ಬೆಳಗಾವಿ : ಸಾಲ ವಾಪಸ್‌ ಕೊಡದ್ದಕ್ಕೆ ಬಾಲಕಿ ಅಪಹರಿಸಿ ಪುತ್ರನೊಂದಿಗೆ ವಿವಾಹ ಮಾಡಿಸಿದ್ಲು!

KannadaprabhaNewsNetwork |  
Published : Jan 19, 2025, 02:16 AM ISTUpdated : Jan 19, 2025, 01:13 PM IST
ಅಪರಾಧ | Kannada Prabha

ಸಾರಾಂಶ

ಕುಟುಂಬದವರು ಸಾಲ ಮರುಪಾವತಿಸದ ಕಾರಣ ಬಾಲಕಿಯನ್ನು ಅಪಹರಿಸಿ, ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡ ಅಮಾನವೀಯ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಟಿಳಕವಾಡಿ ಪೊಲೀಸರು ಮದುವೆ ಮಾಡಿಕೊಂಡ ಆರೋಪಿ ಮತ್ತು ಆತನ ತಾಯಿಯನ್ನು ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ.

  ಬೆಳಗಾವಿ :  ಕುಟುಂಬದವರು ಸಾಲ ಮರುಪಾವತಿಸದ ಕಾರಣ ಬಾಲಕಿಯನ್ನು ಅಪಹರಿಸಿ, ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡ ಅಮಾನವೀಯ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಟಿಳಕವಾಡಿ ಪೊಲೀಸರು ಮದುವೆ ಮಾಡಿಕೊಂಡ ಆರೋಪಿ ಮತ್ತು ಆತನ ತಾಯಿಯನ್ನು ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ.

ವಡಗಾವಿಯ ಮಂಗಾಯಿ ನಗರದ ನಿವಾಸಿ ವಿಶಾಲ ಢವಳಿ ಮತ್ತು ಆತನ ತಾಯಿ ರೇಖಾ ಢವಳಿ ಬಂಧಿತ ಆರೋಪಿಗಳು. ತಂದೆ ಪುಂಡಲೀಕ ಢವಳಿ ಮತ್ತು ಸಹೋದರ ಶ್ಯಾಮ ಢವಳಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮೂಲತಃ ಸವದತ್ತಿ ತಾಲೂಕಿನ ಗ್ರಾಮವೊಂದರ ಬಾಲಕಿ ಅನಾರೋಗ್ಯ ಕಾರಣದಿಂದ ತಾಯಿಯೊಂದಿಗೆ ಬೆಳಗಾವಿಯಲ್ಲಿ ವಾಸವಾಗಿದ್ದಳು. ಮಗಳ ಆಸ್ಪತ್ರೆ ಖರ್ಚಿಗಾಗಿ ತಾಯಿ ಆರೋಪಿ ರೇಖಾ ಪುಂಡಲೀಕ ಢವಳಿ ಬಳಿ ₹50 ಸಾವಿರ ಕೈಗಡ ಸಾಲ ಪಡೆದಿದ್ದರು.ಆದರೆ, ಹಣ ಮರಳಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಬಾಲಕಿಯ ತಾಯಿ ಬಂಗಾರದ ಕಿವಿಯೊಲೆಯನ್ನು ಆರೋಪಿಗಳ ಬಳಿ ಒತ್ತೆ ಇಟ್ಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ರೇಖಾ, ನನ್ನ ಮಗ ವಿಶಾಲನಿಗೆ ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದಾಳೆ. ಆದರೆ, ಇದಕ್ಕೆ ಬಾಲಕಿ ತಾಯಿ ಒಪ್ಪಿಲ್ಲ. ಬಾಲಕಿ ಕೂಡ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾಳೆ. ನಾನು ಶಾಲೆ ಕಲಿಯುತ್ತೇನೆ. ಮದುವೆ ಆಗುವುದಿಲ್ಲ ಎಂದು ಬಾಲಕಿ ಹೇಳಿದ್ದಾಳೆ. ಬಳಿಕ ವಿಶಾಲ ಢವಳಿ, ರೇಖಾ ಢವಳಿ, ವಿಶಾಲ ಅಣ್ಣ ಶ್ಯಾಮ ಮತ್ತು ಚಿಕ್ಕಮ್ಮ 2024ರ ನವೆಂಬರ್​ 17ರಂದು ಬಾಲಕಿಯ ಮನೆಗೆ ಹೋಗಿದ್ದಾರೆ. ಅಲ್ಲಿ ಬಾಲಕಿ ಮತ್ತು ಬಾಲಕಿ ಚಿಕ್ಕಪ್ಪನನ್ನು ಒತ್ತಾಯಪೂರ್ವಕವಾಗಿ ಆಟೋದಲ್ಲಿ ಕೂರಿಸಿಕೊಂಡು ವಡಗಾವಿಯ ಮಂಗಾಯಿ ನಗರದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಆರೋಪಿಗಳ ಮನೆಯಲ್ಲಿ ಬಾಲಕಿ ತಾಯಿ ನಮ್ಮ ಹತ್ತಿರ ಹಣವಿಲ್ಲ. ತೊಂದರೆ ಕೊಡಬೇಡಿ. ಹಣ ಇದ್ದಾಗ ಕೊಡುತ್ತೇವೆ. ಇಲ್ಲವೆಂದರೆ ನಾವು ಒತ್ತೆ ಇಟ್ಟ ಬಂಗಾರವನ್ನು ನೀವೇ ಇಟ್ಟುಕೊಳ್ಳಿ. ಮಗಳನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಆರೋಪಿ ರೇಖಾ ಮಗನ ಜೊತೆಗೆ ಮಗಳನ್ನು ಮದುವೆ ಮಾಡಿಸಿಯೇ ಮಾಡಿಸುತ್ತೇನೆ ಎಂದು ಸವಾಲು ಹಾಕಿ ಅದೇ ದಿನ ರಾತ್ರಿ 10.30ರ ಸುಮಾರಿಗೆ ಆರೋಪಿ ವಿಶಾಲ, ಈತನ ತಂದೆ-ತಾಯಿ ಮತ್ತು 7-8 ಜನರು ಬಾಲಕಿಯನ್ನು ಅಥಣಿಗೆ ಕರೆದುಕೊಂಡು ಹೋಗಿ ನ.18ರಂದು ನಸುಕಿನ ಜಾವ 5 ಗಂಟೆಗೆ ಆರೋಪಿ ವಿಶಾಲನೊಂದಿಗೆ ಬಲವಂತವಾಗಿ ಬಾಲಕಿಯ ಮದುವೆ ಮಾಡಿಸಿದ್ದಾರೆ.

ನಂತರ, ಅಲ್ಲಿಂದ ಬಾಲಕಿಯನ್ನು ಆರೋಪಿ ವಿಶಾಲ ಢವಳಿ ತನ್ನ ಮನೆಗೆ ಕರೆದುಕೊಂಡು ಬಂದು ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ. ಅಲ್ಲದೆ, ವಿಶಾಲ ಮತ್ತು ಈತನ ತಂದೆ-ತಾಯಿ ಬಾಲಕಿಗೆ ಕಿರುಕುಳ ನೀಡಿದ್ದಾರೆ ಎಂದು ದೂರಿ​ನಲ್ಲಿ ತಿಳಿಸಲಾಗಿದೆ. ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಸಖಿ ಕೇಂದ್ರದಲ್ಲಿ ಇರಿಸಿದ್ದಾರೆ. ಈ ಕುರಿತು ಟಿಳಕವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!