ರೈತರ ಧ್ವನಿ ಅಡಗಿಸಲು ಮುಂದಾದ ಸರ್ಕಾರ

KannadaprabhaNewsNetwork |  
Published : Jul 18, 2024, 01:32 AM IST
ರೈತ | Kannada Prabha

ಸಾರಾಂಶ

ಅತಿವೃಷ್ಟಿ, ಅನಾವೃಷ್ಟಿಯಿಂದ ಸಾಲದ ಸುಳಿಗೆ ಸಿಲುಕಿರುವ ರೈತರ ಸಾಲಮನ್ನಾ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ರೈತರ ಆದಾಯ ದ್ವಿಗುಣ, ಬೆಂಬಲ ಬೆಲೆ, ಸ್ವಾಮಿನಾಥನ ಆಯೋಗ ವರದಿ ಜಾರಿಗೆ ಹೋರಾಟ ಮಾಡಿದರೂ ಸ್ಪಂದಿಸದ ಸರ್ಕಾರ ರೈತರ ಧ್ವನಿ ಅಡಗಿಸಲು ಮುಂದಾಗಿದೆ.

ಕಲಘಟಗಿ:

ನಮ್ಮನಾಳುವವರು ಅಧಿವೇಶನದಲ್ಲಿ ಭ್ರಷ್ಟಚಾರ, ಹಗರಣಗಳ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿದ್ದಾರೆ ವಿನಃ ರೈತರ ಸಮಸ್ಯೆ ಹಾಗೂ ರಾಜ್ಯದ ಅಭಿವೃದ್ಧಿ ಕುರಿತು ಧ್ವನಿ ಎತ್ತುತ್ತಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಕಿಡಿಕಾರಿದರು.

ಪಟ್ಟಣದ ಹನ್ನೆರಡು ಮಠದಲ್ಲಿ ಆಯೋಜಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಜೆಟ್‌ನಲ್ಲಿ ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ ₹ 26 ಸಾವಿರ ಕೋಟಿ ಮೀಸಲಿಟ್ಟರೆ, ರೈತರಿಗೆ ₹ 5 ಸಾವಿರ ಕೋಟಿ ಮಾತ್ರ ಮೀಸಲಿಟ್ಟಿದೆ. ಸರ್ಕಾರಿ ನೌಕರರ ಹೋರಾಟದ ಬೆನ್ನಲ್ಲೇ ಅವರ ವೇತನ ಪರಿಷ್ಕರಣೆ ಮಾಡಿದೆ. ಆದರೆ, ಹಲವು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಸಾಲದ ಸುಳಿಗೆ ಸಿಲುಕಿರುವ ರೈತರ ಸಾಲಮನ್ನಾ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ರೈತರ ಆದಾಯ ದ್ವಿಗುಣ, ಬೆಂಬಲ ಬೆಲೆ, ಸ್ವಾಮಿನಾಥನ ಆಯೋಗ ವರದಿ ಜಾರಿಗೆ ಹೋರಾಟ ಮಾಡಿದರೂ ಸ್ಪಂದಿಸದ ಸರ್ಕಾರ ರೈತರ ಧ್ವನಿ ಅಡಗಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜು.22ರಂದು ವಿಧಾನಸೌಧಕ್ಕೆ ತೆರಳಿ ರೈತರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪದಾಧಿಕಾರಿಗಳು ಹಾಗೂ ರೈತರು ಆಗಮಿಸಬೇಕೆಂದು ಮನವಿ ಮಾಡಿದರು.

ರೈತ ಮುಖಂಡ ಎಸ್.ವಿ. ತಡಸಮಠ ಮಾತನಾಡಿ, ದೇಶ ಅಭಿವೃದ್ಧಿ ಹೊಂದಲು ರೈತ ಸಮುದಾಯ ಹಾಗೂ ಕೈಗಾರಿಕೆ ಪ್ರದೇಶ ಬಲಿಷ್ಠವಾಗಿರಬೇಕು. ಆದರೆ, ಇಂದು ರೈತರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು.

ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಎತ್ತಿನಗುಡ್ಡ ಮಾತನಾಡಿ, ಎಲ್ಲ ರೈತ ಸಂಘಟನೆಗಳು ಒಂದಾಗಿ ಹೋರಾಟ ಮಾಡಿದರೆ ರೈತರ ಬೇಡಿಕೆ ಈಡೇರಿಸಲು ಸಾಧ್ಯ. ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಬಳಿಸಿಕೊಳ್ಳುವ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.

ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ರೈತ ಮುಖಂಡರಾದ ಉಳವಪ್ಪ ಬಳಿಗೇರ, ಸಿ.ಬಿ. ಹೊನ್ನಳ್ಳಿ, ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಿದ್ದಯ್ಯ ಕಟ್ನೂರಮಠ, ತಾಲೂಕಾಧ್ಯಕ್ಷ ಬಸವರಾಜ ರೊಟ್ಟಿ, ಮಹೇಶ ಬೆಳಗಾಂವಕರ, ಮುದಕಪ್ಪ ಕುರಿ, ಉಮೇಶ ಸೋಲಾರಗೊಪ್ಪ, ಮಂಜಯ್ಯ ಅಣ್ಣಿಗೇರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ವರ್ಷ ಏ.23, 24ಕ್ಕೆ ಸಿಇಟಿ ಪರೀಕ್ಷೆ ನಿಗದಿ
ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಧ್ಯೇಯ: ಅಪರ್ಣಾ ಕೊಳ್ಳ