ಬ್ಯಾಡಗಿ: ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಡಿ ಜಾಕ್‌ವೆಲ್‌ನ ಟ್ರಾನ್ಸಫಾರ್ಮರ್ (ಟಿಸಿ) ದುರಸ್ತಿಪಡಿಸಲು ಅಗತ್ಯವಿರುವ 22 ಲಕ್ಷ ರು. ರಾಜ್ಯ ಸರ್ಕಾರದ ಬಳಿ ಇಲ್ಲ, ಇಂತಹ ರೈತ ವಿರೋಧಿ ಸರ್ಕಾರದಿಂದ ರೈತರ ಅಭಿವೃದ್ಧಿಯೂ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ನಿಮ್ಮದೇ ಯೋಜನೆ ನಿರ್ಲಕ್ಷ್ಯ: ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅನುಷ್ಠಾನಗೊಂಡಿತ್ತು. ಯೋಜನೆಗಾಗಿ ನೂರಾರು ಕೋಟಿ ರು. ವ್ಯಯಿಸಿದರೂ, ಯೋಜನೆಯ ಮೂಲ ಉದ್ದೇಶ ಈಡೇರಿಲ್ಲ, ಸುತ್ತಮುತ್ತಲಿನ ಗ್ರಾಮಗಳ ಕೆರೆಗಳನ್ನು ತುಂಬಿಸುವ ಕೆಲಸ ಸಮರ್ಪಕವಾಗಿ ನಡೆದಿಲ್ಲ. ಇದರಿಂದ ರೈತರಿಗೆ ಯಾವುದೇ ಶಾಶ್ವತ ಪ್ರಯೋಜನ ದೊರಕಿಲ್ಲ, ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ ಅಂತರ್ಜಲಮಟ್ಟ ಹೆಚ್ಚಾಗಿ, ಬರಗಾಲದಂತಹ ಸಂಕಷ್ಟದ ಸಂದರ್ಭದಲ್ಲೂ ರೈತರು ನೀರಿನ ಕೊರತೆ ಸುಲಭವಾಗಿ ಎದುರಿಸಬಹುದಾಗಿತ್ತು ಎಂದರು.
ಟಿಸಿ ಹಾಳಾಗಿ 2 ತಿಂಗಳು:ಯೋಜನೆ ಪ್ರಮುಖ ಭಾಗವಾಗಿರುವ ಟ್ರಾನ್ಸಫಾರ್ಮರ್ 2 ತಿಂಗಳ ಹಿಂದೆ ಸುಟ್ಟು ಹೋಗಿದ್ದು, ಇದುವರೆಗೆ ಹೊಸ ಟಿಸಿ ಅಳವಡಿಸುವ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಕೇವಲ 22 ಲಕ್ಷ ವೆಚ್ಚ ದಲ್ಲಿ ಸಮಸ್ಯೆ ಬಗೆಹರಿಸಬಹುದಾದರೂ ಸರ್ಕಾರ ನೀರಾವರಿ ಇಲಾಖೆಗೆ ಹಣ ಬಿಡುಗಡೆ ಮಾಡದಿರುವುದು ರೈತರ ಮೇಲಿನ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇದರಿಂದ ನೀರಾವರಿ ಸ್ಥಗಿತಗೊಂಡಿರುವುದರಿಂದ ನೂರಾರು ಎಕರೆ ಪ್ರದೇಶದ ರೈತರು ಬೆಳೆಗಳಿಗೆ ನೀರು ಒದಗಿಸಲು ಪರದಾಡುವಂತಾಗಿದೆ ಎಂದು ಆರೋಪಿಸಿದರು.ಕಾಲುವೆ ಮಳೆಗಾಲದಲ್ಲಷ್ಟೇ ನೆನಪು: ಯೋಜನೆಗೆ ಸಂಬಂಧಿಸಿದ ನೀರು ಹರಿಸುವ ಕಾಲುವೆಗಳು ಹೂಳಿನಿಂದ ತುಂಬಿದ್ದು ಹಲವೆಡೆ ಗಿಡಗಂಟಿಗಳು ಬೆಳೆದು ನೀರು ಹರಿಯಲು ಅಡ್ಡಿಯಾಗಿವೆ. ಯುಟಿಪಿ ಇಲಾಖೆ ಅಧಿಕಾರಿಗಳು ವರ್ಷ ಪೂರ್ತಿ ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ಮರೆತು, ಮಳೆಗಾಲ ಆರಂಭದ ಬಳಿಕ ಮಾತ್ರ ಕಾಲುವೆಗಳ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ಏಪ್ರಿಲ್, ಮೇ ತಿಂಗಳಲ್ಲೇ ಹೂಳು ತೆರವು ಕಾಮಗಾರಿ ನಡೆಸಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಕಿಡಿಕಾರಿದರು.
ಈ ವೇಳೆ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ವಿನಯ ಹಿರೇಮಠ, ಜಗದೀಶ ಕಣಗಲಬಾವಿ, ಉಮೇಶ ರಟ್ಟಿಹಳ್ಳಿ, ಶಿವಾನಂದ ಕಡಗಿ, ಈರಪ್ಪ ಶಿಗ್ಗಾವಿ, ನಿಂಗನಗೌಡ ಪಾಟೀಲ, ಶಾಂತಪ್ಪ ದೊಡ್ಮನಿ, ಚಂದ್ರಣ್ಣ ಗೂಳೇರ, ಸುರೇಶ ಕಳ್ಳಿಮನಿ, ಕರಿಯಪ್ಪ ಜಾಡರ, ವೀರಭದ್ರಪ್ಪ ಗೊಡಚಿ, ಕೆಂಪೇಗೌಡ ಸೇರಿದಂತೆ ಬಿಜೆಪಿ ಮುಖಂಡರು ಸ್ಥಳೀಯ ರೈತರು ಉಪಸ್ಥಿತರಿದ್ದರು.