ಬೂದನೂರು ಉತ್ಸವ ನೆನಪಿಗಾಗಿ ಹೆಬ್ಬಾಗಿಲು ಲೋಕಾರ್ಪಣೆ

KannadaprabhaNewsNetwork | Published : Mar 26, 2025 1:37 AM

ಸಾರಾಂಶ

ಉತ್ಸವ ಮಾಡಲು ಸರ್ಕಾರ ವಿಶೇಷ ಅನುದಾವನ್ನೇನೂ ನೀಡಲಿಲ್ಲ. ಆದರೂ ನಾನು ಮಾತು ಕೊಟ್ಟಂತೆ ಬೂದನೂರು ಉತ್ಸವ ಮಾಡಿದ್ದೇನೆ. ಸರ್ಕಾರ 15 ಲಕ್ಷ ರು. ಬಿಡುಗಡೆ ಮಾಡಿದ್ದರೂ ಇನ್ನೂ ಪಂಚಾಯ್ತಿಗೆ ಹಣ ಬಂದಿಲ್ಲ. ಉಳಿದ 75 ಲಕ್ಷ ರು. ಹಣವನ್ನು ನಾನೇ ನೀಡಿ ಉತ್ಸವ ಮಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಬೂದನೂರು ಗ್ರಾಮದ ಅಭಿವೃದ್ಧಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಬೂದನೂರು ಉತ್ಸವ ಆರಂಭಿಸಿದ್ದು, ಉತ್ಸವಕ್ಕೆ 75ಲಕ್ಷ ರು. ಹಣವನ್ನು ವೈಯಕ್ತಿಕವಾಗಿ ಖರ್ಚು ಮಾಡಿದ್ದೇನೆ ಎಂದು ಶಾಸಕ ಪಿ.ರವಿಕುಮಾರ್‌ ಹೇಳಿದರು.

ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಅನುದಾನದಲ್ಲಿ ಬೂದನೂರು ಉತ್ಸವ ನೆನಪಿನಾರ್ಥ ನೂತನವಾಗಿ ನಿರ್ಮಿಸಿರುವ ಗ್ರಾಮದ ಹೆಬ್ಬಾಗಿಲನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಉತ್ಸವ ಮಾಡಲು ಸರ್ಕಾರ ವಿಶೇಷ ಅನುದಾವನ್ನೇನೂ ನೀಡಲಿಲ್ಲ. ಆದರೂ ನಾನು ಮಾತು ಕೊಟ್ಟಂತೆ ಬೂದನೂರು ಉತ್ಸವ ಮಾಡಿದ್ದೇನೆ. ಸರ್ಕಾರ 15 ಲಕ್ಷ ರು. ಬಿಡುಗಡೆ ಮಾಡಿದ್ದರೂ ಇನ್ನೂ ಪಂಚಾಯ್ತಿಗೆ ಹಣ ಬಂದಿಲ್ಲ. ಉಳಿದ 75 ಲಕ್ಷ ರು. ಹಣವನ್ನು ನಾನೇ ನೀಡಿ ಉತ್ಸವ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ವರ್ಷದ ಉತ್ಸವಕ್ಕೆ ಸರ್ಕಾರದಿಂದ 1 ಕೋಟಿ ರು. ನೀಡುವಂತೆ ಮನವಿ ಮಾಡುತ್ತೇನೆ. ಗ್ರಾಮದಲ್ಲಿರುವ ಶ್ರೀ ಅನಂತಪದ್ಮನಾಭಸ್ವಾಮಿ ಹಾಗೂ ಶ್ರೀಕಾಶಿವಿಶ್ವನಾಥ ದೇವಾಲಯಗಳಿಂದಾಗಿ ಬೂದನೂರು ಪ್ರೇಕ್ಷಣೀಯ ಸ್ಥಳವಾಗಿದ್ದು, ದೇವಾಲಯಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.

ಕೆರೆ ಅಭಿವೃದ್ಧಿಗೆ 5 ಕೋಟಿ ರು.:

ಕೆರೆ ಅಭಿವೃದ್ಧಿಗೆ 5 ಕೋಟಿ ರು. ಟೆಂಡರ್ ಮುಗಿದಿದೆ, ಯುಗಾದಿ ನಂತರ ಭೂಮಿ ಪೂಜೆ ಮಾಡಿ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗಲಿವೆ. 10-15 ದಿನದಲ್ಲಿ ಕೆರೆಗೆ ಹೊಸರೂಪ ಬರುತ್ತದೆ ಎಂದರು.

ಗ್ರಾ.ಪಂ. ಸದಸ್ಯ ಕೆಂಪೇಗೌಡ ಮಾತನಾಡಿ, ಬೂದನೂರು ಉತ್ಸವ ನೆನಪಿನಾರ್ಥ ಹೆಬ್ಬಾಗಿಲು ನಿರ್ಮಾಣಗೊಂಡಿದೆ. ದೇವರ ಹೆಸರಿನೊಂದಿಗೆ ಗ್ರಾಮದ ನಾಮಫಲಕದಲ್ಲಿ ಶಾಸಕ ಪಿ.ರವಿಕುಮಾರ್‌ಗೌಡ ಹೆಬ್ಬಾಗಿಲು ಎಂದು ಹೆಸರಿಡಲಾಗಿದೆ ಎಂದರು.

ಮೈಷುಗರ್ ಮಾಜಿ ಅಧ್ಯಕ್ಷ ಬಿ.ಸಿ.ಶಿವಾನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾನಸ, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ನಾಗೇಶ್, ಶಿಲ್ಪ, ಮಮತಾ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

Share this article