ಕನಕಪುರ: ಹಾಲು ಉತ್ಪಾದಕ, ಗ್ರಾಹಕ ಹಾಗೂ ಹಾಲು ಒಕ್ಕೂಟದ ಸಿಬ್ಬಂದಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದೇ ನನ್ನ ಗುರಿ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ತಾಲೂಕು ಹಾಲು ಉತ್ಪಾದಿಸುವ ರೈತರು ಗುಣಮಟ್ಟದಿಂದ ಕೂಡಿದ 4 ಲಕ್ಷ ಲೀಟರ್ ಉತ್ಪಾದನೆ ಮಾಡಿದಲ್ಲಿ, ರೈತರಿಗೆ ಹೆಚ್ಚಿನ ದರ ನೀಡಲು ಅನುಕೂಲವಾಗುವುದಾಗಿ ತಿಳಿಸಿದರು. ಬೆಂಗಳೂರು ಹಾಲು ಒಕ್ಕೂಟ ಲಾಭ ಗಳಿಸಬೇಕಾದರೆ ರೈತರ, ಗ್ರಾಹಕರ ಸಹಕಾರ ಅಗತ್ಯ, ನಂದಿನಿ ಉತ್ಪನ್ನಗಳನ್ನೇ ಜನ ಕೊಂಡುಕೊಳ್ಳುವ ರೀತಿ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಇದಕ್ಕೆ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕರಿಸಿದಾಗ ಒಕ್ಕೂಟ ಲಾಭ ಗಳಿಸುವುದರಲ್ಲಿ ಸಂದೇಹವಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿ ಮಾತನಾಡಿ, ತಾಲೂಕಿನ ಜನ ಡಿ.ಕೆ.ಸುರೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವುದರ ಮೂಲಕ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಹಾಲು ಉತ್ಪಾದಕರ ಸಂಕಷ್ಟ ಅರಿತಿರುವ ಅವರ ಅಧ್ಯಕ್ಷತೆಯಲ್ಲಿ ಹಾಲು ಒಕ್ಕೂಟದ ಲಾಭದಾಯಕವಾಗಿ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ತಾಲೂಕು ಗ್ಯಾರಂಟಿ ಅಧ್ಯಕ್ಷ ಕೆ.ಎನ್.ದಿಲೀಪ್, ಬೆಂಗಳೂರು ಹಾಲು ಒಕ್ಕೂಟದ ಪದಾಧಿಕಾರಿಗಳು ಆರ್‌ಇಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಜಿಪಂ ಮಾಜಿ ಅಧ್ಯಕ್ಷರಾದ ಬಸಪ್ಪ, ನಟೇಶ್, ರಾಜಕುಮಾರ್ ಸೇರಿದಂತೆ ಅನೇಕ ಮುಖಂಡರು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 02:ಕನಕಪುರ ತಾಲೂಕಿನ ಶಿವನಹಳ್ಳಿ ಮೆಗಾ ಡೈರಿ ಸಭಾಂಗಣದಲ್ಲಿ ಆಯೋಜಿಸಿದ್ದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕೃತಜ್ಞತಾ ಹಾಗೂ ಸಮಾಲೋಚನಾ ಸಭೆ ನಡೆಯಿತು.