ಗತವೈಭವದ ಐತಿಹ್ಯ ಹೊಂದಿರುವ ಒಕ್ಕುಂದ

KannadaprabhaNewsNetwork |  
Published : Feb 03, 2026, 03:15 AM IST
 ಬೈಲಹೊಂಗಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ ಸಂಸ್ಕೃತಿ, ಇತಿಹಾಸ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಉತ್ಸವದ ಮೂಲಕ ತಿರುಳ್ಗನ್ನಡ ನಾಡಿನ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸುತ್ತಿರುವ ಒಕ್ಕುಂದ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಂಸ್ಕೃತಿ, ಇತಿಹಾಸ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಉತ್ಸವದ ಮೂಲಕ ತಿರುಳ್ಗನ್ನಡ ನಾಡಿನ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸುತ್ತಿರುವ ಒಕ್ಕುಂದ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಒಕ್ಕುಂದ ಗ್ರಾಮದಲ್ಲಿ ಭಾನುವಾರ ಸಂಜೆ ತಿರುಳ್ಳಗನ್ನಡ ನಾಡು ಒಕ್ಕುಂದ ಉತ್ಸವ-2026 ಉದ್ಘಾಟಿಸಿ ಮಾತನಾಡಿದರು. ಮೊದಲ ವರ್ಷದಿಂದಲೂ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಬೆಳಗಾವಿ ಜಿಲ್ಲೆಯಲ್ಲಿ ನೂರಾರು ಹಳ್ಳಿಗಳಿದ್ದು, ಒಕ್ಕುಂದದಂತೆ ಗತವೈಭವದ ಇತಿಹಾಸ ಹೊಂದಿರುವ ಗ್ರಾಮ ಅಪರೂಪ. ಹಾಗಾಗಿ, ಆ ಇತಿಹಾಸ ನಾಡಿಗೆ ತಿಳಿಸುವ ಉದ್ದೇಶದಿಂದ ಕಳೆದ 11 ವರ್ಷಗಳಿಂದ ಉತ್ಸವ ನಡೆಸಲಾಗುತ್ತಿದೆ. ಆರಂಭದ 8 ವರ್ಷ ಗ್ರಾಮಸ್ಥರೇ ಸ್ವಂತ ಖರ್ಚಿನಲ್ಲಿ ಆಯೋಜಿಸಿದ್ದು, ಎರಡು ವರ್ಷಗಳಿಂದ ಜಿಲ್ಲಾಡಳಿತ ₹ 2 ಲಕ್ಷ ಅನುದಾನ ನೀಡುತ್ತಿರುವುದು ಸಂತಸದ ಸಂಗತಿ. ಮುಂದಿನ ವರ್ಷದಿಂದ ಸರ್ಕಾರಿ ಉತ್ಸವವಾಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಿಶೇಷ ಉಪನ್ಯಾಸಕ ವೈ.ಎಂ.ಯಾಕೋಳ್ಳಿ ಮಾತನಾಡಿ, ಕರ್ನಾಟಕದ ಜನತೆ ಹೆಮ್ಮೆಯಿಂದ ಸ್ಮರಿಸಬೇಕಾದ ಭವ್ಯ ಇತಿಹಾಸವನ್ನು ಒಕ್ಕುಂದ ಹೊಂದಿದೆ. ಕನ್ನಡದ ಮೊದಲ ಗ್ರಂಥ ಕವಿರಾಜ ಮಾರ್ಗ ಗ್ರಂಥದಲ್ಲಿ ಅದರ ಕತೃ ಶ್ರೀವಿಜಯ ಕೊಪ್ಪಳ, ಲಕ್ಷ್ಮೇಶ್ವರ, ಪಟ್ಟದಕಲ್ಲು ಮತ್ತು ಒಕ್ಕುಂದ ಈ ನಾಲ್ಕು ಪ್ರದೇಶಗಳನ್ನು ತಿರುಳ್ಗನ್ನಡನಾಡು ಎಂದು ಕರೆದಿದ್ದಾರೆ. ಜೊತೆಗೆ ಒಕ್ಕುಂದ ಸದಾ ಸಮೃದ್ಧಿಯಿಂದ ಕೂಡಿರುವ ನಾಡು ಎಂದು ಬಣ್ಣಿಸಲಾಗಿದೆ. ಕನ್ನಡದ ತಿರುಳನ್ನು ಸದಾ ಉಳಿಸಿಕೊಂಡು ಬಂದ ಈ ನಾಡು ತನ್ನ ಸಿರಿ ಸಂಪತ್ತನ್ನು ಜನತೆಗೆ ಹಂಚುತ್ತಾ ಬಂದಿದೆ. ಇಲ್ಲಿನ ಐತಿಹಾಸಿಕ ಶಿಲ್ಪಮಂದಿರ ಅಂದಿನ ಕಲಾವೈಭವಕ್ಕೆ ಸಾಕ್ಷಿಯಾಗಿದೆ. ಒಕ್ಕುಂದ ಇತಿಹಾಸದ ಕುರಿತು ಸಂಶೋಧನೆ ಅವಶ್ಯವಿದೆ. ಅಷ್ಟೆ ಅಲ್ಲದೇ, ಉತ್ಖನನ ಮಾಡಿದರೆ ಕನ್ನಡ ನಾಡಿನ ಇತಿಹಾಸದ ಕುರಿತು ದಾಖಲೆಗಳು ಹೊರ ಬರುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಪ್ರಯತ್ನಿಸಲಿ ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರಿ ಪಡೆದ ಗ್ರಾಮದ ಯುವಕರು, ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮತ್ತು ಕ್ರೀಡೆ, ಪ್ರತಿಭಾ ಕಾರಂಜಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಪ್ರಗತಿಪರ ರೈತರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ನಿರ್ಮಲಾ ಕಲ್ಲಿ ವಹಿಸಿದ್ದರು. ವೇದಮೂರ್ತಿ ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಸಾನಿಧ್ಯ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ, ಪಿಡಿಒ ಬಸನಗೌಡ ಪಾಟೀಲ ಆಗಮಿಸಿದ್ದರು. ಈ ವೇಳೆ ಉತ್ಸವ ಸಮಿತಿ ಗೌರವ ಅಧ್ಯಕ್ಷ ಸಿ.ಕೆ.ಮೆಕ್ಕೇದ, ಸಲಹಾ ಸಮಿತಿ ಅಧ್ಯಕ್ಷ ಸಿ.ಬಿ.ಗಣಾಚಾರಿ, ಉತ್ಸವ ಸಮಿತಿ ಅಧ್ಯಕ್ಷ ರಾಮನಗೌಡ ಪಾಟೀಲ, ಉಪಾಧ್ಯಕ್ಷ ಸಂಗಪ್ಪ ಭದ್ರಶೆಟ್ಟಿ, ಕಾರ್ಯದರ್ಶಿ ಅಶೋಕ ಭದ್ರಶೆಟ್ಟಿ, ಖಜಾಂಚಿ ಪರ್ವತಗೌಡ ಪಾಟೀಲ, ಪದಾಧಿಕಾರಿಗಳಾದ ಮಡಿವಾಳಪ್ಪ ತಡಸಲ, ಶಂಕರ ಕೋಟಗಿ, ಅಶೋಕ ಜಂತಿ, ಈರಣ್ಣ ಅಂಗಡಿ, ಈರನಗೌಡ ಶೀಲವಂತರ, ಗಫಾರಸಾಬ ನದಾಫ, ರಮೇಶ ಹಾದಿಮನಿ, ಮೌನೇಶ ಪತ್ತಾರ, ಸಂತೋಷ ಹಡಪದ, ಮಲ್ಹಾರೆಪ್ಪ ಢವಳೆ, ಮಲ್ಲವ್ವ ಪಟಾತ್‌ ಸೇರಿ ಮತ್ತಿತರರು ಇದ್ದರು.

