ಕನ್ನಡಪ್ರಭ ವಾರ್ತೆ ಹಿರಿಯೂರು
ರಾಜ್ಯದಲ್ಲಿ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯಗಳಲ್ಲಿನ ಬಡತನ ರೇಖೆಗಿಂತ ಕೆಳಗಿನ ಶೋಷಿತರನ್ನು ಗುರುತಿಸಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಅಭಿವೃದ್ಧಿಯತ್ತ ಕೊಂಡೊಯ್ಯಲು ಅಹಿಂದ ಚಳುವಳಿ ಸ್ಥಾಪಿತಗೊಂಡಿದೆ ಎಂದು ಅಹಿಂದ ಚಳುವಳಿ ಸಂಸ್ಥಾಪಕ ಹಾಗೂ ಮುಖ್ಯ ಸಂಚಾಲಕ ಎಸ್.ಮೂರ್ತಿ ಹೇಳಿದರು.ನಗರದ ವೇದಾವತಿ ಬಡಾವಣೆಯ ಅಂಬೇಡ್ಕರ್ ಭವನದಲ್ಲಿ ಭಾನುವಾರ ಅಹಿಂದ ಚಳುವಳಿಯ ಬೆಂಗಳೂರು ವಿಭಾಗೀಯ ಮಟ್ಟದ ಪದಾಧಿಕಾರಿಗಳ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಗ್ರಾಮ, ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಹಿಂದ ಕಾರ್ಯಕರ್ತರನ್ನು ಗುರುತಿಸಿ ಪ್ರತ್ಯೇಕ ಸಮಿತಿ ರಚಿಸುವುದು. ಅಲ್ಲದೇ ಪ್ರತಿ ಜೆಲ್ಲೆ ಹಾಗೂ ವಿಭಾಗವಾರು ಶಿಬಿರ ನಡೆಸಿ ಭಾರತ ಸಂವಿಧಾನ, ಶೋಷಿತರ ಕಲ್ಯಾಣ, ದೌರ್ಜನ್ಯ ರಕ್ಷಣೆ, ಕಾನೂನು ಅರಿವು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಂತಹ ವಿಷಯಗಳ ಕುರಿತು ಅರಿವು ಮೂಡಿಸುವುದು. ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೊಡಿಸುವುದು ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.ಅಲ್ಲದೇ ಭೂ ರಹಿತ ಮತ್ತು ವಸತಿ ರಹಿತರ ಸಮಾವೇಶ, ದಾರ್ಶನಿಕರ ಆದರ್ಶ ಮೂಡಿಸುವುದು, ಅಹಿಂದ ಸಹಕಾರಿ ಬ್ಯಾಂಕ್ ಸ್ಥಾಪಿಸುವುದು, ನಿರುದ್ಯೋಗಿಗಳಿಗೆ ಉದ್ಯೋಗ ಜಾಹೀರಾತು ಮೂಲಕ ಮಾಹಿತಿ ನೀಡುವುದು ಮುಂತಾದ ಕಾರ್ಯ ಯೋಜನೆಗಳ ಮೂಲಕ ಸರ್ವರಿಗೂ ಸಮಪಾಲು- ಸಮಬಾಳು ತತ್ವದಡಿ ದೇಶದ ಸಂಪತ್ತು, ಅಧಿಕಾರ ಹಾಗೂ ಆರ್ಥಿಕ ಸಂಪತ್ತು ಹಂಚಿಕೆಯಾಗಲು ಜಾಗೃತಿ ಮೂಡಿಸುವುದು. ಆ ಮೂಲಕ ಜಾತ್ಯಾತೀತ ಮತ್ತು ಸಮ ಸಮಾಜದ ರಾಷ್ಟ್ರ ನಿರ್ಮಾಣದ ಗುರಿಯನ್ನು ಅಹಿಂದ ಚಳುವಳಿ ಹೊಂದಿದೆ ಎಂದರು.
ಅoಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಅಹಿಂದ ಚಳುವಳಿ ಜಾತಿ ಮೀರಿದ ಚಳುವಳಿಯಾಗಬೇಕು. ಪ್ರತಿ ಜಾತಿಯಲ್ಲಿ ಹಲವು ಸಂಘಟನೆಗಳಿದ್ದು, ಅವುಗಳು ಆರಂಭದಲ್ಲಿ ಆಯಾ ಜಾತಿಯಲ್ಲಿನ ಶೋಷಣೆ ತಡೆಯುವುದು ಅನಿವಾರ್ಯವಾಗಿದರೂ ಅಂತ್ಯದಲ್ಲಿ ಜಾತಿಯನ್ನು ಗಟ್ಟಿಗೊಳಿಸುತ್ತದೆ. ಇದರಿಂದ ಜಾತಿ, ಮತ, ಧರ್ಮ ಗಟ್ಟಿಯಾಗುತ್ತದೆ. ಆದ್ದರಿಂದ ಜಾತಿ ಸಂಘಗಳನ್ನು ಕಟ್ಟುವಾಗ ಜಾತಿ ವಿನಾಶಕ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.80 ರ ದಶಕದಲ್ಲಿಯೇ ದಲಿತ, ರೈತ ಚಳುವಳಿಗಳು ಹೋರಾಟದ ಮಹತ್ವ ತಿಳಿಸಿ ಕೊಟ್ಟಿವೆ. ಮತ್ತೆ ನಾವು ಚಳುವಳಿ ಕಟ್ಟಬೇಕಾಗಿಲ್ಲ. ಬುದ್ದ, ಬಸವ ದಾರ್ಶನಿಕರು ಪರಿಚಯವಾಗಿದ್ದಾರೆ. ಆದರೆ ಪ್ರಸ್ತುತ ಶೋಷಿತ ಸಮಾಜಕ್ಕೆ ಆರ್ಥಿಕವಾಗಿ ಸದೃಢವಾಗುವಂತೆ ಮಾಡುವ ಮೂಲಕ ಆರ್ಥಿಕ ಸಬಲೀಕರಣವಾಗಬೇಕು. ಜಾತಿ ವಿನಾಶಕ ತತ್ವಗಳನ್ನು ಬೆಳೆಸಿ ಕೊಳ್ಳಬೇಕು. ಮೌಡ್ಯದ ಆಚರಣೆಗಳನ್ನು ನಾಶಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ವೆಂಕಟೇಶ್ ಗೌಡ, ಅಶೋಕ್ ಕುಮಾರ್, ದಾಸ್ ಪ್ರಕಾಶ್, ಪ್ರಜ್ವಲ್‌ಸ್ವಾಮಿ, ಆರ್.ಸುರೇಂದ್ರ, ಬಿ.ಪಿ.ಪ್ರೇಮ್‌ನಾಥ್, ಮಹಮೂದ್, ರಾಜ್ಯ ಖಚಾಂಜಿ ಎಸ್.ನಾಗರಾಜು, ತಾಲೂಕು ಮುಖಂಡರಾದ ಹುಚ್ಚವ್ವನಹಳ್ಳಿ ವೆಂಕಟೇಶ್, ತುರುವನೂರು ಜಗನ್ನಾಥ್, ವಕೀಲ ಟಿ.ಧೃವ ಕುಮಾರ್, ರಾಘವೇಂದ್ರ, ಶಿವಶಂಕರ್ ಮುಂತಾದವರು ಉಪಸ್ಥಿತರಿದ್ದರು.