ಬಾಲಕಿ ಹತ್ಯೆ ಪ್ರಕರಣವೂ ಸಿಐಡಿಗೆ!

KannadaprabhaNewsNetwork | Published : Apr 23, 2025 12:32 AM

ಸಾರಾಂಶ

ಬಾಲಕಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಅದರಂತೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಸಿಐಡಿ ತಂಡ ಅಶೋಕನಗರ ಠಾಣೆಯಿಂದ ಪಡೆಯಿತು.

ಹುಬ್ಬಳ್ಳಿ: 5 ವರ್ಷದ ಬಾಲಕಿ ಹತ್ಯೆಗೈದ ಆರೋಪಿಯ ಎನ್‌ಕೌಂಟರ್‌ ಪ್ರಕರಣವನ್ನು ಸಿಐಡಿಗೆ ನೀಡಿರುವ ಬೆನ್ನಲ್ಲೇ ಇದೀಗ ಬಾಲಕಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನೂ ಸಿಐಡಿಗೇ ಹಸ್ತಾಂತರಿಸಲಾಗಿದೆ. ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್‌ ನಗರಕ್ಕೆ ಆಗಮಿಸಿ ಎರಡು ಪ್ರಕರಣಗಳ ಮಾಹಿತಿ ಪಡೆದರು.

ಆರೋಪಿ ಬಿಹಾರದ ರಿತೇಶಕುಮಾರ್‌ನನ್ನು ಎನ್‌ಕೌಂಟರ್‌ ಮಾಡಿದ ಪ್ರಕರಣವನ್ನು ಈ ಹಿಂದೆಯೇ ಸಿಐಡಿಗೆ ತನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ. ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿಯ ಸಾವಾದರೆ ಆ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಸಿಐಡಿಯೇ ತನಿಖೆ ನಡೆಸಬೇಕು. ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂಬ ಉದ್ದೇಶದಿಂದ ಈ ನಿಯಮವಿದೆ. ಅದರಂತೆ ಈ ಹಿಂದೆಯೇ ಎನ್‌ಕೌಂಟರ್‌ ಪ್ರಕರಣವನ್ನು ಸಿಐಡಿ ವಹಿಸಿಕೊಂಡು ತನಿಖೆ ನಡೆಸುತ್ತಿದೆ.

ಈ ನಡುವೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಕಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಅದರಂತೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಸಿಐಡಿ ತಂಡ ಅಶೋಕನಗರ ಠಾಣೆಯಿಂದ ಪಡೆಯಿತು. ಪ್ರಕರಣದ ತನಿಖೆಯನ್ನು ಪಿಐ ಕಿರಣಕುಮಾರ ತಾವರಗೆರೆ ನಡೆಸುತ್ತಿದ್ದರು.

ಇನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಲಕ್ಕಪ್ಪ ಅಗ್ನಿ ಹಾಗೂ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ಎನ್‌ಕೌಂಟರ್‌ ಪ್ರಕರಣದೊಂದಿಗೆ ಬಾಲಕಿ ಹತ್ಯೆ ಪ್ರಕರಣವನ್ನೂ ಸಿಐಡಿಗೆ ಹಸ್ತಾಂತರಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಎಡಿಜಿಪಿ ಭೇಟಿ: ಈ ನಡುವೆ ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್‌ ಮಂಗಳವಾರ ಬೆಳಗ್ಗೆ ನಗರಕ್ಕೆ ಆಗಮಿಸಿ ತನಿಖೆಯ ಮಾಹಿತಿ ಪಡೆದರು.

ಘಟನೆ ನಡೆದಿರುವ ವಿಜಯನಗರದ ನಿರ್ಮಾಣ ಹಂತದ ಕಟ್ಟಡಕ್ಕೆ ಭೇಟಿ ನೀಡಿದರು. ಬಳಿಕ ಆರೋಪಿ ರಿತೇಶಕುಮಾರನನ್ನು ಎನ್‌ಕೌಂಟರ್‌ ಮಾಡಿದ ಸ್ಥಳಕ್ಕೂ ಭೇಟಿ ನೀಡಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡು ಪ್ರಕರಣಗಳ ಸಂಪೂರ್ಣ ಮಾಹಿತಿ ಪಡೆದರು. ತನಿಖೆ ಕುರಿತಂತೆ ಎಸ್ಪಿ ವೆಂಕಟೇಶಕುಮಾರ ಅವರಿಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದರು.

Share this article