ಮಲೆನಾಡಿನ ವೈಭವ ಹೆಚ್ಚು ಮಾಡಿದ ಕಾಫಿಯ ಹೂವಿನ ಕಂಪು

KannadaprabhaNewsNetwork |  
Published : May 02, 2024, 12:24 AM ISTUpdated : May 02, 2024, 12:14 PM IST
ಕಾಫಿಯ ತೋಟದಲ್ಲಿ ಗಿಡಗಳ ತುಂಭಾ ಅರಳಿರುವ ಹೂವುಗಳು. | Kannada Prabha

ಸಾರಾಂಶ

ಮಲೆನಾಡಿನ ತಂಪಿಗೆ ಕಾಫಿ ಹೂವಿನ ಕಂಪು ಬೆರೆತು ವಾತಾವರಣ ಮತ್ತಷ್ಟು ಆಹ್ಲಾದವಾಗಿದೆ. ಈ ಬಾರಿಯ ಬೇಸಿಗೆ ಯಲ್ಲಿ ಬಿದ್ದ ಮಳೆ ಹೂ ಅರಳಿಸಿ ಕಾಫಿ ತೋಟಗಳ ಕಳೆ-ವೈಭವ ಹೆಚ್ಚಿಸಿದೆ. 

 ಚಿಕ್ಕಮಗಳೂರು : ಮಲೆನಾಡಿನ ತಂಪಿಗೆ ಕಾಫಿ ಹೂವಿನ ಕಂಪು ಬೆರೆತು ವಾತಾವರಣ ಮತ್ತಷ್ಟು ಆಹ್ಲಾದವಾಗಿದೆ. ಈ ಬಾರಿಯ ಬೇಸಿಗೆ ಯಲ್ಲಿ ಬಿದ್ದ ಮಳೆ ಹೂ ಅರಳಿಸಿ ಕಾಫಿ ತೋಟಗಳ ಕಳೆ-ವೈಭವ ಹೆಚ್ಚಿಸಿದೆ. ಹಾದಿ ಸಾಗಿದಲ್ಲೆಲ್ಲಾ ಮನವನ್ನು ಮುದ ಗೊಳಿಸುವ ಕಾಫಿ ಹೂವಿನ ಸುಗಂಧ ಯಾವುದೋ ಲೋಕದಲ್ಲಿ ನಾವಿರುವಂತೆ ಭಾಸಗೊಳಿಸುತ್ತದೆ. 

ತೋಟಗಳಲ್ಲಿ ಅರಳಿ ಘಮ್ಮಿಡುತ್ತಿರುವ ಹೂಗಳಿಂದ ಜಿಲ್ಲೆಗೆ ಬರುವ ಪ್ರವಾಸಿಗರನ ಕಣ್ಣಿಗೆ ಆನಂದವೂ ಆನಂದ ಉಂಟಾಗಿದೆ.ಸಾಮಾನ್ಯವಾಗಿ ಕಾಫಿ ತೋಟ ಹೆಚ್ಚಾಗಿರುವ ಮಲೆನಾಡಿನ ಭಾಗದಲ್ಲಿ ಬೆಳೆಗಾರರು ಬೇಸಿಗೆ ಆರಂಭಕ್ಕೂ ಮುನ್ನವೇ ಕಾಫಿ ಕೊಯ್ಲನ್ನು ಮುಗಿಸಿಕೊಂಡು. ಮುಂದಿನ ಬೆಳೆಗೆ ಪೂರಕವಾದ ಹದಗಾರಿಕೆ ಪ್ರಕ್ರಿಯೆಯಲ್ಲಿ ತೊಡಗುತ್ತಾರೆ. ಬೆಳೆಗೆ ಅಗತ್ಯವಿರುವ ನೀರನ್ನು ಸ್ಪ್ರಿಂಕ್ಲರ್ ಮೂಲಕ ಪೂರೈಸುವಂತದ್ದು ಈ ಹಂತದ ಸಾಮಾನ್ಯ ಪ್ರಕ್ರಿಯೆ. 

ಇದಕ್ಕೆ ಲಕ್ಷಾಂತರ ಹಣ ಖರ್ಚು ಮಾಡಬೇಕಾಗುತ್ತದೆ. ಇದೇ ವೇಳೆ ಮಳೆ ಸುರಿಯಿತೆಂದರೆ ಬೆಳೆಗಾರನಿಗೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಒಂದೆರೆಡು ಬಾರಿ ಮಳೆ ಹೊಯ್ಯಿತೆಂದರೆ ಬೆಳೆಯ ಇಳುವರಿ ಹಾಗೂ ಲಾಭದ ಲೆಕ್ಕಾಚಾರ ಆರಂಭ ವಾಗುತ್ತದೆ.ಇತ್ತೀಚೆಗೆ ಸುರಿದ ಮಳೆಗೆ ಕಾಫಿ ತೋಟಗಳಲ್ಲಿ ಹೂ ಅರಳಿ ನಿಂತಿದೆ. ಇದು ಮುಂದಿನ ವರ್ಷದ ಬೆಳೆಯನ್ನು ನಿರ್ಧಾರ ಮಾಡುತ್ತೆ, ತೋಟಗಳಲ್ಲಿ ಹೂ ಅರಳಿದ ಸಮಯದಲ್ಲಿ ಎರಡು, ಮೂರು ಸಲ ಮಳೆಯಾದ್ರೆ ಮುಂದಿನ ವರ್ಷ ಕಾಫಿ ಫಸಲು ಬಂಪರ್ ಆಗುತ್ತೆ ಎನ್ನುವ ಲೆಕ್ಕಾಚಾರ ಕಾಫಿ ಬೆಳೆಗಾರರಲ್ಲಿ ಇದೆ.

