ಶಾಸಕ ಇಕ್ಬಾಲ್ ನೇತೃತ್ವದಲ್ಲಿ ಕೈ ಸೇರಿದ ದಳಪತಿಗಳು

KannadaprabhaNewsNetwork |  
Published : Oct 29, 2025, 01:00 AM IST
28ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕಿನ ಕೈಲಾಂಚ ಹೋಬಳಿ  ಬೆಣ್ಣಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಚಂದ್ರು ಅ‍ವರ ನಿವಾಸದಲ್ಲಿ ಅಣ್ಣಹಳ್ಳಿ ವಿಎಸ್ ಎಸ್ ಎನ್ ಚುನಾವಣೆ ಸಂಬಂಧ ನಡೆದ  ಸಭೆಯಲ್ಲಿ  ಜೆಡಿಎಸ್ ಮುಖಂಡರಾದ ಕಾಳಪ್ಪ, ಕಿರಣ್, ಅರುಣ, ಮುತ್ತುರಾಜು, ಜಗ್ಗ ಸೇರಿದಂತೆ ಅನೇಕರು ಪಕ್ಷ ತೊರೆದು ಕಾಂಗ್ರೆಸ್ ಸೇರಿದರು. | Kannada Prabha

ಸಾರಾಂಶ

ರಾಮನಗರ: ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಸೋಮವಾರ ಸಂಜೆ ಕಾಂಗ್ರೆಸ್ ಸೇರ್ಪಡೆಯಾದರು.

ರಾಮನಗರ: ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಸೋಮವಾರ ಸಂಜೆ ಕಾಂಗ್ರೆಸ್ ಸೇರ್ಪಡೆಯಾದರು.

ತಾಲೂಕಿನ ಕೈಲಾಂಚ ಹೋಬಳಿ ಬೆಣ್ಣಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಚಂದ್ರು ಅ‍ವರ ನಿವಾಸದಲ್ಲಿ ಅಣ್ಣಹಳ್ಳಿ ವಿಎಸ್ಎಸ್ಎನ್ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಕಾಳಪ್ಪ, ಕಿರಣ್, ಅರುಣ, ಮುತ್ತುರಾಜು, ಜಗ್ಗ ಸೇರಿದಂತೆ ಅನೇಕರು ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಸೇರ್ಪಡೆಯಾದ ಮುಖಂಡರು, ಕಳೆದ 25-30 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಾವೆಲ್ಲರೂ ನಿಷ್ಟೆಯಿಂದ ಇದ್ದೆವು. ಆದರೆ, ನಮ್ಮ ನಿಷ್ಠೆ ಪ್ರಾಮಾಣಿಕತೆಗೆ ಅಲ್ಲಿ ಬೆಲೆ ಸಿಗಲಿಲ್ಲ. ಪಕ್ಷದ ವರಿಷ್ಠರು ಎಂದು ಹೇಳಿಕೊಂಡವರು ಎಂದೂ ನಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾದವರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಗಳಾಗಲಿ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಾಗಲಿ ನಾವೆಲ್ಲರು ಪ್ರಾಮಾಣಿಕತೆಯಿಂದ ಪಕ್ಷಕ್ಕಾಗಿ ಹಗಲಿರಳು ದುಡಿದಿದ್ದೇವೆ. ನಾವು ನಮ್ಮ ಮನೆ ಮಠ ಮಾರಿ ದೇವೇಗೌಡರ ಕುಟುಂಬದವರಿಗೆ ಚುನಾವಣೆ ಮಾಡಿದ್ದೆವೊ. ಅವರ್ಯಾರು ನಮ್ಮ ಚುನಾವಣೆಗಳಲ್ಲಿ ಬಂದು ಕೆಲಸ ಮಾಡಲೇ ಇಲ್ಲ. ಜೆಡಿಎಸ್ ಪಕ್ಷ ನಂಬಿಕೊಂಡು ಸಾಲಗಾರರಾಗಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದು, ನಮ್ಮ ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಆಗಿದ್ದಾರೆ. ನಮ್ಮ ಗ್ರಾಮ ಮಾತ್ರವಲ್ಲದೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ಸಿಕ್ಕಿದೆ. ನಾವೆಲ್ಲರು ಡಿ.ಕೆ.ಶಿವಕುಮಾರ್ ಕೈ ಬಲ ಪಡಿಸುತ್ತೇವೆ ಎಂದು ಭರವಸೆ ನೀಡಿದರು.

ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ರಾಜ್ಯಕ್ಕೆ ಮಾದರಿ ಶಾಸಕರಾಗಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಕ್ರಿಯಾಶೀಲತೆಯನ್ನು ಮೆಚ್ಚಿ ನಾವು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ. ನಮ್ಮನ್ನು ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳುವಂತೆ ಮನವಿ ಮಾಡಿದರು.

