ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ : ಅಶೋಕ್‌

KannadaprabhaNewsNetwork |  
Published : Mar 11, 2026, 01:45 AM ISTUpdated : Mar 11, 2026, 11:39 AM IST
R Ashok

ಸಾರಾಂಶ

ಸಾಲದ ಮೂಲಕ ರಾಜ್ಯ ಬಜೆಟ್‌ ಮಂಡಿಸಲಾಗಿದ್ದು, ಇದು ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದನ್ನು ತೋರಿಸುತ್ತದೆ. 2026-27ನೇ ಸಾಲಿನ ಬಜೆಟ್‌ ಖಾಲಿ ಚೊಂಬಿನಂತಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

 ವಿಧಾನಸಭೆ :  ಸಾಲದ ಮೂಲಕ ರಾಜ್ಯ ಬಜೆಟ್‌ ಮಂಡಿಸಲಾಗಿದ್ದು, ಇದು ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದನ್ನು ತೋರಿಸುತ್ತದೆ. 2026-27ನೇ ಸಾಲಿನ ಬಜೆಟ್‌ ಖಾಲಿ ಚೊಂಬಿನಂತಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಬಜೆಟ್‌ ಮೇಲಿನ ಚರ್ಚೆ ವೇಳೆ ಮಾತನಾಡಿದ ಆರ್‌.ಅಶೋಕ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1994ರಲ್ಲಿ ತಮ್ಮ ಮೊದಲ ಬಾರಿ ಮಂಡಿಸಿದ ಬಜೆಟ್‌ ಇದಕ್ಕಿಂತ ಉತ್ತಮವಾಗಿತ್ತು. ಇನ್ನು, 1995-96ರ ಬಜೆಟ್‌ನಲ್ಲೂ ಆಗಿನ ಕೇಂದ್ರ ಸರ್ಕಾರ ಮತ್ತು 10ನೇ ಹಣಕಾಸು ಆಯೋಗದ ವಿರುದ್ಧ ಆರೋಪಗಳನ್ನು ಮಾಡಿದ್ದರು. ಈಗಿನ ಬಜೆಟ್‌ನಲ್ಲೂ ಕೇಂದ್ರ ಸರ್ಕಾರದ ಮೇಲೆ ಆರೋಪಿಸುವ ಚಾಳಿ ಮುಂದುವರಿಸಿದ್ದಾರೆ. 2026-27ನೇ ಸಾಲಿನ ಬಜೆಟ್‌ ಅನ್ನು 11ಜಿ ಅಡಿ ಮಂಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಯಾವ ಕ್ಷೇತ್ರದಲ್ಲೂ ಉತ್ತಮ ಯೋಜನೆಗಳನ್ನೂ ಘೋಷಿಸಿಲ್ಲ. ಎಲ್ಲವನ್ನೂ ಸಾಲ ಪಡೆದು ಮಾಡುತ್ತೇವೆ ಎಂದು ಹೇಳಿದ್ದು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ ಎಂದರು.

2023ರ ಬಜೆಟ್‌ ಉತ್ತಮ:

2023ರಲ್ಲಿ ಬಿಜೆಪಿ ಸರ್ಕಾರ ಮಂಡಿಸಿದ ಅಂತಿಮ ಬಜೆಟ್‌ ಉಳಿತಾಯ ಬಜೆಟ್‌ ಆಗಿತ್ತು. ಅದಾದ ನಂತರ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ಗಳು ಕೊರತೆ ಬಜೆಟ್‌ಗಳಾಗಿವೆ. ಕಳೆದ ಮೂರು ವರ್ಷಗಳಲ್ಲಿ 54,660 ವಿತ್ತೀಯ ಕೊರತೆ ಕಾಣಿಸಿಕೊಂಡಿದೆ. ಕಾಂಗ್ರೆಸ್‌ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಣೆಗಾರಿಕೆ ಕಡಿಮೆ ಆಗುತ್ತಿಲ್ಲ:

