ವ್ಯಸನಮುಕ್ತ ಸಮಾಜ ನಿರ್ಮಾಣದ ಗುರಿ ಇರಲಿ: ನ್ಯಾ.ಗೀತಾ

KannadaprabhaNewsNetwork |  
Published : Jan 22, 2024, 02:21 AM IST
ಚಿತ್ರ:ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಅಬಕಾರಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ನಡೆದ ಎನ್.ಡಿ.ಪಿ.ಎಸ್.ಕಾಯ್ದೆ ಕುರಿತು ಕಾರ್ಯಾಗಾರವನ್ನು ನ್ಯಾಯಾಧೀಶೆ ಗೀತಾ ಉದ್ಘಾಟಿಸಿದರು. | Kannada Prabha

ಸಾರಾಂಶ

ಭವಿಷ್ಯದ ಪ್ರಜೆಗಳಾದ ಮಕ್ಕಳು ಹಾಗೂ ಯುವ ಸಮುದಾಯ ಮಾದಕ ವ್ಯಸನಗಳಿಗೆ ತುತ್ತಾಗುತ್ತಿದೆ. ಅದನ್ನು ತಡೆಗಟ್ಟುವುದರ ಕಡೆಗೆ ಗಮನ ಇರಬೇಕು. ಉತ್ತಮ ಸಮಾಜ ಮತ್ತು ಉತ್ತಮ ದೇಶದ ನಿರ್ಮಾಣ ಗುರಿಯಾಗಿರಬೇಕು.

ಚಿತ್ರದುರ್ಗ: ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಗುರಿಯೊಂದಿಗೆ ಕೆಲಸ ಮಾಡಬೇಕು ಎಂದು ಜಿಲ್ಲಾ ನ್ಯಾಯಾಧೀಶೆ ಕೆ.ಜಿ. ಗೀತಾ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಅಬಕಾರಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಎನ್‌ಡಿಪಿಎಸ್‌ ಕಾಯ್ದೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಉಪನ್ಯಾಸ ನೀಡಿದರು.

ಭವಿಷ್ಯದ ಪ್ರಜೆಗಳಾದ ಮಕ್ಕಳು ಹಾಗೂ ಯುವ ಸಮುದಾಯ ಮಾದಕ ವ್ಯಸನಗಳಿಗೆ ತುತ್ತಾಗುತ್ತಿದೆ. ಅದನ್ನು ತಡೆಗಟ್ಟುವುದರ ಕಡೆಗೆ ಗಮನ ಇರಬೇಕು. ಉತ್ತಮ ಸಮಾಜ ಮತ್ತು ಉತ್ತಮ ದೇಶದ ನಿರ್ಮಾಣ ಗುರಿಯಾಗಿರಬೇಕು ಎಂದರು.

1985ರಲ್ಲಿ ಎನ್‍ಡಿಪಿಎಸ್ ಕಾಯ್ದೆ ಪ್ರಾರಂಭ ಮಾಡಲಾಯಿತು. ಕಾಯ್ದೆ ಬರುವ ಸಂದರ್ಭದಲ್ಲಿ 1985ನೇ ಸಾಲಿನಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಯಿತು. ಅಂದಿನ ಯುವ ಜನತೆ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳಿಗೆ ದಾಸರಾಗಿದ್ದರು. ಆಗಷ್ಟೇ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳು ಪ್ರಾರಂಭವಾಗಿದ್ದವು. ಇವುಗಳು ಪ್ರಾರಂಭದ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆ, ತಾಲೂಕು, ರಾಜ್ಯಗಳಿಂದ ಆಗಮಿಸಿ, ಹಾಸ್ಟೆಲ್, ಪಿಜಿಯಲ್ಲಿರುವ ವ್ಯವಸ್ಥೆ ಪ್ರಾರಂಭವಾಯಿತು.

ಈ ಹದಿಹರೆಯ ವಿದ್ಯಾರ್ಥಿಗಳಿಗೆ ಯಾವುದೇ ಸರಿ, ತಪ್ಪು ಎಂಬ ತಿಳುವಳಿಕೆ ಇಲ್ಲದೇ ಇರುವ ಸಂದರ್ಭದಲ್ಲಿ ಬಹಳ ಬೇಗ ಗಾಂಜಾ ಸೇರಿದಂತೆ ಇತರೆ ಮಾದಕ ವ್ಯಸನಗಳಿಗೆ ತುತ್ತಾಗುವ ಸಂದರ್ಭ ಹೆಚ್ಚಾಗಿ ಇತ್ತು. ಹಾಗಾಗಿ ಇದನ್ನು ಗಮನಿಸಿ, ಎನ್‍ಡಿಪಿಎಸ್ ಕಾಯ್ದೆ ವಿಶೇಷವಾಗಿ ಜಾರಿಗೆ ತರಲಾಯಿತು. 1988ರಲ್ಲಿ, 2010 ಹಾಗೂ 2014ರಲ್ಲಿ ಹೀಗೆ 3 ಬಾರಿ ಈ ಕಾಯ್ದೆ ತಿದ್ದುಪಡಿಯಾಗಿದೆ. ತಿದ್ದುಪಡಿಯಾದ ನಂತರವೂ ಹಾಗೂ ಪ್ರಾರಂಭದಿಂದಲೂ ಎನ್‍ಡಿಪಿಎಸ್ ಕಾಯ್ದೆಯಲ್ಲಿ ವಿಶೇಷ ಅಧಿಕಾರಗಳನ್ನು ತನಿಖಾಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳ ಕಾಲ ಡಿಜಿಟಲ್‌ ಯುಗವಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಬಂದ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಎನ್‍ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರತಿಯೊಂದು ಇಲಾಖೆಯು ಸಹಾಯ, ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೆ ವಿಳಂಬ ಮಾಡಬಾರದು ಎಂದರು.

ಕಾರ್ಯಕ್ರಮದಲ್ಲಿ ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಬೆಂಗಳೂರು ಮಹಾದೇವಪುರ ಅಬಕಾರಿ ನಿರೀಕ್ಷಕ ಅಬುಬಕರ್ ಮುಜಾವರ್ ಸೇರಿದಂತೆ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