ಸರ್ವ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧ

KannadaprabhaNewsNetwork |  
Published : Sep 13, 2026, 02:00 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ವಿವಿಧ ಸಮುದಾಯಗಳ ಭವನ ನಿರ್ಮಾಣಕ್ಕೆ 4 ಕೋಟಿ ರು. ಹಾಗೂ ಹೋಬಳಿ ಮಟ್ಟದ ಯೋಜನೆಗಳಿಗೆ ತಲಾ 75 ಲಕ್ಷ ರು. ಅನುದಾನ ಒದಗಿಸಲಾಗುವುದು. ಅಗತ್ಯವಿರುವ ಸುಮಾರು 20 ಪಂಚಾಯಿತಿಗಳಲ್ಲಿ ಅಂಬೇಡ್ಕರ್ ಭವನ ಸೇರಿದಂತೆ ವಿವಿಧ ಸಮುದಾಯ ಭವನಗಳನ್ನು ತಲಾ 20 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯೂರು ಶಾಸಕರು ಹಾಗೂ ಸಚಿವರಾಗಿದ್ದ ಡಿ.ಸುಧಾಕರ್ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದರು. ಆದರೆ ಅವರ ಅಗಲಿಕೆಯಿಂದಾಗಿ ಹಲವು ಕೆಲಸಗಳು ಅಪೂರ್ಣಗೊಂಡಿವೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಅವರು ಕನಸು ಕಂಡಿದ್ದ ಎಲ್ಲಾ ಯೋಜನೆಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು. ಅಪೂರ್ಣ ಗೊಂಡಿರುವ ಸಮಾಜ ಕಲ್ಯಾಣ ಇಲಾಖೆಯ ಕಾಮಗಾರಿಗಳು ಹಾಗೂ ಹಳೆಯ ವಸತಿ ಶಾಲೆಗಳ ಸುಧಾರಣೆ ಹಾಗೂ ನವೀಕರಣದ ಜೊತೆಗೆ ಕ್ಷೇತ್ರಕ್ಕೆ ಒಂದೆರಡು ಹೊಸ ವಸತಿ ಶಾಲೆಗಳನ್ನು ಮಂಜೂರು ಮಾಡಲು ಪರಿಶೀಲಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿದ್ದು ಇವರೊಂದಿಗೆ ಯಾದವ, ಒಕ್ಕಲಿಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಸೇರಿದಂತೆ ಎಲ್ಲ ವರ್ಗಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ನೇರ ಸಾಲ ಹಾಗೂ ವಾಹನ ಖರೀದಿಗೆ ಸಾಲ ಸೌಲಭ್ಯ ಒದಗಿಸುವ ಅರ್ಜಿಗಳಿಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ವಯಂ ಉದ್ಯೋಗ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಹಿರಿಯೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಜಗಜೀವನ್ ರಾಮ್ ಭವನ ಸೇರಿದಂತೆ ಇಲಾಖೆಯ ಇತರ ಕಟ್ಟಡಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಲಾಗುವುದು.ರಾಜ್ಯದಲ್ಲಿ ಯುವಜನರ ಸಬಲೀಕರಣ ಮತ್ತು ರೈತರ ಏಳಿಗೆಗಾಗಿ ಸರ್ಕಾರ ಹಲವು ಪ್ರಗತಿಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.ಯುವಜನರಿಗೆ ಪ್ರೋತ್ಸಾಹ ನೀಡಲು ಭಾರತ್ ಜೋಡೋ ಸಂಘಗಳ ಮೂಲಕ ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಯುವಜನರನ್ನು ತೊಡಗಿಸಲು ಪ್ರತಿ ಪಂಚಾಯಿತಿಗೆ ರು. 