ಸಾಲ ಮಾಡಿದರೂ ರಾಜ್ಯ ಸರ್ಕಾರದ ಮೇಲಿನ ಹೊಣೆಗಾರಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಗುತ್ತಿಗೆದಾರರಿಗೆ 38 ಸಾವಿರ ಕೋಟಿ ರು, ಎಸ್ಕಾಂಗಳಿಗೆ 12 ಸಾವಿರ ಕೋಟಿ ರು, ಹೊಸ ನೇಮಕಾತಿಗಳಿಗೆ 10 ಸಾವಿರ ಕೋಟಿ ರು, ಸಾರಿಗೆ ನಿಗಮಗಳಿಗೆ 4,800 ಕೋಟಿ ರು, ಸಾರಿಗೆ ಸಿಬ್ಬಂದಿಗೆ 2 ಸಾವಿರ ಕೋಟಿ ರು, ಗೃಹಲಕ್ಷ್ಮೀ ಯೋಜನೆಗೆ 5 ಸಾವಿರ ಕೋಟಿ ರು., ಅನಾಥ ಮಕ್ಕಳ ಮಾಸಾಶನ 73 ಕೋಟಿ ರು., ಭಿಕ್ಷುಕರ ಕಲ್ಯಾಣ ನಿಧಿಯ 23 ಸಾವಿರ ಕೋಟಿ ರು. ಸೇರಿ ಅಂದಾಜು 76 ಸಾವಿರ ಕೋಟಿ ರು. ಪಾವತಿಸಬೇಕಿದೆ. ಇಷ್ಟು ದೊಡ್ಡ ಪ್ರಮಾಣದ ಹೊಣೆಗಾರಿಕೆ ಇಟ್ಟುಕೊಂಡು, ಸರ್ಕಾರ ಮಾತ್ರ ಆರ್ಥಿಕ ಶಿಸ್ತು ಕಾಪಾಡಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ದಲಿತರ ಅನುದಾನ ಬೇರೆಡೆ ಬಳಕೆ:

ನಮ್ಮ ಸರ್ಕಾರ ದಲಿತ ಪರ ಸರ್ಕಾರ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಪ್ರಮುಖವಾಗಿ 2026-27ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಲ್ಲಿ ಗೃಹಲಕ್ಷ್ಮಿ ಯೋಜನೆಗೆ 8,296 ಕೋಟಿ ರು., ಶಕ್ತಿಗೆ 1,537 ಕೋಟಿ ರು., ಅನ್ನಭಾಗ್ಯಕ್ಕೆ 1,612 ಕೋಟಿ ರು., ಗೃಹ ಜ್ಯೋತಿಗೆ 2591 ಕೋಟಿ ರು. ಹಾಗೂ ಯುವನಿಧಿಗೆ 1 ಸಾವಿರ ಕೋಟಿ ರು. ಸೇರಿ ಒಟ್ಟಾರೆ 14,198 ಕೋಟಿ ರು.ಗಳನ್ನು ಬಳಸಿಕೊಳ್ಳುವುದಾಗಿ ಹೇಳಲಾಗಿದೆ ಎಂದರು.

ಕೇಂದ್ರದ್ದು ಖಾಲಿ ಡ್ರಮ್ಮಿನ ಬಜೆಟ್‌ : ಡಿಕೆಶಿ

ಆರ್‌. ಅಶೋಕ್‌ ಮಾತನಾಡುವ ರಾಜ್ಯ ಬಜೆಟ್‌ನ್ನು ಖಾಲಿ ಚೊಂಬಿಗೆ ಹೋಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೇಂದ್ರ ಸರ್ಕಾರವೂ ಸಾಲದ ಮೇಲೆಯೇ ಬಜೆಟ್‌ ಮಂಡಿಸಿದೆ. ಹಾಗಾದರೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿ ಬಜೆಟ್‌ ಖಾಲಿ ಡ್ರಮ್‌ ಬಜೆಟ್ಟಾ ಎಂದು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಉಪ ಚುನಾವಣೆ ರಿಸಲ್ಟ್‌ ಬಳಿಕ ಸಿಎಂ ಬದಲಾವಣೆ ಬಗ್ಗೆ ತಿಳಿದಿಲ್ಲ’
‘ಡಾ.ರಾಜ್‌ ಇದ್ದಿದ್ರೆ ಸರ್ಕಾರಿ ಭೂಮಿ ಬೇಡ ಅಂತಿದ್ರು’