ಎಂಪಿಸಿಎಸ್ ವಿಷಯದಲ್ಲಿ ನಮಗೆ ತುಂಬಾ ಬೇಸರವಾಗಿದ್ದು, ನಮ್ಮನ್ನು ಅಲ್ಲಿ ಕಡೆಗಣಿಸಿದರು. ಕೆಲವರು ಕಾಂಗ್ರೆಸ್‌ನವರು ಎಂದು ಹೇಳಿಕೊಂಡು ಜೆಡಿಎಸ್‌ನಲ್ಲಿ ಗುರುತಿಸಿಕೊಳ್ಳುವವರು ಇದ್ದಾರೆ. ಅಂಥವರಿಗೆ ನೀವು ಮಣೆ ಹಾಕಬೇಡಿ. ಗ್ರಾಮಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸ ಮಾಡುವ ತೀರ್ಮಾನ ಮಾಡಿಕೊಂಡು ನಾವೆಲ್ಲರೂ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ ಎಂದು ಮುಖಂಡರು ಹೇಳಿದರು.

ಕಾಂಗ್ರೆಸ್ ಸೇರ್ಪಡೆಯಾದ ಮುಖಂಡರ ಮಾತುಗಳನ್ನು ಆಲಿಸಿದ ಶಾಸಕ ಇಕ್ಬಾಲ್ ಹುಸೇನ್, ನಿಮ್ಮಗಳ ಪಕ್ಷ ನಿಷ್ಠೆ, ಪ್ರಾಮಾಣಿಕತೆಗೆ, ಹೋರಾಟಕ್ಕೆ ತಕ್ಕ ಗೌರವ ಕೊಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ. ನಾವೆಲ್ಲರು ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಆಶ್ವಾಸನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕೆಲಸಗಳನ್ನು ಒಪ್ಪಿ ನೀವು ಕಾಂಗ್ರೆಸ್ ಸೇರಿ ದುಡಿಯುತ್ತೇವೆ ಎಂದು ನಮ್ಮನ್ನು ನಂಬಿ ಬಂದಿದ್ದೀರಿ. ನಿಮಗೆಲ್ಲ ರಕ್ಷಣೆ ನೀಡಿ, ಶಕ್ತಿ ತುಂಬಲು ನಾನು ಸಿದ್ಧನಿದ್ದೇನೆ ಎಂದು ಅಭಯ ನೀಡಿದರು.

ಈ‌ ಹಿಂದೆ ನೀವಿದ್ದ ಪಕ್ಷದ ನಾಯಕರು ನಿಮ್ಮನ್ನು ಚುನಾವಣೆಗಾಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಮತ್ತು‌ ನಾನು ನಿಮ್ಮ‌ಗಳ ಕುಟುಂಬದ ಸದಸ್ಯರಾಗಿ ನಿಮ್ಮ‌ ಕಷ್ಟ- ಸಂತೋಷದಲ್ಲಿ ಭಾಗಿಯಾಗುತ್ತೇವೆ. ನೀವೆಲ್ಲರೂ ಪಕ್ಷ ಬಲಿಷ್ಟಗೊಳಿಸಲು ಅಣ್ಣಹಳ್ಳಿ ವಿಎಸ್‌ಎಸ್ಎನ್ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿ ಕಾಂಗ್ರೆಸ್ ಬಾವುಟ ಹಾರಿಸಿ ಎಂದರು‌.

ಇದೇ ವೇಳೆ ಗೋಪಳ್ಳಿ ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಬೆಣ್ಣಹಳ್ಳಿ ಗ್ರಾಮದ ಹಲ ಜೆಡಿಎಸ್ ಮುಖಂಡರು ಶಾಸಕ ಇಕ್ಬಾಲ್ ಹುಸೇನ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕರು ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಅವರನ್ನು ಬರಮಾಡಿಕೊಂಡರು.

ಈ ವೇಳೆ ಬೆಣ್ಣಹಳ್ಳಿ, ಅಣ್ಣಹಳ್ಳಿ, ಮಂಚೇಗೌಡನಪಾಳ್ಯ, ಪರವಯ್ಯನಪಾಳ್ಯ, ಶಂಬೇಗೌಡನದೊಡ್ಡಿ, ಸೀಬಕಟ್ಟೆ ಗ್ರಾಮದ ಮುಖಂಡರಾದ ತಮ್ಮಯ್ಯಣ್ಣ, ತಿಮ್ಮೇಗೌಡ,ನಾಗೇಶ್, ಕರಿಯಪ್ಪ, ನಾಗಣ್ಣ, ಚಂದ್ರು, ಭೀಮೇಗೌಡ, ಮುತ್ತುರಾಜು, ನಾಗರಾಜು, ವೆಂಕಟೇಶ್, ಪುಟ್ಟಸ್ವಾಮಣ್ಣ, ಕಾಳೇಗೌಡ ಮತ್ತಿತರರು ಹಾಜರಿದ್ದರು.

28ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಬೆಣ್ಣಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಚಂದ್ರು ಅ‍ವರ ನಿವಾಸದಲ್ಲಿ ಅಣ್ಣಹಳ್ಳಿ ವಿಎಸ್ ಎಸ್ ಎನ್ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಕಾಳಪ್ಪ, ಕಿರಣ್, ಅರುಣ, ಮುತ್ತುರಾಜು, ಜಗ್ಗ ಸೇರಿದಂತೆ ಅನೇಕರು ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''