ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ : ಸಂಸದ ಜಗದೀಶ ಶೆಟ್ಟರ್

KannadaprabhaNewsNetwork | Updated : Mar 30 2025, 09:32 AM IST

ಸಾರಾಂಶ

ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸತ್ತು ಹೋಗಿದೆ. ಈ ಸರ್ಕಾರದ ಅಂತಿಮ ಯಾತ್ರೆ ಮಾಡುವುದೊಂದೇ ಬಾಕಿಯಿದೆ ಎಂದು ಸಂಸದ ಜಗದೀಶ ಶೆಟ್ಟರ ಲೇವಡಿ ಮಾಡಿದರು

ಹುಬ್ಬಳ್ಳಿ: ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸತ್ತು ಹೋಗಿದೆ. ಈ ಸರ್ಕಾರದ ಅಂತಿಮ ಯಾತ್ರೆ ಮಾಡುವುದೊಂದೇ ಬಾಕಿಯಿದೆ ಎಂದು ಸಂಸದ ಜಗದೀಶ ಶೆಟ್ಟರ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ಒಳಗೊಳಗೆ ನಿತ್ಯ ಗುದ್ದಾಟ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಹಿರಂಗವಾಗಿ ಹೇಳಿಕೆ ನೀಡದೇ ತಮ್ಮ ಬೆಂಬಲಿಗರ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ. ಹೀಗೆ ಮುಂದುವರಿದರೆ ಕೆಲವೇ ದಿನಗಳಲ್ಲಿ ಸರ್ಕಾರ ಬಿದ್ದುಹೋಗಲಿದೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಯ ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ನಿಂದ ನಿರ್ಧಾರ ಕೈಗೊಂಡಿದೆ. ನಾವೆಲ್ಲರೂ ಶಿಸ್ತಿನಿಂದ ನಡೆದುಕೊಳ್ಳಬೇಕಾಗುತ್ತದೆ. ವರಿಷ್ಟರು ಎಲ್ಲವನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಂಡಿರುತ್ತಾರೆ. ಯತ್ನಾಳ ಉಚ್ಚಾಟನೆ ಕುರಿತು ನಾನು ಯಾವುದೇ ರೀತಿಯ ಹೇಳಿಕೆ ನೀಡುವುದಿಲ್ಲ ಎಂದರು. ಶಾಸಕ ಎಸ್‌.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರಗೆ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ, ಈಗಾಗಲೇ ಈ ಇಬ್ಬರೂ ಶಾಸಕರಿಗೆ ನೋಟಿಸ್ ನೀಡಲಾಗಿದೆ. ಸಮಯ ಬಂದಾಗ ಖಂಡಿತ ಕ್ರಮ ಕೈಗೊಳ್ಳುತ್ತಾರೆ ಎಂದರು.

ದೊಡ್ಡವರ ಕೈವಾಡ

ಹನಿಟ್ರ್ಯಾಪ್ ಪ್ರಕರಣವನ್ನು ರಾಜ್ಯ ಸರ್ಕಾರ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಪ್ರಕರಣದಲ್ಲಿ ದೊಡ್ಡವರ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಹಿಂದೆ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಯಾರಿಗಾದರೂ ಶಿಕ್ಷೆಯಾಗಿರುವ ಉದಾಹರಣೆಗಳಿವೆಯೇ? ಹಾಗೆಯೇ ಈ ಹನಿಟ್ರ್ಯಾಪ್ ಪ್ರಕರಣದಲ್ಲಿ ಯಾವುದೇ ತನಿಖೆಯೂ ಆಗಲ್ಲ, ಶಿಕ್ಷೆಯೂ ಆಗುವುದಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಡೆ ಉಚಿತ ಯೋಜನೆ ನೀಡಿ ಮತ್ತೊಂದು ಕಡೆ ಬೆಲೆ ಏರಿಕೆಯ ಬರೆ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಆಡಳಿತದ ಮೇಲಿನ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ ಎಂದು ದೂರಿದರು.

ಗ್ಯಾರಂಟಿ ಮೂಲಕ ಜನರಿಗೆ ಉಚಿತ ಯೋಜನೆ ನೀಡುತ್ತಿರುವ ರಾಜ್ಯ ಸರ್ಕಾರ ರೈತರಿಗೂ ತಮ್ಮ ಖಜಾನೆಯಿಂದಲೇ ಲೀಟರ್‌ ಹಾಲಿಗೆ ₹4 ಪ್ರೋತ್ಸಾಹಧನ ನೀಡಲಿ. ಅದನ್ನು ಬಿಟ್ಟು ಜನಸಾಮಾನ್ಯರ ಮೇಲೆ ಏಕೆ ಬೆಲೆ ಏರಿಕೆಯ ಬರೆ ಹಾಕುತ್ತೀರಿ ಎಂದು ವಾಗ್ದಾಳಿ ನಡೆಸಿದರು.

Share this article