ಸಾವಿರಾರು ಭಕ್ತರು ಹೂವು, ಹಣ್ಣು, ತೆಂಗಿನಕಾಯಿ ವಿವಿಧ ನೈವೇದ್ಯಗಳಿಂದ ದೇವರಿಗೆ ಭಕ್ತಿ ಸಮರ್ಪಣೆ ಮಾಡಿದರು.
ಕೊಪ್ಪಳ: ಭಕ್ತಿ ಮತ್ತು ಸಂಪ್ರದಾಯಕ್ಕೆ ಹೆಸರಾದ ತಾಲೂಕಿನ ಡಂಬರಹಳ್ಳಿ ಗ್ರಾಮದಲ್ಲಿ ಶ್ರೀಮಾರುತೇಶ್ವರ ಮಹಾರಥೋತ್ಸವ ಸಹಸ್ರಾರು ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿತು.
ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಡಂಬರಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು, ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳು ನಡೆದವು.
ಮಾರುತೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು, ಸಾವಿರಾರು ಭಕ್ತರು ಹೂವು, ಹಣ್ಣು, ತೆಂಗಿನಕಾಯಿ ವಿವಿಧ ನೈವೇದ್ಯಗಳಿಂದ ದೇವರಿಗೆ ಭಕ್ತಿ ಸಮರ್ಪಣೆ ಮಾಡಿದರು.
ಉಜ್ಜಯನಿಯ ಮೈನಳ್ಳಿ, ಬಿಕನಳ್ಳಿ ಶಾಖಾಮಠದ ಶ್ರೀಸಿದ್ದೇಶ್ವರ ಶಿವಚಾರ್ಯ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ಅಲಂಕೃತ ಮಹಾರಥದಲ್ಲಿ ಶ್ರೀಮಾರುತೇಶ್ವರ ದೇವರನ್ನು ಪ್ರತಿಷ್ಠಾಪಿಸಿ, ಭಕ್ತರು ಜೈ ಶ್ರೀರಾಮ ಜೈ ಹನುಮಾನ್ ಘೋಷಣೆ ನಡುವೆ ರಥ ಎಳೆದರು, ರಥ ಸಾಗಿದ ಮಾರ್ಗದಲ್ಲಿ ಗ್ರಾಮಸ್ಥರು ಹೂವಿನ ಮಳೆ ಸುರಿದರು,
ಭಜನಾ ಮಂಡಳಿಗಳಿಂದ ಭಕ್ತಿಗೀತೆಗಳು, ದಾಸಪದ ಮೊಳಗಿದವು. ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಹಾಗೂ ಯುವಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಕೂಡ ಆಯೋಜಿಸಲ್ಪಟ್ಟಿದ್ದು, ಎಲ್ಲ ವಯೋಮಾನದ ಜನರಿಗೆ ಮನರಂಜನೆ ನೀಡಿತು.ಅನ್ನಸಂತರ್ಪಣೆ ಕಾರ್ಯಕ್ರಮ ವಿಶೇಷವಾಗಿ ನಡೆಯಿತು. ಪೊಲೀಸರು ಬಂದೋಬಸ್ತ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು.
ಪತಾಕಿ ಸವಾಲು:
ಉತ್ಸವದ ಅಂಗವಾಗಿ ನಡೆದ ಪತಾಕಿ ಸವಾಲಿನಲ್ಲಿ ಐವತ್ತು ಸಾವಿರ ಬಹುಮಾನವನ್ನು ಡಿವೈಎಸ್ಪಿ ವೆಂಕಟಪ್ಪ ನಾಯಕ ಪಡೆದುಕೊಂಡರು.ಒಟ್ಟಾರೆ ಡಂಬರಹಳ್ಳಿ ಗ್ರಾಮದ ಶ್ರೀಮಾರುತೇಶ್ವರ ಮಹಾರಥೋತ್ಸವವು ಭಕ್ತಿ, ಸಂಸ್ಕೃತಿ ಮತ್ತು ಸಮುದಾಯ ಏಕತೆಯ ಪ್ರತೀಕವಾಗಿ ಮತ್ತೊಮ್ಮೆ ಜನಮನ ಗೆದ್ದಿದ್ದು, ಮುಂದಿನ ವರ್ಷ ಇನ್ನಷ್ಟು ಅದ್ಧೂರಿಯಾಗಿ ಆಚರಿಸುವ ನಿರೀಕ್ಷೆ ಮೂಡಿಸಿದೆ ಎನ್ನುತ್ತಾರೆ ಗ್ರಾಮದ ಭಕ್ತರು.
ನಮ್ಮ ಗ್ರಾಮದ ಪರಂಪರೆ ಈ ಮಹಾರಥೋತ್ಸವ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿದೆ. ಭಕ್ತರ ಭಕ್ತಿ ಮತ್ತು ಏಕತೆ ಈ ಉತ್ಸವದ ಮುಖ್ಯ ಶಕ್ತಿ ಎಂದು ಗ್ರಾಮದ ಹಿರಿಯರು ಹಾಗೂ ಉತ್ಸವ ಸಮಿತಿ ಸದಸ್ಯರು ಅಭಿಪ್ರಾಯಪಟ್ಟರು.
ಇಂದಿನ ಕಾರ್ಯಕ್ರಮ: ಇಂದಿನ ಜಾತ್ರೆಯಲ್ಲಿ ಮದ್ಯಾಹ್ನ 12 ಗಂಟೆಗೆ ಬ್ಯಾಟಿಗಿಡ, ರಾತ್ರಿ ಎಂಟು ಗಂಟೆಗೆ ಮುಳ್ಳು ಪಲ್ಲಕ್ಕಿ ಅಗ್ನಿ ಕೊಂಡ ಹಾಯುವದು ಹಾಗೂ ನೀರಿನ ಕೊಂಡ ಹಾರುವುದು ಮದ್ದು ಸುಡುವ ಕಾರ್ಯಕ್ರಮ ಇರುತ್ತದೆ ರಾತ್ರಿ 10ಕ್ಕೆ ಗರತಿ ಹೆಣ್ಣಿಗೆ ಗರ್ವದ ಗಂಡ ಎಂಬ ನಾಟಕ ಪ್ರದರ್ಶನ ಇದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.