ಉತ್ಸವ ಸಮಿತಿ ನಿರ್ದೇಶಕ ಜಿ.ಎಂ.ಸುತಗಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಗಂಗಾಧರಗೌಡ ಪಾಟೀಲ ನಿರೂಪಿಸಿದರು. ಪತ್ರಕರ್ತ ಸಿದ್ದನಗೌಡ ಪಾಟೀಲ ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ ವಂದಿಸಿದರು. ಹಿನ್ನೆಲೆ ಗಾಯಕ ರವೀಂದ್ರ ಸೋರಗಾವಿ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶ್ರೀರಕ್ಷಾ ಜೋಶಿಯಿಂದ ಭರತ ನಾಟ್ಯ ಜರುಗಿತು.-----

ಕೋಟ್‌

ಇಂದು ಮೋಜು-ಮಸ್ತಿಯಲ್ಲಿ ಜನರು ಸಮಯ ಕಳೆಯುತ್ತಿದ್ದಾರೆ. ಆದರೆ, ಒಕ್ಕುಂದ ಗ್ರಾಮಸ್ಥರು ತಮ್ಮೂರಿನ ಇತಿಹಾಸ ಉಳಿಸಿ, ಬೆಳೆಸುತ್ತಿರುವುದು ಹೆಮ್ಮೆಯ ವಿಚಾರ. ಇದು ಸರ್ಕಾರಿ ಉತ್ಸವ ಆಗುವ ನಿಟ್ಟಿನಲ್ಲಿ ನಾನು ಧ್ವನಿ ಎತ್ತುತ್ತೇನೆ.ರೋಹಿಣಿ ಪಾಟೀಲ, ಜಿಪಂ ಮಾಜಿ ಸದಸ್ಯೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದನದಲ್ಲಿ ಇಂದು, ನಾಳೆ ಜಿ ರಾಮ್‌ ಜಿ ಸಂಗ್ರಾಮ
ಮುಖ್ಯಮಂತ್ರಿ ಗಾದಿ ಬಗ್ಗೆ ಕೆಣಕಿದ್ದಕ್ಕೆ ಗೂಢಾರ್ಥದಲ್ಲಿ ಡಿಕೆಶಿ ಎದಿರೇಟು