ವೃತ್ತಿ, ಕೌಶಲ್ಯದ ಮೇಲೆ ಗೌರವವಿದ್ದಾಗ ಯಶಸ್ಸು: ಅರುಣ್ ಯೋಗಿರಾಜ್

KannadaprabhaNewsNetwork |  
Published : Jan 19, 2025, 02:16 AM IST
೧೮ಕೆಎಂಎನ್‌ಡಿ-೩ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿರವರ ಸಂಸ್ಮರಣಾ ದಿನದ ಅಂಗವಾಗಿ ಜಕಣಾಚಾರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. | Kannada Prabha

ಸಾರಾಂಶ

ಇಂದು ಪಂಚ ಕಸುಬುಗಳಲ್ಲಿರುವ ವಿಶ್ವಕರ್ಮರಲ್ಲಿ ಬಹಳ ಶ್ರಮವಿದೆ. ಇಂದಿನ ತಲೆಮಾರು ಸಮಾಜದ ವೃತ್ತಿಯಲ್ಲಿ ಮುಂದುವರೆಯುವುದೋ ಇತರೆ ಕೆಲಸಗಳನ್ನು ಅರಸಿ ಹೋಗುವುದೋ ಎಂಬ ಗೊಂದಲದಲ್ಲಿದೆ. ನಮ್ಮ ವೃತ್ತಿಯಲ್ಲಿ ಅಷ್ಟೊಂದು ಕಷ್ಟಗಳಿವೆ. ನಾನು ಬಾಲರಾಮನ ಮೂರ್ತಿ ಕೆತ್ತಲು ಆರಂಭಿಸಿ ಶೇ.೬೦ರಷ್ಟು ಕೆಲಸ ಪೂರೈಸಿದ್ದೆ, ಅದರಲ್ಲಿ ಲೋಪವಿದೆ ಎಂದು ಹಿರಿಯರು ತಿಳಿಸಿದಾಗ ಬಹಳ ನೋವಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾವು ಮಾಡುವ ವೃತ್ತಿ ಮತ್ತು ಕೌಶಲ್ಯದ ಮೇಲೆ ನಂಬಿಕೆ ಇಟ್ಟು ಶ್ರದ್ಧೆಯಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಸಾರ್ಥಕತೆ ಲಭಿಸುತ್ತದೆ ಎಂದು ಅಯೋಧ್ಯಾ ಬಾಲರಾಮನ ಶಿಲ್ಪಿ ಅರುಣ್‌ಯೋಗಿರಾಜ್ ಸಲಹೆ ನೀಡಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿರವರ ಸಂಸ್ಮರಣಾ ದಿನ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಪಂಚ ಕಸುಬುಗಳಲ್ಲಿರುವ ವಿಶ್ವಕರ್ಮರಲ್ಲಿ ಬಹಳ ಶ್ರಮವಿದೆ. ಇಂದಿನ ತಲೆಮಾರು ಸಮಾಜದ ವೃತ್ತಿಯಲ್ಲಿ ಮುಂದುವರೆಯುವುದೋ ಇತರೆ ಕೆಲಸಗಳನ್ನು ಅರಸಿ ಹೋಗುವುದೋ ಎಂಬ ಗೊಂದಲದಲ್ಲಿದೆ. ನಮ್ಮ ವೃತ್ತಿಯಲ್ಲಿ ಅಷ್ಟೊಂದು ಕಷ್ಟಗಳಿವೆ. ನಾನು ಬಾಲರಾಮನ ಮೂರ್ತಿ ಕೆತ್ತಲು ಆರಂಭಿಸಿ ಶೇ.