ನರೇಗಲ್ಲ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸ್ ಹಾಗೂ ಸರ್ಕಾರ ಹುನ್ನಾರ ನಡೆಸುತ್ತಿರುವುದನ್ನು ಸಹಿಸುವುದಿಲ್ಲ, ಹಾವೇರಿ ಜಿಲ್ಲಾ ಎಸ್‌ಪಿ, ಹಾನಗಲ್ಲ ಸಿಪಿಐ, ಆಡೂರು ಪಿಎಸ್‌ಐ ಅವರನ್ನು ಕೂಡಲೇ ಅಮಾನತುಗೊಳಿಸಿ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಹಾನಗಲ್ಲ: ನರೇಗಲ್ಲ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸ್ ಹಾಗೂ ಸರ್ಕಾರ ಹುನ್ನಾರ ನಡೆಸುತ್ತಿರುವುದನ್ನು ಸಹಿಸುವುದಿಲ್ಲ, ಹಾವೇರಿ ಜಿಲ್ಲಾ ಎಸ್‌ಪಿ, ಹಾನಗಲ್ಲ ಸಿಪಿಐ, ಆಡೂರು ಪಿಎಸ್‌ಐ ಅವರನ್ನು ಕೂಡಲೇ ಅಮಾನತುಗೊಳಿಸಿ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಶುಕ್ರವಾರ ನರೇಗಲ್ಲ ಗ್ರಾಮಕ್ಕೆ ಭೇಟಿ ನೀಡಿ, ಹಲ್ಲೆ ಪ್ರಕರಣದಲ್ಲಿ ಗಾಯಗೊಂಡವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯನ್ನು ಎಸ್‌ಐಟಿ ರಚನೆ ಮಾಡಿ ಸಮಗ್ರ ತನಿಖೆಗೊಳಪಡಿಸಬೇಕು. ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಗಾಯಗೊಂಡವರು ಸೇರಿದಂತೆ ೨೬ ಜನರ ಮೇಲೆ ದೂರು ದಾಖಲಿಸಿಕೊಂಡ ಪೊಲೀಸರಿಗೆ ಹಿಂದೂಗಳನ್ನು ರಕ್ಷಿಸುವುದಕ್ಕಿಂತ ಸಮಸ್ಯೆಗೆ ಈಡು ಮಾಡುವ ಉದ್ದೇಶವಿದೆ. ಪೊಲೀಸರು ಯಾರನ್ನು ರಕ್ಷಿಸಲು ಹೊರಟಿದ್ದಾರೆ ಎಂಬುದೇ ತಿಳಿಯದಂತಾಗಿದೆ. ರಸ್ತೆ ಯಾರದೇ ಸ್ವಂತ ಆಸ್ತಿ ಅಲ್ಲ. ಅಲ್ಲಿ ಕಾರಹುಣ್ಣಿಮೆ ನಿಮಿತ್ತ ದನ ಓಡಿಸುವ ಸಂದರ್ಭದಲ್ಲಿ ಪಟಾಕಿ ಹಾರಿಸಿದರೆ ತಪ್ಪೇನು ಎಂದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಒಸಿ, ಇಸ್ಪೀಟ್, ಗಾಂಜಾ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಪರಸೆಂಟೇಜ್ ದಂಧೆ ಆರಂಭವಾಗಿದೆ. ನಾಲ್ಕರ ಕ್ರಾಸ್‌ನಲ್ಲಿ ನಡೆದ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳು ಬೇಲ್ ಸಿಕ್ಕ ಸಂದರ್ಭದಲ್ಲಿ ಮೆರವಣಿಗೆ ನಡೆಸಿದಾಗ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಇದು ಒಂದು ಸಮುದಾಯದ ತುಷ್ಟೀಕರಣಕ್ಕೆ ಸಾಕ್ಷಿ ಎಂದರು. ಈ ಪ್ರಕರಣವನ್ನು ಮುಚ್ಚಿ ಹಾಕಲು ಬಿಡವುದಿಲ್ಲ. ಇದನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುತ್ತೇವೆ. ಕಾನೂನು ಹೋರಾಟವನ್ನೂ ಕೈಗೊಳ್ಳುತ್ತೇವೆ. ಇದು ನರೇಗಲ್ಲಿನಲ್ಲಿ ಮೊದಲ ಪ್ರಕರಣವಲ್ಲ. ಇದೆಲ್ಲ ತಿಳಿದಿದ್ದರೂ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿರಲಿಲ್ಲ. ಆದರೆ ಪೊಲೀಸರು ಹಿಂದೂಗಳನ್ನೇ ಹೆದರಿಸುವ ತಂತ್ರಗಾರಿಕೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ, ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಸಿದ್ದಲಿಂಗಪ್ಪ ಕಮಡೊಳ್ಳಿ, ಕಲ್ಯಾಣಕುಮಾರ ಶೆಟ್ಟರ, ಭೋಜರಾಜ ಕರೂದಿ, ಮಾಲತೇಶ ಸೊಪ್ಪಿನ, ಕೃಷ್ಣ ಈಳಿಗೇರ, ಸತೀಶ ಕುರುಬರ, ಶೋಭಾ ನಿಸ್ಸೀಮಗೌಡರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.