ವೈಭವದ ಬನಶಂಕರೀದೇವಿ ಭಾವೈಕ್ಯತಾ ಮಹಾರಥೋತ್ಸವ

KannadaprabhaNewsNetwork |  
Published : Feb 03, 2026, 03:15 AM IST
ಅಮೀನಗಡ ಸಮೀಪದ ಸೂಳೇಬಾವಿಯಲ್ಲಿ 51 ನೇಬನಶಂಕರೀದೇವಿ ಭಾವೈಕ್ಯತಾ ರಥೋತ್ಸವ ಭಾನುವಾರ ಅದ್ದೂರಿಯಿಂದ ಜರುಗಿತು. ರಥೋತ್ಸವಕ್ಕೆ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು | Kannada Prabha

ಸಾರಾಂಶ

ಅಮೀನಗಡ ಸಮೀಪದ ಸೂಳೇಬಾವಿಯಲ್ಲಿ ಬನಶಂಕರೀದೆವಿ ಭಾವೈಕ್ಯತಾ ಜಾತ್ರಾ 51ನೇ ಸುವರ್ಣ ಮಹೋತ್ಸವದ ಮಹಾರಥೋತ್ಸವ ಭಾನುವಾರ ವೈಭವದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಅಮೀನಗಡ

ಸಮೀಪದ ಸೂಳೇಬಾವಿಯಲ್ಲಿ ಬನಶಂಕರೀದೆವಿ ಭಾವೈಕ್ಯತಾ ಜಾತ್ರಾ 51ನೇ ಸುವರ್ಣ ಮಹೋತ್ಸವದ ಶ್ರೀದೇವಿ ಮಹಾರಥೋತ್ಸವ ಭಾನುವಾರ ವೈಭವದಿಂದ ಜರುಗಿತು.ಮುಸ್ಲಿಂ ಧರ್ಮಿಯರಿಂದ ಬನಶಂಕರಿದೇವಿ ರಥಕ್ಕೆ ಗರುಡಪಠ ಏರಿಸುವ ಮೂಲಕ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ, ರಥೋತ್ಸವದಂದು ಹರಿಜನ ಸಮಾಜದವರು ಗರ್ಭಗುಡಿ ಪ್ರವೇಶಿಸಿ ದೇವಿಗೆ ಅಲಂಕಾರ ಮಾಡುತ್ತಾರೆ. ಸರ್ವಸಮಾಜದವರು ಒಂದಾಗಿ ಆಚರಿಸುವ ಈ ಜಾತ್ರೆ ಭಾವೈಕ್ಯತೆಯ ಜಾತ್ರೆ ಎಂದೇ ಹೆಸರುವಾಸಿಯಾಗಿದೆ. ಭಾರತ ಹುಣ್ಣಿಮೆಯಂದು ಸಂಜೆ 6 ಗಂಟೆಗೆ ಜರುಗಿದ ಈ ಭಾವೈಕ್ಯತಾ ರಥೋತ್ಸವ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

ಭಾನುವಾರ ಜರುಗಿದ ರಥೋತ್ಸವದಲ್ಲಿ ಗ್ರಾಮದ ಬನಶಂಕರಿದೇವಿ ದೇವಸ್ಥಾನದಿಂದ ಭಾವೈಕ್ಯತೆಯ ಮಹಾದ್ವಾರದ ಪಾದಗಟ್ಟೆಯವರೆಗೂ ಬನಶಂಕರೀದೇವಿ ಭಾವೈಕ್ಯತಾ ರಥವನ್ನು ಸರ್ವಸಮಾಜದ ಭಕ್ತರು ಎಳೆದರು. ದೂರದೂರಿಂದ ಬಂದ ಹೆಣ್ಣು ಮಕ್ಕಳು, ಮಕ್ಕಳು, ಹಿರಿಯ ನಾಗರಿಕರು ತೇರು ಎಳೆದರು. ತೇರಿಗೆ ಉತ್ತತ್ತಿ ಎಸೆಯುವ ಮೂಲಕ ಭಕ್ತರು ಹರಕೆ ತೀರಿಸಿದರು.

ಸೂಳೇಬಾವಿ, ಅಮೀನಗಡ, ತಳ್ಳೀಕೇರಿ, ಗೊರ್ಜನಾಳ, ಕೆಲೂರ, ಐಹೊಳೆ, ನಿಂಬಲಗುಂದಿ, ಮುಳ್ಳೂರ, ಕುಣಬೆಂಚಿ, ಕಳ್ಳಿಗುಡ್ಡ, ಹೂವಿನಹಳ್ಳಿ, ಕ್ಯಾದಿಗೇರಿ, ಚಿಲಾಪುರ, ಚಿತ್ತರಗಿ, ಗುಡೂರ ಮುಂತಾದ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ, ಉತ್ತತ್ತಿ ಖರ್ಜೂರ ಎಸೆದು ಭಕ್ತಿಪರವಶತೆ ಮೆರೆದರು.

ದೇವಿಗೆ ಬೆಳಗ್ಗೆಯಿಂದಲೇ ಅಭಿಷೇಕ, ವಿಶೇಷ ಪೂಜೆ, ಹೋಮ ಹವನಗಳು ವಿಶೇಷ ಅಲಂಕಾರ,ಪ್ರಸಾದ ವಿನಿಯೋಗಗಳು ಜರಗಿದವು. ದೇವಸ್ಥಾನ ಕಮಿಟಿ ವತಿಯಿಂದ ಸಿಡಿಮದ್ದು ಸಂಭ್ರಮ ಜರುಗಿತು.

ತಲೆ ಮೇಲೆ ಕಳಸ ಹೊತ್ತು ತಂದ ನಂಜಯ್ಯನಮಠ:

ಸುವರ್ಣ ಮಹೋತ್ಸವದ ಮಹಾ ರಥೋತ್ಸವದ ತೇರಿನ ಕಳಸವನ್ನು ಸೂಳೇಬಾವಿಯ ಗ್ರಾಮ ಪಂಚಾಯತಿ ಕಟ್ಟೆಯಿಂದ ಭಾವೈಕ್ಯತಾ ತೇರಿನವರೆಗೂ ಮಾಜಿ ಶಾಸಕ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಲೆಯಮೇಲೆ ಹೊತ್ತು ತಂದರು. ನೇಕಾರ ಧುರೀಣ, ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಗ್ರಾಮ ಪಂಚಾಯತಿ ಅಧ್ಯಕ್ಷ ಪಿಡ್ಡಪ್ಪಣ್ಣ ಕುರಿ ಜಾತ್ರಾ ಸಮಿತಿ ಪದಾಧಿಕಾರಿಗಳು ಗಣ್ಯರು, ಹಿರಿಯರು ಇದ್ದರು.

ರಾತ್ರಿ 10ಕ್ಕೆ ಸೂಳೇಬಾವಿಯ ಶ್ರೀ ವಿಜಯಮಹಾಂತೇಶ ತರುಣ ನಾಟ್ಯ ಸಂಘದಿಂದ ಪಾಪದ ಹೆಣ್ಣಿಗೆ ಪುಣ್ಯದ ಸಿಂಧೂರ ನಾಟಕ ಪ್ರದರ್ಶನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲಕ್ಕೆ ತಕ್ಕಂತ ಕೌಶಲ್ಯ ಹೊಂದಿ ಉದ್ಯೋಗ ಪಡೆಯಿರಿ
ರೈತ, ಶಿಕ್ಷಕ, ಸೈನಿಕ ದೇಶದ ಕಣ್ಣುಗಳು