ಕಾಫಿ ತೋಟಗಳನ್ನು ಬಳಸಿಕೊಂಡು ಸಾಗುವ ಮಲೆನಾಡಿನ ರಸ್ತೆಗಳ ತುಂಬೆಲ್ಲಾ ಮೊಗ್ಗಿನ ಜಡೆಯಂತೆ ಕಾಫಿ ಹೂಗಳು ಗಿಡದ ತುಂಬೆಲ್ಲಾ ಬಳುಕುತ್ತಿವೆ. ಕಿ.ಮೀಗಟ್ಟಲೇ ಪಸರಿಸಿರುವ ಇದರ ಸುವಾಸನೆ ಈ ಮಾರ್ಗದಲ್ಲಿ ಸಾಗುವ ಎಂಥ ವರನ್ನೂ ಒಂದು ಕ್ಷಣ ಕುತೂಹಲದಿಂದ ನಿಂತು ಇದರ ಆನಂದವನ್ನು ಆಸ್ವಾದಿಸುವಂತೆ ಮಾಡುತ್ತದೆ.ಉತ್ತಮ ಫಸಲಿನ ಭವಿಷ್ಯ ಹೇಳುವ ಈ ಕಾಫಿ ಹೂಗಳ ಅರಳುವಿಕೆ ಬೆಳೆಗಾರನನ್ನು ಹಿಗ್ಗುವಂತೆ ಮಾಡಿದರೆ, ನೋಡು ಗರಿಗೆ ಹಾಗೂ ಪ್ರಕೃತಿ ಪ್ರಿಯರಿಗೆ ವಿಶೇಷ ಅನುಭವ ನೀಡುತ್ತದೆ. ಗಿಡಗಳ ತುಂಬೆಲ್ಲಾ ಮಲ್ಲಿಗೆಯಂತೆ ಅರಳಿ ನಿಂತಿರೋ ಕಾಫಿ ಹೂವುಗಳನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ, ಜೊತೆಗೆ ಝೇಂಕರಿಸುತ್ತಾ ಸುಮಗಳಿಂದ ಮಕರಂದ ಹೀರುತ್ತಿರೋ ದುಂಬಿಗಳ ನಿನಾದ ಪ್ರವಾಸಿಗರ ಜೊತೆಗೆ ಸ್ಥಳೀಯರನ್ನ ಅರೆಕ್ಷಣ ಮಂತ್ರ ಮುಗ್ದರನ್ನಾಗಿಸುತ್ತಿದೆ.

ಮಲೆನಾಡ ತಣ್ಣನೆ ವಾತಾವರಣದೊಂದಿಗೆ ಶ್ವೇತ ಪುಷ್ಪಗಳ ಚೆಲುವು, ಒಲವಿನ ಚಿತ್ತಾರವನ್ನೇ ಬಿಡಿಸಿದಂತಿದ್ದು ಕಾಫಿಯ ಪರಿಮಳ ನಿಜಕ್ಕೂ ಪರಿಸರ ಪ್ರಿಯರಿಗೆ ವಿಶೇಷ ಅನ್ನಿಸ್ತಿದೆ. ಇನ್ನೊಂದೆಡೆ ಹೂವುಗಳ ಅರಳಿವಿಕೆಗಾಗಿ ಕಾದಿದ್ದ ಜೇನು ನೋಣಗಳು ಮಕರಂದ ಹೀರಲು ತೋಟಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಜಿಲ್ಲೆಯ ಮಲೆನಾಡು ಭಾಗದ ರಸ್ತೆಗಳ ಇಕ್ಕೆಲಗಳಲ್ಲಿನ ಕಾಫಿ ತೋಟಗಳಲ್ಲಿ ಮಲ್ಲಿಗೆಯಂತೆ ಅರಳಿರೋ ಕಾಫಿಯ ಹೂವುಗಳು ಜನರನ್ನ ತನ್ನತ್ತ ಸೆಳೆಯುತ್ತಿವೆ.ಪೋಟೋ ಫೈಲ್‌ ನೇಮ್‌ 1 ಕೆಸಿಕೆಎಂ 5ಕಾಫಿಯ ತೋಟದಲ್ಲಿ ಗಿಡಗಳ ತುಂಭಾ ಅರಳಿರುವ ಹೂವುಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

15 ದಿನದ ಹಿಂದೆ ಮದುವೆ ಆಗಿದ್ದ ಜೋಡಿ ಭೀಕರ ಅಪಘಾತಕ್ಕೆ ಬಲಿ
ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