10 ಲಕ್ಷದವರೆಗೆ ಅನುದಾನ ಮೀಸಲಿಡಲಾಗಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರ ನೆರವಿಗೆ ಸರ್ಕಾರ ಮುಂದಾಗಿದ್ದು ‘ನೇಗಿಲ ಯೋಗಿ’ ಯೋಜನೆಯಡಿ ಕೃಷಿ ಇಲಾಖೆಯ ನೇತೃತ್ವದಲ್ಲಿ ಉಚಿತವಾಗಿ ಭೂಮಿ ಉಳುಮೆ ಮಾಡಿಸಿಕೊಟ್ಟು ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.ಅಧಿಕಾರಿಗಳ ತಂಡದೊಂದಿಗೆ ಸಾರ್ವಜನಿಕರ ಮನೆಬಾಗಿಲಿಗೆ ತೆರಳಿ ಸೈಟು, ಮನೆ, ಖಾತೆ ಹಾಗೂ ಸಾಲ ಸೌಲಭ್ಯ ಸೇರಿದಂತೆ ವಿವಿಧ ಅರ್ಜಿಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ಪರಿಹರಿಸಲು ಪ್ರಜಾಸೇವಾ ಆಂದೋಲನದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯಾದ್ಯಂತ ಯುವಜನರಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಜಾಗೃತಿ ಮೂಡಿಸಲು ಯುವ ಸಂಸತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸೆ. 15ರ ಪ್ರಜಾಪ್ರಭುತ್ವ ದಿನದಿಂದ ಆರಂಭಗೊಳ್ಳುವ ಈ ಜಾಗೃತಿ ಅಭಿಯಾನವು ನವೆಂಬರ್ 26ರ ಸಂವಿಧಾನ ದಿನದವರೆಗೆ ನಿರಂತರವಾಗಿ ನಡೆಯಲಿದೆ.ಯುವ ಪೀಳಿಗೆಗೆ ದೇಶದ ಸ್ವಾತಂತ್ರ್ಯದ ಇತಿಹಾಸ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಿಕೊಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಅನುಭವ ಮಂಟಪದ ಪ್ರಜಾಸತ್ತಾತ್ಮಕ ಮಾದರಿಯನ್ನೇ ಆಧಾರವಾಗಿಟ್ಟುಕೊಂಡು ಯುವ ಸಂಸತ್ ಕಲ್ಪನೆಯನ್ನು ರೂಪಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಮಾತನಾಡಿ,ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನ ಮುಗಿದಿದೆ. 114 ಕಿಮೀ ಚಿತ್ರದುರ್ಗ ಬ್ರಾoಚ್ ಕೆನಾಲ್ ಮೂಲಕ ಭದ್ರಾ ನೀರು ಗೋನೂರು ಕೆರೆ ತಲುಪಿದೆ. ಚಿಕ್ಕಮಗಳೂರಿನ ಕಡೂರು ತರೀಕೆರೆ ಸೇರಿ 6 ತಾಲೂಕುಗಳ 80 ಕೆರೆ ತುಂಬಿಸಲಾಗುತ್ತಿದೆ. 3 ಟಿಎಂಸಿ ನೀರು ಹರಿದು ಬರಲಿದೆ. ರೈತ ಹೋರಾಟಗಾರರು, ಜನಪ್ರತಿನಿದಿನಗಳು, ಮಾಜಿ ಶಾಸಕರುಗಳು ನೀರಿಗಾಗಿ ಶ್ರಮಿಸಿದ್ದಾರೆ. ಬಿಜೆಪಿ ಘೋಷಣೆ ಮಾಡಿದ 5200 ಕೋಟಿ ಮಂಜೂರು ಆಗಬೇಕು. 367 ಕೆರೆ ತುಂಬಿಸುವ ಕೆಲಸ ಮಾಡುತ್ತೇವೆ. ಇದೇ 24ಕ್ಕೆ ಗೋನೂರು ಕೆರೆಯಲ್ಲಿ ಗಂಗಾ ಪೂಜೆ ಮಾಡಿ ಚಿತ್ರದುರ್ಗದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ,ತಾಜ್ ಪೀರ್, ಹಾಲೇಶ್, ಸುಹಾಸ್ ಸುಧಾಕರ್ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಉತ್ತಮ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು: ಪ್ರದೀಪ್
ವಿಕಸಿತ ಭಾರತ ಆನ್‌ಲೈನ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