾರ. ಸರ್ವಧರ್ಮ ಸಮನ್ವಯ ದೃಷ್ಟಿಯಿಂದ, ಕೋಮು ಸೌಹಾರ್ದತೆಯಿಂದ ನಾಡಪ್ರೇಮ ಮೆರೆದ ನಾಡು ನಮ್ಮದಾಗಿದೆ. ಆದರೆ ಪ್ರಸ್ತುತ ಕನ್ನಡ ಭಾಷೆಯ ಬೆಳವಣಿಗೆಗೆ ಕನ್ನಡಿಗರು ಶ್ರಮಿಸಬೇಕು. ಆಗ ಕನ್ನಡದ ಶ್ರೇಷ್ಠತೆ ವಿಶ್ವಮಾನ್ಯವಾಗಲು ಸಾಧ್ಯ ಎಂದರು.ನಿವೃತ್ತ ಕನ್ನಡ ಪ್ರಾಧ್ಯಾಪಕ ಎಂ.ಎಸ್. ಯಾವಗಲ್ ಮಾತನಾಡಿ, ಕನ್ನಡ ಭಾಷಿಕರನ್ನು ಒಗ್ಗೂಡಿಸುವ ಕನಸು ಕಂಡಿದ್ದು, ಆಲೂರು ವೆಂಕಟರಾಯರು ಅದು ಏಕೀಕರಣದ ಮೂಲಕ ಸಾಕಾರಗೊಂಡಿತು. 1890ರಿಂದ ಆರಂಭಗೊಂಡ ಚಳವಳಿ 1956ರ ವರೆಗೆ ನಡೆದು ಸಾಕಾರಗೊಂಡಿತು. ಇದರ ಪರಿಣಾಮ ಇಂದು ನಾವು ಈ ರಾಜ್ಯೋತ್ಸವ ಸಂಭ್ರಮದಲ್ಲಿ ಇದ್ದೇವೆ. ಆದರೆ ಇಂದು ಕನ್ನಡದ ಸ್ಥಿತಿ-ಗತಿ ನೋಡಿದರೆ ನಿಜಕ್ಕೂ ನೋವಿನ ಸಂಗತಿಯಾಗಿದೆ. ಸಾಧಿಸಿದ್ದು ಸಾಕಷ್ಟು ಇದ್ದರೂ ಸಾಧಿಸುವುದು ಬೇಕಾದಷ್ಟಿದೆ. ಕನ್ನಡ ನಾಡಿನಲ್ಲಿ ಕನ್ನಡಿಗರೇ ಅನಾಥರಾಗುತ್ತಿದ್ದಾರೆ. ರಾಜಧಾನಿಯಲ್ಲಿ ಕನ್ನಡ ಇಲ್ಲದಂತಾಗಿದೆ. ಕನ್ನಡ ಬೆಳೆಸಿ ಉಳಿಸುವ ಸಂಕಲ್ಪ ನಮ್ಮದಾಗಬೇಕು. ಕನ್ನಡಿಗರು ಸ್ವಾಭಿಮಾನ ಹೊಂದಬೇಕು. ಅನ್ಯ ರಾಜ್ಯಗಳನ್ನಾದರೂ ನೋಡಿ ಭಾಷಾ ಪ್ರೇಮ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳಲ್ಲಿ ಮಾತೃ ಭಾಷೆಯ ಬಗ್ಗೆ ಅರಿವು ಹೊಂದಬೇಕಿದೆ. ಶಿಕ್ಷಕರು ಮಕ್ಕಳಿಗೆ ಕನ್ನಡ, ಸಾಹಿತ್ಯ ಸಂಸ್ಕೃತಿ ರೂಢಿಸಬೇಕು ಎಂದು ಹೇಳಿದರು.
ಆಕರ್ಷಕ ಮೆರವಣಿಗೆ: ಬಸವೇಶ್ವರ ವೃತ್ತದಿಂದ ಹೊರಟ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಹಾಗೂ ವಿವಿಧ ಶಾಲೆಗಳಿಂದ ಭುವನೇಶ್ವರಿ ದೇವಿಯ ಛದ್ಮವೇಷ ಧರಿಸಿದ ಮಕ್ಕಳಿಂದ ತೆರೆದ ವಾಹನಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಮೆರವಣಿಗೆ ರಸ್ತೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪುರಸಭೆ ಆವರಣದಲ್ಲಿ ಸಮಾರೋಪಗೊಂಡಿತು.ಪುರಸಭೆ ಅಧ್ಯಕ್ಷೆ ನೀಲವ್ವ ಪವಾಡಪ್ಪ ವಡ್ಡಿಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ತಾಪಂ ಇಒ ಎಸ್.ಕೆ. ಇನಾಮದಾರ, ತಹಸೀಲ್ದಾರ್ ಶ್ರೀಶೈಲ ತಳವಾರ, ಸಿಪಿಐ ಮಂಜುನಾಥ ನಡುವಿನಮನಿ, ಮುಖ್ಯಾಧಿಕಾರಿ ಎಸ್.ಎಸ್. ಬ್ಯಾಳಿ, ಕರವೇ ಅಧ್ಯಕ್ಷ ನಬೀಸಾಬ ಕಿಲೇದಾರ, ಮಹಿಳಾ ಕರವೇ ಅಧ್ಯಕ್ಷೆ ಮಾಲಾ ಪಾಟೀಲ ಇದ್ದರು.
ಶಿಕ್ಷಕ ಗಿರೀಶ ದಾಸರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.