೬೦ರಷ್ಟು ಕೆಲಸ ಪೂರೈಸಿದ್ದೆ, ಅದರಲ್ಲಿ ಲೋಪವಿದೆ ಎಂದು ಹಿರಿಯರು ತಿಳಿಸಿದಾಗ ಬಹಳ ನೋವಾಯಿತು. ನಂತರ ನನ್ನ ಆರಾಧ್ಯದೈವ ಸಿದ್ದಪ್ಪಾಜಿಯ ಕಂಡಾಯ ಮತ್ತು ನನ್ನ ತಂದೆಯ ಭಾವಚಿತ್ರವನ್ನಿರಿಸಿಕೊಂಡು ಹೊಸದಾಗಿ ಬಾಲರಾಮನ ಮೂರ್ತಿಯ ಕುಸುರಿ ಕೆತ್ತನೆ ಆರಂಭಿಸಿದೆ. ಅತ್ಯಂತ ಶ್ರಮ ಮತ್ತು ಏಕಾಗ್ರತೆಯಿಂದ ಕೆಲಸ ಮಾಡಿದೆ. ನಂತರ ಅದಕ್ಕೆ ಸಂದ ಪ್ರತಿಫಲ ಏನೆಂಬುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ನಮ್ಮ ಶ್ರಮದ ಕಾರ್ಯದಲ್ಲಿ ಒಂದು ಸಾರ್ಥಕತೆ ಮತ್ತು ವರ್ಣಿಸಲಾಗದ ಸಂತೋಷವಿರುತ್ತದೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಶ್ರಮಿಕರಿಗೆ ಕಿವಿಮಾತು ಹೇಳಿದ ಅವರು, ಅದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಕೌಶಲ್ಯದ ಕೆಲಸದ ಮೇಲೆ ಗೌರವವಿರಿಸಿಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು ಮಾತನಾಡಿ, ಬೇಲೂರು, ಹಳೇಬೀಡು ದೇವಾಲಯಗಳ ಶಿಲ್ಪಕಲೆಯ ಮೂಲಕ ಅಮರಶಿಲ್ಪಿ ಜಕಣಾಚಾರಿ ಅವರು ವಿಶ್ವದಲ್ಲಿ ಕರ್ನಾಟಕವನ್ನು ಶಿಲ್ಪಕಲೆಯ ಬೀಡು ಎನ್ನುವಂತಾಗಲು ಕಾರಣರಾದರು. ಈಗ ಅಯೋಧ್ಯಾ ರಾಮನ ಮೂರ್ತಿ ಕೆತ್ತನೆಯ ಮೂಲಕ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕರ್ನಾಟಕದ ಹೆಮ್ಮೆಯಾಗಿ ರಾಜ್ಯದ ಕೀರ್ತಿಯನ್ನು ಬೆಳಗಿದ್ದಾರೆಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಶಿಲ್ಪಿ ಅರುಣ್‌ಯೋಗಿರಾಜ್, ಮದ್ದೂರಿನ ಬಾಲ ಪ್ರತಿಭೆ ಚಿತ್ರಕಲಾವಿದ ವಿಶ್ವಪ್ರಸಾದ್ ಹಾಗೂ ವಿಶ್ವಕರ್ಮ ಸಮುದಾಯದ ಪಂಚ ಕಸುಬುಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಸಾಧಕರನ್ನು ಅಭಿನಂದಿಸಲಾಯಿತು.

ಸಾಹಿತಿ ಕೆ.ಪಿ.ಸ್ವಾಮಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ನಾಗೇಶ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ತಿರುಮಲಾಚಾರ್, ಕೆಪಿಸಿಸಿ ಸದಸ್ಯೆ ಪವಿತ್ರಾ ಆಚಾರ್, ನಗರಸಭೆ ಸದಸ್ಯೆ ಲಲಿತಾ ಭದ್ರಾಚಾರ್, ಮುಖಂಡರಾದ ವೈ.ಬಿ.ಶ್ರೀನಿವಾಸಮೂರ್ತಿ, ಎಂ.ಬಿ.ರಮೇಶ್, ಎಲ್.ಆನಂದ್, ಎಂ.ಕೆ.ನರಸಿಂಹಾಚಾರ್, ಎಂ.ಎನ್.ರಮೇಶ್, ಸುದರ್ಶನ್, ತೈಲೂರು ಆನಂದ್, ಗಂಜಾಂ ರಾಜಣ್ಣ, ಮೋಹನ್, ದೇವರಾಜ್, ಕೃಷ್ಣಾಚಾರ್ ಮತ್ತಿತರರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