ಕೊಪ್ಪಳ: ಕೊಪ್ಪಳ ನಗರವನ್ನು ರಾಜ್ಯದಲ್ಲೇ ಮಾದರಿ ನಗರವನ್ನಾಗಿ ರೂಪಿಸುವುದು ತಮ್ಮ ಗುರಿಯಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.
ನಗರದ 11 ವಾರ್ಡ್‌ಗಳಲ್ಲಿ ನಗರೋತ್ಥಾನ ಯೋಜನೆಯಡಿ ₹9.05 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗಿದೆ. ಸಮುದಾಯ ಭವನ ನಿರ್ಮಾಣಕ್ಕೆ ಸಮೀಕ್ಷೆ ನಡೆಸಿ ಹಂತ ಹಂತವಾಗಿ ಅನುದಾನ ನೀಡಲಾಗುವುದು. ಮೋತಿ ಕೆರೆ ಮತ್ತು ಹಂದಿ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಕೊಪ್ಪಳ ಕೋಟೆ ಸಂರಕ್ಷಣೆಗೂ ಕಾಮಗಾರಿ ಆರಂಭಿಸಲಾಗಿದೆ ಎಂದರು.
ಕೊಪ್ಪಳ–ಭಾಗ್ಯನಗರಕ್ಕೆ 24x7 ಕುಡಿಯುವ ನೀರು ಪೂರೈಸುವ ₹145 ಕೋಟಿ ಯೋಜನೆಯ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದೆ. ಭಾಗ್ಯನಗರದ 7,800 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಕೊಪ್ಪಳ ನಗರದಲ್ಲೂ ₹80 ಕೋಟಿ ವೆಚ್ಚದಲ್ಲಿ ಪ್ರತಿ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.ಕೊಪ್ಪಳ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಬಹದ್ದೂರ್‌ಬಂಡಿ, ಅಳವಂಡಿ–ಬೆಟಗೇರಿ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಗಳ ಮೂಲಕ ನೀರಾವರಿ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೊಪ್ಪಳ ಕೋಟೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ₹1.50 ಕೋಟಿ ಅನುದಾನ ನೀಡಲಾಗಿದೆ. ಇತಿಹಾಸ, ಪರಂಪರೆ ಹಾಗೂ ಸಾಂಸ್ಕೃತಿಕ ಹೆಗ್ಗುರುತುಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ಎಲ್ಲರ ಜವಾಬ್ದಾರಿ ಎಂದರು.